ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಬಾಬು ಸಾಬ್ ಪಾಳ್ಯದಲ್ಲಿ ಆರು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿತ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ ಎಂದು ವರದಿಗಳು ಹೇಳಿವೆ.
ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಅವಶೇಷಗಳಡಿ ಸಿಲುಕಿ ಮೃತಪಟ್ಟಿದ್ದ ಅರ್ಮಾನ್, ಮೊಹಮ್ಮದ್ ಸಾಹಿಲ್, ತಿರುಪಾಲಿ, ಶಂಕರ್, ಸತ್ಯರಾಜ್ ಎಂಬ ಐವರು ಕಾರ್ಮಿಕರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.
Death toll increases to 5 in the under construction collapse incident. This morning so far one person Ayaaz rescued and one body recovered. #BuildingCollapse #Bengaluru pic.twitter.com/I2RMIiaiiW
— Reethu Rajpurohit (@reethu_journo) October 23, 2024
ಬದುಕಿ ಬಂದ ಅಯಾನ್ : ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕ ಅಯಾನ್ ಎಂಬವರನ್ನು 13 ಗಂಟೆಗಳ ಸತತ ಕಾರ್ಯಾಚರಣೆಯಲ್ಲಿ ರಕ್ಷಣೆ ಮಾಡಲಾಗಿದೆ. ಅವರನ್ನು ತಕ್ಷಣ ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಕಟ್ಟಡ ಕುಸಿಯುವಾಗ 21 ಕಾರ್ಮಿಕರು ಅದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಈಗಾಗಲೇ 13 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಈ ಪೈಕಿ 6 ಮಂದಿಗೆ ತೀವ್ರ ಗಾಯಗಳಾಗಿದ್ದು, ಓರ್ವ ಕಾರ್ಮಿಕನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನೂ ಕೆಲವರು ಅವೇಶಷಗಳಡಿಯಲ್ಲಿ ಸಿಲುಕಿರುವ ಶಂಕೆ ಇದ್ದು, ಒಂದು ಹ್ಯಾಮರ್, ಮೂರು ಜೆಸಿಬಿಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆಸಲಾಗಿದೆ.
ಹೆಣ್ಣೂರು ಸಮೀಪದ ಬಾಬಾ ಸಾಬ್ ಪಾಳ್ಯದಲ್ಲಿ 60-40 ಸೈಟ್ ಅಳತೆಯಲ್ಲಿ 6 ಅಂತಸ್ತಿನ ಅಪಾರ್ಟ್‌ಮೆಂಟ್ ನಿರ್ಮಿಸಲಾಗುತ್ತಿತ್ತು. ಬಿಹಾರ ಮತ್ತು ಉತ್ತರ ಕರ್ನಾಟಕ ಮೂಲದ 21ಮಂದಿ ಕಾರ್ಮಿಕರು ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದರು. ನಿನ್ನೆ (ಅ.22) ಸಂಜೆ ಭಾರೀ ಮಳೆಯ ನಡುವೆ ಕಟ್ಟಡ ಕುಸಿದು ಬಿದ್ದಿದೆ.
ಮಾಲೀಕನ ವಿರುದ್ದ ಎಫ್‌ಐಆರ್
ಮಲ್ಲೇಶ್ವರಂನಲ್ಲಿ ವಾಸವಿರುವ ಆಂಧ್ರ ಮೂಲದ ಮುನಿರಾಜು ರೆಡ್ಡಿ ಎಂಬುವರಿಗೆ ಸೇರಿದ ಕಟ್ಟಡ ಕುಸಿದು ಬಿದ್ದಿದೆ ಎಂಬ ಮಾಹಿತಿ ದೊರೆತಿದೆ. ಕಳಪೆ ಕಾಮಗಾರಿಯ ಕಾರಣ ಕಟ್ಟಡ ಬುಡಮೇಲಾಗಿ ಉರುಳಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಮಾಲೀಕ ಮುನಿರಾಜು ರೆಡ್ಡಿ ವಿರುದ್ದ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದುರಂತ ಸಂಭವಿಸುತ್ತಿದ್ದಂತೆ ಮುನಿರಾಜು ರೆಡ್ಡಿ, ಅವರ ಪುತ್ರ ಮೋಹನ್ ರೆಡ್ಡಿ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಯ ಮೇಸ್ತ್ರಿ ನಾಪತ್ತೆಯಾಗಿದ್ದಾರೆ. ಅವರಿಗೆ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಚನ್ನಪಟ್ಟಣ ಉಪಕದನ | ರೋಚಕ ಘಟ್ಟ ತಲುಪಿದ ಮೈತ್ರಿ ಜಟಾಪಟಿ : ಕಾದು ನೋಡುವ ತಂತ್ರದಲ್ಲಿ ಯೋಗೇಶ್ವರ್


