ಲೋಕಸಭಾ ಚುನಾವಣೆ ನಂತರ ತೆರವಾಗಿರುವ ಮೂರು ಕ್ಷೇತ್ರಗಳಾದ ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಲ್ಲಿ ನ.13ರಂದು ಉಪಚುನಾವಣೆ ಮತದಾನ ನಡೆಯಲಿದೆ. ಜೆಡಿಎಸ್-ಬಿಜೆಪಿ ಮೈತ್ರಿಯ ‘ಎನ್‌ಡಿಎ’ ಹಾಗೂ ಆಡಳಿತ ಪಕ್ಷವಾದ ಕಾಂಗ್ರೆಸ್ ಅಭ್ಯರ್ಥಿಗಳು ಮುಖಾಮುಖಿಯಾಗುವುದು ಖಚಿತವಾಗಿದೆ.
ಬಿಜೆಪಿ ಈಗಾಗಲೇ ಶಿಗ್ಗಾವಿಗೆ ಭರತ್ ಬೊಮ್ಮಾಯಿ ಹಾಗೂ ಸಂಡೂರಿಗೆ ಬಂಗಾರು ಹನುಮಂತ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ನಿರ್ಧಾರವನ್ನು ಮೈತ್ರಿ ಪಕ್ಷವಾದ ಜೆಡಿಎಸ್‌ಗೆ ಬಿಟ್ಟಿದೆ. ಸಂಡೂರು ಹೊರತುಪಡಿಸಿ ಉಳಿದ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಯಾರ ಹೆಸರನ್ನೂ ಇನ್ನೂ ಅಂತಿಮಗೊಳಿಸಿಲ್ಲ. ಚನ್ನಪಟ್ಟಣದಿಂದ ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಸಿಪಿ ಯೋಗೇಶ್ವರ್ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಶಿಗ್ಗಾವಿ ಅಭ್ಯರ್ಥಿ ಯಾರೆಂಬುದು ಮಾತ್ರ ಇನ್ನೂ ಗುಟ್ಟಗಿದೆ.
ಗಮನಿಸಬೇಕಾದ ಅಂಶವೆಂದರೆ, ಎರಡೂ ಪಕ್ಷಗಳ ಕುಟುಂಬ ರಾಜಕಾರಣಕ್ಕೆ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ. ಶಿಗ್ಗಾವಿಯಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಹಾಗೂ ಸಂಡೂರಿನಲ್ಲಿ ಸಂಸದ ಇ. ತುಕಾರಾಂ ಅವರ ಪತ್ನಿ ಅನ್ನಪೂರ್ಣ ಅವರಿಗೆ ಟಿಕೆಟ್ ನೀಡುವ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ. ಮತ್ತೊಂದೆಡೆ, ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಚನ್ನಪಟ್ಟಣದಲ್ಲಿ ಯಾರನ್ನು ಚುನಾವಣೆಗೆ ನಿಲ್ಲಿಸಬೇಕು ಎಂದು ದೇವೇಗೌಡರ ಕುಟುಂಬ ಗೊಂದಲಕ್ಕೆ ಒಳಗಾಗಿದೆ. ಜೆಡಿಎಸ್‌ನಿಂದ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ದೇವೇಗೌಡರ ಪುತ್ರಿ ಅನಸೂಯ (ಹಾಲಿ ಸಂಸದ ಮಂಜುನಾಥ್ ಪತ್ನಿ) ಅವರ ಹೆಸರು ಕೇಳಿಬರುತ್ತಿದೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ:
ಕಳೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರನ್ನು ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಸೋಲಿಸಿದ್ದಾರೆ. ಇದೀಗ ಅವರು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಕೇಂದ್ರ ಮಂತ್ರಿಯಾಗಿದ್ದು, ಕ್ಷೇತ್ರವನ್ನು ತನಗೆ ಬಿಟ್ಟುಕೊಡಬೇಕು ಎಂದು ಯೋಗೇಶ್ವರ್ ಬಿಜೆಪಿ ವರಿಷ್ಠರ ಮುಂದೆ ಪಟ್ಟುಹಿಡಿದಿದ್ದರು. ಆದರೆ, ಕುಮಾರಸ್ವಾಮಿ ಮಾತ್ರ ಚನ್ನಪಟ್ಟಣವನ್ನು ಬಿಜೆಪಿಗೆ ಬಿಟ್ಟುಕೊಡಲು ಒಪ್ಪಿಲ್ಲ ಎನ್ನಲಾಗಿದ್ದು, ಇಂದು ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದಾರೆ.
ಚನ್ನಪಟ್ಟಣ ಅಭ್ಯರ್ಥಿಯನ್ನು ಕಾಂಗ್ರೆಸ್ ಅಧಿಕೃತವಾಗಿ ಘೋಷಣೆ ಮಾಡಿದೇ ಇದ್ದರೂ, ಯೋಗೇಶ್ವರ್ ಜೊತೆಗಿನ ಮಾತುಕತೆ ಕಾರಣಕ್ಕೆ ಬಿಳಂಬ ಮಾಡಿತ್ತು ಎನ್ನಲಾಗಿದೆ. ನಾಳೆ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದು ಖಚಿತವಾಗಿದೆ. ಯೋಗೇಶ್ವರ್ ಕಾಂಗ್ರೆಸ್ ಸೇರುವ ಮೂಲಕ, ಮಗನ (ನಿಖಿಲ್) ಗೆಲುವಿನ ಕನಸು ಕಾಣುತ್ತಿದ್ದ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಆತಂಕ ಮೂಡಿಸಿದ್ದಾರೆ.
ಕೇಂದ್ರ ಸಚಿವರಾದ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕುಮಾರಸ್ವಾಮಿ. ಎರಡು ಚುನಾವಣೆಗಳಲ್ಲಿ ಸೋಲು ಕಂಡಿರುವ ಪುತ್ರ ನಿಖಿಲ್ ಕುಮಾರಸ್ವಾಮಿಯವರನ್ನು ಮೂರನೇ ಬಾರಿಗಾದರೂ ಗೆಲ್ಲಿಸಿಕೊಳ್ಳುವ ವಿಶ್ವಾಸದಲ್ಲಿದ್ದರು. ಇದೀಗ ಯೋಗೇಶ್ವರ್ ನಡೆಯಿಂದ ಕುಮಾರಸ್ವಾಮಿ ಆಸೆಗೆ ಕೊಂಚ ಹಿನ್ನಡೆಯಾಗಿದೆ. ಜೆಡಿಎಸ್‌ಗೆ ಅಭ್ಯರ್ಥಿ ಬದಲಾವಣೆ ಅನಿವಾರ್ಯವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಟಿಕೆಟ್ ಬೇಕೆಬೇಕು ಎಂದು ಹಠ ಹಿಡಿದಿದ್ದ ಯೋಗೇಶ್ವರ್ ಅವರನ್ನೇ ಜೆಡಿಎಸ್ ಚಿಹ್ನೆಯಡಿ ಕಣಕ್ಕಿಳಿಸಲು ಕುಮಾರಸ್ವಾಮಿ ತೀರ್ಮಾನಿಸಿದ್ದರು ಎನ್ನಲಾಗಿದ್ದು, ದಳಪತಿಗಳ ಆಫರ್ ಅನ್ನು ಯೋಗೇಶ್ವರ್ ತಿರಸ್ಕರಿಸಿರುವುದು ಈಗ ಖಚಿತವಾಗಿದೆ.
ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್?
ಸೋಲಿನ ಭಯದಲ್ಲಿರುವ ಕುಮಾರಸ್ವಾಮಿ, ಸಾಮಾನ್ಯ ಕಾರ್ಯಕರ್ತರೊಬ್ಬರನ್ನು ಕಣಕ್ಕಿಳಿಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಚನ್ನಪಟ್ಟಣ ತಾಲೂಕು ಜೆಡಿಎಸ್ ಅಧ್ಯಕ್ಷ ಮುತ್ತು ಅವರ ಹೆಸರು ಮಂಚೂಣಿಯಲ್ಲಿ ಕೇಳಿಬರುತ್ತಿದೆ. ಆ ಮೂಲಕ, ಜೆಡಿಎಸ್ ಕೇವಲ ಕುಟುಂಬದ ಪಕ್ಷವಾಗಿಲ್ಲ. ಕಾರ್ಯಕರ್ತರಿಗೂ ಟಿಕೆಟ್ ನೀಡುತ್ತದೆ ಎಂಬ ಸಂದೇಶ ರವಾನಿಸಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಚನ್ನಪಟ್ಟಣದ ಕ್ಷೇತ್ರದ ಟಿಕೆಟ್ ಕಾರಣಕ್ಕಾಗಿಯೇ ರಾಷ್ಟ್ರೀಯ ಅಧ್ಯಕ್ಷ ಎಚ್‌ಡಿ ದೇವೇಗೌಡರ ನೇತೃತ್ವದಲ್ಲಿ ಸಭೆ ಕೂಡ ನಡೆಸಿದ್ದಾರೆ.
ಶಿಗ್ಗಾವಿ ವಿಧಾನಸಭಾ ಕ್ಷೇತ್ರ:
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಕಾರ್ಯಕರ್ತರಿಂದ ವಿರೋಧ ಎದುರಿಸುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಭರತ್ ಬೊಮ್ಮಾಯಿ ಹೆಸರನ್ನು ಅಂತಿಮಗೊಳಿಸಿದೆ. ಇದೀಗ ಬೊಮ್ಮಾಯಿ ಕುಟುಂಬಕ್ಕೆ ಶಿಗ್ಗಾವಿ ಬಿಜೆಪಿಯಲ್ಲಿ ಬಂಡಾಯ ಶುರುವಾಗಿದೆ. ಆದರೆ, ಕಾಂಗ್ರೆಸ್ ಮಾತ್ರ ಶಿಗ್ಗಾವಿಗೆ ಇನ್ನೂ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ.
ಶಿಗ್ಗಾವಿ ಕಾಂಗ್ರೆಸ್ ಟಿಕೆಟ್‌ಗೆ ಮುಸ್ಲಿಂ ಹಾಗೂ ಲಿಂಗಾಯತರ ಅಭ್ಯರ್ಥಿಗಳ ನಡುವೆ ಪೈಪೋಟಿ ಇದೆ. ಕಳೆದ 5 ಬಾರಿ ಟಿಕೆಟ್ ಪಡೆದು ಸೋಲು ಕಂಡಿರುವ ಮುಸ್ಲಿಂ ಸಮುದಾಯಕ್ಕೆ ಈ ಬಾರಿ ಟಿಕೆಟ್ ಬೇಡ ಎಂದು ವರಿಷ್ಠರು ನಿರ್ಧರಿಸಿದ್ದು, ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ‘ಪಂಚಮ ಸಾಲಿ’ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಲಿದೆ ಎಂಬ ಮಾತು ಕೇಳಿಬರುತ್ತಿದೆ.
ಕ್ಷೇತ್ರದ ಅಲ್ಪಸಂಖ್ಯಾತ ನಾಯಕರನ್ನು ಮನವೊಲಿಸಿ, ಪಂಚಮಸಾಲಿ ಅಭ್ಯರ್ಥಿಗೆ ಮಣೆ ಹಾಳುವುದಕ್ಕೆ ಮಾತುಕತೆ ನಡೆದಿದೆ ಎನ್ನಲಾಗಿದೆ.
ಕ್ಷೇತ್ರದ ಮೇಲೆ ವಿನಯ್ ಕುಲಕರ್ಣಿ ಕಣ್ಣು!
ಕಾಂಗ್ರೆಸ್ ಹೈಕಮಾಂಡ್, ಪಂಚಮಸಾಲಿ ಸಮಾಜಕ್ಕೆ ಟಿಕೆಟ್ ನೀಡಬೇಕು ಎಂಬ ನಿರ್ಧಾರಕ್ಕೆ ಬಂದರೆ, ವಿನಯ ಕುಲಕರ್ಣಿ ಅವರ ಪತ್ನಿ ಅಥವಾ ಮಗಳು ಅಭ್ಯರ್ಥಿಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ವಿನಯ್ ಪುತ್ರಿ ವೈಶಾಲಿ ಕುಲಕರ್ಣಿ, ಇದೇ ಸಮುದಾಯದ ಸೋಮಣ್ಣ ಬೇವಿನಮರದ್ ಹಾಗೂ ರಾಜನ್ ಕುನ್ನೂರು ಅವರ ಹೆಸರುಹೈಕಮಾಂಡ್ ಮುಂದಿರುವ ಹೆಸರುಗಳಾಗಿವೆ. ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ಸಂಪ್ರದಾಯ ಮುಂದುವರಿದರೆ ಯೂಸೂಫ್ ಪಠಾಣ್ ಅಥವಾ ಅಜ್ಜಂ ಪೀರ್ ಖಾದ್ರಿ ಪೈಕಿ ಒಬ್ಬರಿಗೆ ಅವಕಾಶ ಸಿಗಹಬುದು ಎನ್ನಲಾಗಿದೆ.
ಕೆಆರ್‌ಎಸ್‌ನಿಂದ ರವಿಕೃಷ್ಣಾ ರೆಡ್ಡಿ ಕಣಕ್ಕೆ
ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷದ ಅಭ್ಯರ್ಥಿಯಾಗಿ ರವಿಕೃಷ್ಣಾರೆಡ್ಡಿಯವರು ಅಕ್ಟೋಬರ್ 21ರ ಸೋಮವಾರ ಶಿಗ್ಗಾವಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ, “ಈ ಚುನಾವಣಾ ಕಾರ್ಯದಲ್ಲಿ ಕ್ಷೇತ್ರದ ಜನರ ಸಹಭಾಗಿತ್ವ ಮತ್ತು ಬೆಂಬಲ ಅತ್ಯವಶ್ಯಕವಾಗಿದೆ. ಅದನ್ನು ಪಡೆಯುವ ವಿಶ್ವಾಸವಿದೆ” ಎಂದು ಹೇಳಿದರು.
ನಾಮಪತ್ರ ಸಲ್ಲಿಸುವ ಮುನ್ನ ಸವಣೂರಿನಲ್ಲಿ ಪಾದಯಾತ್ರೆ ನಡೆಸಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಗೂ ಗೋಕಾಕ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಶಿಗ್ಗಾವಿ ಪಟ್ಟಣಕ್ಕೆ ಆಗಮಿಸಿ, ಚನ್ನಮ್ಮ ಪ್ರತಿಮೆಗೆ ಗೌರವ ಸಲ್ಲಿಸಿ ಮಾತನಾಡಿ, ಶಿಗ್ಗಾವಿ-ಸವಣೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡೇ ತೀರುತ್ತೇವೆಂದು ಶಪಥ ಮಾಡಿದರು.
“ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದಲ್ಲಿ ನೂರಾರು ಸಮಸ್ಯೆಗಳಿದ್ದು, ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರವಾಗಿತ್ತೆಂದು ಹೇಳಲು ನಾಚಿಕೆಯಾಗುತ್ತದೆ. ಆ ಮಟ್ಟದಲ್ಲಿ ಸಮಸ್ಯೆಗಳಿದ್ದು, ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು ಎಡತಾಕುತ್ತವೆ. ಜನರು ಸಮಸ್ಯೆಗಳಿಂದ ಬಳಲುತ್ತಿದ್ದರೆ, ಕುಟುಂಬ ರಾಜಕಾರಣದ ಅತಿರೇಕದಲ್ಲಿ ಇತರ ರಾಜಕೀಯ ಪಕ್ಷಗಳು ತೊಡಗಿಕೊಂಡಿವೆ” ಎಂದು ರವಿಕೃಷ್ಣಾರೆಡ್ಡಿ ಹೇಳಿದರು.
ಸಂಡೂರು ವಿಧಾನಸಭಾ ಕ್ಷೇತ್ರ:
ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿವೆ. ‘ಕೈ’ ಅಭ್ಯರ್ಥಿಯಾಗಿ ಮಾಜಿ ಶಾಸಕ, ಹಾಲಿ ಸಂಸದ ಇ. ತುಕರಾಂ ಪತ್ನಿ ಅನ್ನಪೂರ್ಣ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.
ಸಂತೋಷ್ ಲಾಡ್ ಕುಟುಂಬಕ್ಕೆ ಆಪ್ತರಾಗಿರುವ ಇ. ತುಕರಾಂ ಕ್ಷೇತ್ರದಲ್ಲಿ ಸಾಕಷ್ಟು ಹಿಡಿತ ಇಟ್ಟುಕೊಂಡಿದ್ದು, ನಿರಂತರವಾಗಿ ಗೆಲ್ಲುತ್ತಾ ಬಂದಿದ್ದಾರೆ. ಈ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ವರಿಷ್ಠರ ಸೂಚನೆ ಮೇರೆಗೆ ಸಂಸದ ಸ್ಥಾನಕ್ಕೆ ಸ್ಪರ್ಧಿಸಿ ಗೆದ್ದಿರುವ ಅವರು, ಉಪ ಚುನಾವಣೆಯಲ್ಲಿ ಪತ್ನಿಗೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
“ಸಂಡೂರು ಕ್ಷೇತ್ರದಲ್ಲಿ ಸಂಸದ ತುಕಾರಾಂ ಪತ್ನಿ ಅನ್ನಪೂರ್ಣ ಅವರಿಗೆ ಟಿಕೆಟ್ ಕೊಡುತ್ತೇವೆ. ಉಳಿದ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿ ಫೈನಲ್ ಮಾಡುತ್ತೇವೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿದ್ದಾರೆ.
ಸಂಡೂರಿನ ಬಿಜೆಪಿ ಅಭ್ಯರ್ಥಿಯಾಗಿ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ, ಗಾಲಿ ಜನಾರ್ಧನರೆಡ್ಡಿ ಆಪ್ತ ಬಂಗಾರು ಹನುಮಂತ ಅವರಿಗೆ ಟಿಕೆಟ್ ಘೋಷಿಸಲಾಗಿದೆ.
ಈ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿದ್ದ ಬಂಗಾರು ಈಗ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಕಳೆದ 2018ರ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಇಚ್ಛಿಸಿದ್ದ ಇವರಿಗೆ ಟಿಕೆಟ್ ಕೈತಪ್ಪಿತ್ತು. ಆಗ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು 7,191 ಮತಗಳನ್ನು ಪಡೆದಿದ್ದರು. ರೆಡ್ಡಿ ಮಧ್ಯಪ್ರವೇಶದ ಬಳಿಕ ಬಿಜೆಪಿ ಹೈಕಮಾಂಡ್ ಅವರ ಹೆಸರನ್ನು ಅಂತಿಮಗೊಳಿಸಿದೆ.
ಇದನ್ನೂ ಓದಿ; ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟ ಸಿಪಿ ಯೋಗೇಶ್ವರ್; ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆ


