ಇತ್ತೀಚೆಗೆ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಹಾಗೂ ಎನ್‌ಸಿಪಿ (ಅಜಿತ್ ಪವಾರ್ ಬಣ) ನಾಯಕ ಬಾಬಾ ಸಿದ್ದೀಕ್ (ಬಾಬಾ ಝಿಯಾವುದ್ದೀನ್ ಸಿದ್ದೀಕ್) ಅವರ ಪುತ್ರ ಝೀಶಾನ್ ಸಿದ್ದೀಕ್ ಇಂದು (ಅ.25) ಬೆಳಿಗ್ಗೆ ಎನ್‌ಸಿಪಿ ಸೇರ್ಪಡೆಯಾಗಿದ್ದಾರೆ.
ಪಕ್ಷ ಸೇರ್ಪಡೆ ಬೆನ್ನಲ್ಲೇ ಝೀಶಾನ್ ಅವರನ್ನು ವಿಧಾನಸಭೆ ಚುನಾವಣೆಗೆ ಮುಂಬೈನ ಬಾಂದ್ರಾ ಪೂರ್ವ ಕ್ಷೇತ್ರದ ಅಭ್ಯರ್ಥಿಯಾಗಿ ಎನ್‌ಸಿಪಿ ಘೋಷಣೆ ಮಾಡಿದೆ.
ಎನ್‌ಸಿಪಿ ಸೇರ್ಪಡೆ ಬಳಿಕ ಮಾತನಾಡಿದ ಝೀಶಾನ್, “ಕಾಂಗ್ರೆಸ್ ಸೇರಿದಂತೆ ಮಹಾ ವಿಕಾಸ್ ಅಘಾಡಿಯ ನಾಯಕರು ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದರು. ಆದರೆ ಅವರು ಮೋಸ ಮಾಡುವ ಉದ್ದೇಶ ಹೊಂದಿದ್ದರು. ಕಾಂಗ್ರೆಸ್ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ. ಅವರು ಯಾವಾಗಲೂ ಶಿವಸೇನೆ (ಯುಬಿಟಿ) ಒತ್ತಡಕ್ಕೆ ಒಳಗಾಗುತ್ತಾರೆ” ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮಾಜಿ ಶಾಸಕ ಝೀಶಾನ್ : ಝೀಶಾನ್ ಅವರು 2019ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು. ಆದರೆ, ನಂತರ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಅರೋಪದ ಮೇಲೆ ಕಾಂಗ್ರೆಸ್ ಅವರನ್ನು ಉಚ್ಚಾಟಿಸಿತ್ತು. ಈ ಚುನಾವಣೆಯಲ್ಲಿ ಝೀಶಾನ್ ಅವರು ಶಿವಸೇನೆ (ಯುಬಿಟಿ) ಅಭ್ಯರ್ಥಿ ವರುಣ್ ಸರ್ದೇಸಾಯಿ ವಿರುದ್ಧ ಸ್ಪರ್ಧಿಸಲಿದ್ದಾರೆ.
ಬಾಬಾ ಸಿದ್ದೀಕ್ ಹತ್ಯೆ : ಝೀಶಾನ್ ಸಿದ್ದೀಕ್ ಅವರ ತಂದೆ, ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಬಾಬಾ ಸಿದ್ದೀಕ್ ಅವರನ್ನು, ದಸರಾ ಹಬ್ಬದ ಅಂಗವಾಗಿ ಝೀಶಾನ್ ಸಿದ್ದೀಕ್ ಕಚೇರಿ ಬಳಿ ಪಠಾಕಿ ಸಿಡಿಸುತ್ತಿದ್ದ ವೇಳೆ ಕಳೆದ ಅಕ್ಟೋಬರ್ 12ರಂದು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಗ್ಯಾಂಗ್‌ಸ್ಟರ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯನೊಬ್ಬ ಬಾಬಾ ಸಿದ್ದೀಕ್ ಅವರ ಹತ್ಯೆಯ ಹೊಣೆಗಾರಿಕೆ ಹೊತ್ತುಕೊಂಡಿದ್ದಾನೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರೊಂದಿಗಿನ ನಿಕಟ ಸಂಬಂಧ ಕಾರಣಕ್ಕೆ ಬಾಬಾ ಸಿದ್ದೀಕ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗ್ತಿದೆ.
ಹಿರಿಯ ರಾಜಕಾರಣಿ ಬಾಬಾ ಸಿದ್ದೀಕ್ : ಬಾಬಾ ಸಿದ್ದೀಕ್ ಮುಂಬೈನ ಬಾಂದ್ರಾ ಪೂರ್ವ ಕ್ಷೇತ್ರದಿಂದ ಸತತ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2004 ಮತ್ತು 2008ರ ನಡುವೆ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶಮುಖ್ ನೇತೃತ್ವದ ಮಹಾರಾಷ್ಟ್ರ ರಾಜ್ಯ ಸರ್ಕಾರದಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಕಾರ್ಮಿಕ ಇಲಾಖೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
ಸಿದ್ದೀಕ್ ಅವರು ಈ ಹಿಂದೆ 1992 ಮತ್ತು 1997 ರ ನಡುವೆ ಸತತ ಎರಡು ಅವಧಿಗೆ ಮುಂಬೈ ಮುನ್ಸಿಪಲ್ ಕಾರ್ಪೊರೇಟರ್ ಆಗಿ ಸೇವೆ ಸಲ್ಲಿಸಿದ್ದರು. ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಮುಂಬೈ ಪ್ರಾದೇಶಿಕ ಕಾಂಗ್ರೆಸ್ ಸಮಿತಿ ಮತ್ತು ಸಂಸದೀಯ ಮಂಡಳಿಯ ಅಧ್ಯಕ್ಷರು ಮತ್ತು ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 8 ಫೆಬ್ರವರಿ 2024ರಂದು, ಅವರು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ನಂತರ 12 ಫೆಬ್ರವರಿ 2024 ರಂದು ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ (ಎನ್‌ಸಿಪಿ) ಸೇರಿದರು.
ಇದನ್ನೂ ಓದಿ : ಮಹಾರಾಷ್ಟ್ರ ಚುನಾವಣೆ: 48 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ ಕಾಂಗ್ರೆಸ್, 25 ಹಾಲಿ ಶಾಸಕರಿಗೂ ಟಿಕೆಟ್!


