ದಕ್ಷಿಣ ತ್ರಿಪುರಾ ಜಿಲ್ಲೆಯ ಸಬ್ರೂಮ್‌ನಲ್ಲಿ ಕಳ್ಳತನದ ಆರೋಪದ ಮೇಲೆ ಬಂಧಿತನಾಗಿದ್ದ 26 ವರ್ಷದ ಯುವಕನೊಬ್ಬ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಕಾರಣ ಆತನ ನಿವಾಸದಲ್ಲಿ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಸಂತ್ರಸ್ತನ ಕುಟುಂಬದವರು ನೀಡಿದ ಚಿತ್ರಹಿಂಸೆ ದೂರಿನ ಮೇರೆಗೆ ಮನುಬಜಾರ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾದ ಐವರು ಪೊಲೀಸ್ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಸಬ್ರೂಮ್ ಎಸ್‌ಡಿಪಿಒ ನಿತ್ಯಾನಂದ ಸರ್ಕಾರ್ ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಗೆ ಚಿತ್ರಹಿಂಸೆ ನೀಡಿ ಸಾವಿಗೆ ಕಾರಣರಾದ ಪೊಲೀಸ್ ಸಿಬ್ಬಂದಿಯನ್ನು ಶಿಕ್ಷಿಸಬೇಕೆಂದು ಒತ್ತಾಯಿಸಿ ಸಿಟ್ಟಿಗೆದ್ದ ಸ್ಥಳೀಯರು ಗುರುವಾರ ಪೊಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸಿದರು. ಅವರು ಮನುಬ್ಜಾರ್‌ನಲ್ಲಿ ಅಗರ್ತಲಾ-ಸಬ್ರೂಮ್ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿದರು.
ಕಳೆದ ಅಕ್ಟೋಬರ್ 13 ರಂದು ಗೋಡೌನ್‌ನಿಂದ ರಬ್ಬರ್ ಶೀಟ್‌ಗಳನ್ನು ಕದ್ದ ಆರೋಪದ ಮೇಲೆ ಸ್ಥಳೀಯ ಜನರು ಕಾಲದೇಪ ನಿವಾಸಿ ಬಾದಲ್ ತ್ರಿಪುರಾನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
“ಪಾನಮತ್ತನಾಗಿದ್ದ ಬಾದಲ್ ತ್ರಿಪುರಾನನ್ನು ಪೊಲೀಸರು ಬಂಧಿಸಿ ಮರುದಿನ (ಅಕ್ಟೋಬರ್ 14) ಬಿಡುಗಡೆ ಮಾಡಿದರು. ಅಕ್ಟೋಬರ್ 16 ರಂದು ಆತನ ತನ್ನ ಮನೆಯಲ್ಲಿ ಸಾವನ್ನಪ್ಪಿದ್ದಾನೆ. ಇಬ್ಬರು ಪೊಲೀಸರು ಮತ್ತು ಮೂವರು ವಿಶೇಷ ಪೊಲೀಸ್ ಅಧಿಕಾರಿಗಳ ಚಿತ್ರಹಿಂಸೆಯಿಂದ ಬಾದಲ್ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಮೃತನ ಕುಟುಂಬ ದೂರು ದಾಖಲಿಸಿದೆ” ಎಂದು ಎಸ್‌ಡಿಪಿಒ ತಿಳಿಸಿದ್ದಾರೆ.
ದೂರಿನ ಮೇರೆಗೆ ಐವರು ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದರು. ಬುಡಕಟ್ಟು ವ್ಯಕ್ತಿಯ ಶವದ ಮರಣೋತ್ತರ ಪರೀಕ್ಷೆಯನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ವೈದ್ಯರ ತಂಡ ನಡೆಸಲಿದೆ ಎಂದು ಸರ್ಕಾರ್ ಹೇಳಿದರು.
ಸಾವಿನ ಬಗ್ಗೆ ಜನರಲ್ಲಿ ಅಸಮಾಧಾನದ ಹಿನ್ನೆಲೆಯಲ್ಲಿ ಮನುಬಜಾರ್ ಪೊಲೀಸ್ ಠಾಣೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಹೇಳಿದರು.
ಇದನ್ನೂ ಓದಿ; ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರುಸ್ಥಾಪಿಸುವ ಅರ್ಜಿ ವಿಚಾರಣೆಗೆ ಒಪ್ಪಿದ ಸುಪ್ರೀಂಕೋರ್ಟ್


