ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಕ್ಟೋಬರ್ 26ರಂದು ಕಂಬಳ ನಡೆಸುತ್ತಿಲ್ಲ. ಬೇರೆಲ್ಲೂ ಕಂಬಳ ನಡೆಸಲು ಸರ್ಕಾರದ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿಲ್ಲ ಎಂದು ಬೆಂಗಳೂರು ಕಂಬಳ ಸಮಿತಿ ಹೈಕೋರ್ಟ್‌ಗೆ ತಿಳಿಸಿದೆ. ಇದನ್ನು ಪರಿಗಣಿಸಿರುವ ನ್ಯಾಯಾಲಯ ಅರ್ಜಿ ವಿಚಾರಣೆ ಮುಂದೂಡಿದೆ.
ಬೆಂಗಳೂರು ಕಂಬಳ ಸಮಿತಿಗೆ ಸ್ಪರ್ಧೆ ಆಯೋಜಿಸಲು ಅನುಮತಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಪ್ರಾಣಿ ದಯಾ ಸಂಘ ಪೆಟಾ ಸಲ್ಲಿಸಿರುವ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.
ಬೆಂಗಳೂರು ಕಂಬಳ ಸಮಿತಿಯನ್ನು ಪ್ರತಿನಿಧಿಸಿದ್ದ ವಕೀಲ ವಿನೋದ್ ಕುಮಾರ್ ಅವರು, ಅಕ್ಟೋಬರ್ 26ರಂದು ಕಂಬಳ ಸ್ಪರ್ಧೆ ಆಯೋಜಿಸುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಅರ್ಜಿದಾರ ಪೆಟಾ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ, ಕಂಬಳ ಸ್ಪರ್ಧೆ ನಡೆಸುವಾಗ ಅನುಮತಿ ನೀಡಲಾಗುತ್ತಿದೆ ಎಂಬ ವಿಚಾರವನ್ನು ನಮಗೆ ತಿಳಿಸಬೇಕು. ಆಗ ನಾವು ನ್ಯಾಯಾಲಯದ ಮುಂದೆ ಬರುತ್ತೇವೆ. ನ.9ರಂದು ದಕ್ಷಿಣ ಕನ್ನಡದ ಪಿಲಿಕುಳದ ಪ್ರಾಣಿ ಸಂಗ್ರಹಾಲಯದ ಪಕ್ಕದಲ್ಲಿ ಕಂಬಳ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಸಂಬಂಧ ಪ್ರಾಣಿ ಸಂಗ್ರಹಾಲಯದ ನಿರ್ದೇಶಕರು ಜಿಲ್ಲಾಧಿಕಾರಿಗೆ ಪತ್ರ ಬರೆದು ಸ್ಪರ್ಧೆಯ ಸಂದರ್ಭದಲ್ಲಿನ ಕೂಗಾಟದಿಂದ ಪ್ರಾಣಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಹಾಜರಾಗಿ, ಕಳೆದ ವರ್ಷ ಬೆಂಗಳೂರು ಕಂಬಳಕ್ಕೆ ಕಾನೂನು ಪ್ರಕಾರ ಅನುಮತಿಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನ್ಯಾಯಾಲಯದ ಮುಂದೆ ಇಡಲಾಗುವುದು. ಪೆಟಾ ಆಕ್ಷೇಪ ಇರುವುದು ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತಿದೆ ಎಂದಾಗಿದೆ. ಈಗ ಕಂಬಳವನ್ನು ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಮಾತ್ರ ನಡೆಸಬೇಕೆ? ಎಂಬ ಪ್ರಶ್ನೆ ನ್ಯಾಯಾಲಯದ ಮುಂದಿದೆ. ಕಂಬಳ ಸ್ಪರ್ಧೆಯು ಕರ್ನಾಟಕದ ಸಂಸ್ಕೃತಿಗೆ ಸಂಬಂಧಿಸಿದ್ದು. ಇದನ್ನು ಕರ್ನಾಟಕ ಮಾತ್ರವಲ್ಲದೇ ದೇಶದಾದ್ಯಂತ ಕೊಂಡೊಯ್ಯುವ ಸಂದರ್ಭ ಬಂದಿದೆ. ಇಲ್ಲಿ ಪ್ರಾಣಿಗಳಿಗೆ ಹಿಂಸೆಯಾಗುತ್ತಿದೆಯೇ? ಎಂಬ ಪ್ರಶ್ನೆ ಇದೆ. ಕುದುರೆ ರೇಸ್ ನಡೆದಾಗ ಕುದುರೆಗಳನ್ನು ಬೇರೆ ದೇಶಗಳಿಂದ ಆಮದು/ರಫ್ತು ಮಾಡಲಾಗುತ್ತದೆ. ಬೇರೆ ರಾಜ್ಯಗಳಿಗೂ ಅವುಗಳನ್ನು ಸಾಗಿಸಲಾಗುತ್ತದೆ. ಯಾವುದೇ ನಿರ್ಧಾರ ಕೈಗೊಂಡರೂ ಪೀಠಕ್ಕೆ ತಿಳಿಸಲಾಗುವುದು ಎಂದಿದ್ದಾರೆ.
ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿದ ನ್ಯಾಯಾಲಯವು ಅರ್ಜಿ ವಿಚಾರಣೆಯನ್ನು ನವೆಂಬರ್ 5ಕ್ಕೆ ಮುಂದೂಡಿದೆ.
ಇದನ್ನೂ ಓದಿ : ಉಪಚುನಾವಣೆ | ಚನ್ನಪಟ್ಟಣ, ಸಂಡೂರಿಗೆ ಅಭ್ಯರ್ಥಿ ಘೋಷಿಸಿದ ಕಾಂಗ್ರೆಸ್ : ಶಿಗ್ಗಾವಿಯಲ್ಲಿ ಹೊಸ ಲೆಕ್ಕಾಚಾರ


