ಕೊಪ್ಪಳ ಜಿಲ್ಲೆಯ ಗಂಗಾವತಿಯ ಮರಕುಂಬಿ ಗ್ರಾಮದ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣದಲ್ಲಿ ನ್ಯಾಯಾಲಯ ಅಪರಾಧಿಗಳಿಗೆ ಗುರುವಾರ ಶಿಕ್ಷೆ ಘೋಷಿಸಿದೆ. ಪ್ರಕರಣದಲ್ಲಿ 101 ಜನರನ್ನು ಅಪರಾಧಿಗಳು ಎಂದು ನ್ಯಾಯಾಲಯ ಹೇಳಿದ್ದು, ಅದರಲ್ಲಿ 98 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಉಳಿದ ಮೂವರಿಗೆ ಐದು ವರ್ಷ ಜೈಲು ಶಿಕ್ಷೆಯನ್ನು ನ್ಯಾಯಾಲಯ ಘೋಷಿಸಿದೆ. ಮರಕುಂಬಿ ದಲಿತ ದೌರ್ಜನ್ಯ
ಮರಕುಂಬಿ ಗ್ರಾಮದಲ್ಲಿ ಸುಮಾರು 9 ವರ್ಷಗಳ ಹಿಂದೆ ನಡೆದ ಅಸ್ಪೃಶ್ಯತೆ ಆಚರಣೆ ಮತ್ತು ದಲಿತರ ಓಣಿಗೆ ನುಗ್ಗಿ ಗುಡಿಸಲುಗಳಿಗೆ ಬೆಂಕಿ ಹಚ್ಚಿ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 101 ಮಂದಿಯ ವಿರುದ್ದದ ಆರೋಪ ಸಾಬೀತಾಗಿದೆ ಎಂದು ಸೋಮವಾರ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಗುರುವಾರ ಪ್ರಕಟಿಸುವುದಾಗಿ ಹೇಳಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ್ದ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ. ಚಂದ್ರಶೇಖರ ಅವರು 101 ಆರೋಪಿಗಳ ವಿರುದ್ಧದ ಆರೋಪ ಸಾಬೀತಾಗಿರುವುದಾಗಿ ಸೋಮವಾರ ತೀರ್ಪು ನೀಡಿದ್ದರು.
ಮರುಕುಂಬಿಯ ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದ ಈ ಘಟನೆಯಿಂದ 2014ರಲ್ಲಿ ರಾಜ್ಯವೆ ಬೆಚ್ಚಿಬಿದ್ದಿತ್ತು. ಗ್ರಾಮದ ಹೋಟೆಲ್‌ಗಳು ಮತ್ತು ಕ್ಷೌರಿಕ ಅಂಗಡಿಗಳಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಿದ್ದಕ್ಕೆ ಸಂತ್ರಸ್ತರು ಮತ್ತು ಆರೋಪಿಗಳ ನಡುವೆ ಘರ್ಷಣೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಮರುಕುಂಬಿಗೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದರು. ಮರಕುಂಬಿ ದಲಿತ ದೌರ್ಜನ್ಯ
ಇದೇ ಸಿಟ್ಟಿನಿಂದ ಸರ್ವಣೀಯರು ರಾತ್ರಿ ಸಮಯದಲ್ಲಿ ದಲಿತರ ಕೇರಿಗೆ ನುಗ್ಗಿ ದಲಿತರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದಲ್ಲದೆ, ದಲಿತರ ಮೇಲೆ ಹಲ್ಲೆ ನಡೆಸಿದ್ದರು. ಈ ವಿಚಾರ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಘಟನೆಯನ್ನು ವಿರೋಧಿಸಿ ಎಡ ಪಕ್ಷಗಳು ಸೇರಿದಂತೆ ಹಲವು ದಲಿತ ಮುಖಂಡರು ಕೊಪ್ಪಳ ಜಿಲ್ಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದರು. ಆರಂಭದಲ್ಲಿ 117 ಮಂದಿಯ ವಿರುದ್ಧ ಪ್ರಕರಣದ ದಾಖಲಿಸಲಾಗಿತ್ತು. ಆದರೆ ಅವರಲ್ಲಿ ಕೆಲವರು ಸಾವನ್ನಪ್ಪಿದ್ದರೆ, ಸೋಮವಾರ ನ್ಯಾಯಾಲಯ ತೀರ್ಪು ಪ್ರಕಟಿಸಿದಾಗ 100 ಆರೋಪಿಗಳನ್ನು ಬಂಧಿಸಲಾಗಿದೆ.
ಓರ್ವ ಆರೋಪಿ ಇನ್ನೂ ನಾಪತ್ತೆಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. 101 ಮಂದಿಗೆ ಏಕಕಾಲದಲ್ಲಿ ಶಿಕ್ಷೆ ವಿಧಿಸುತ್ತಿರುವುದು ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲಾಗಿದೆ.
ಈ ಘಟನೆಯ ನಂತರ ಮೂರು ತಿಂಗಳ ಕಾಲ ಮರುಕುಂಬಿ ಗ್ರಾಮದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ದೌರ್ಜನ್ಯವನ್ನು ವಿರೋಧಿಸುವಲ್ಲಿ ನಾಯಕತ್ವ ವಹಿಸಿದ್ದ ದಲಿತ ಮುಖಂಡ ವೀರೇಶ ಮರುಕುಂಬಿ 2014ರಲ್ಲಿ ಕೊಪ್ಪಳ ರೈಲು ನಿಲ್ದಾಣದ ಬಳಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಇದನ್ನೂ ಓದಿ: ದಲಿತ ವಿರುದ್ಧ ನಡೆಯುವ ದೌರ್ಜನ್ಯಗಳಿಗಾಗಿ ನಾನುಗೌರಿ.ಕಾಂ ನ ದಲಿತ್ ಫೈಲ್ಸ್ ವಿಭಾಗದಲ್ಲಿ ಓದಿ


