ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ಜೈಲಿನಲ್ಲಿರುವಾಗಲೇ ಸಂದರ್ಶನ ನಡೆಸಲು ಅವಕಾಶ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸ್‌ನ ಏಳು ಸಿಬ್ಬಂದಿಯನ್ನು ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ ಎಂದು ವರದಿಯಾಗಿದೆ.
ವಿಶೇಷ ಪೊಲೀಸ್ ಮಹಾನಿರ್ದೇಶಕ (ಮಾನವ ಹಕ್ಕುಗಳು) ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ), ಬಿಷ್ಣೋಯ್ ಮೊಹಾಲಿಯ ಖರಾರ್‌ನಲ್ಲಿ ಪಂಜಾಬ್ ಪೊಲೀಸರ ವಶದಲ್ಲಿದ್ದಾಗ ಒಂದು ಸಂದರ್ಶನ ಮತ್ತು ರಾಜಸ್ಥಾನದ ಜೈಲಿನಲ್ಲಿ ಮತ್ತೊಂದು ಸಂದರ್ಶನ ನಡೆದಿದೆ ಎಂದು ಪಂಪತ್ತೆ ಹಚ್ಚಿದೆ.
ಎಸ್‌ಐಟಿ ತನಿಖೆ ಅನುಸರಿಸಿ ಎಸ್ಪಿ ಗುರ್ಷರ್ ಸಿಂಗ್ ಸಂಧು, ಡಿಎಸ್ಪಿ ಸಮ್ಮರ್ ವನೀತ್, ಸಬ್-ಇನ್‌ಸ್ಪೆಕ್ಟರ್ ರೀನಾ (ಸಿಐಎ ಖರಾರ್), ಸಬ್-ಇನ್‌ಸ್ಪೆಕ್ಟರ್ ಜಗತ್ಪಾಲ್ ಜಂಗು, ಸಬ್-ಇನ್‌ಸ್ಪೆಕ್ಟರ್ ಶಗನ್ಜಿತ್ ಸಿಂಗ್, ಸಹಾಯಕ ಸಬ್-ಇನ್‌ಸ್ಪೆಕ್ಟರ್ ಮುಖ್ತಿಯಾರ್ ಸಿಂಗ್ ಮತ್ತು ಹೆಡ್ ಕಾನ್‌ಸ್ಟೇಬಲ್ ಓಂ ಪ್ರಕಾಶ್ ಅವರನ್ನು ಅಮಾನತುಗೊಳಿಸಿ ಶುಕ್ರವಾರ (ಅ.25) ಪಂಜಾಬ್ ಗೃಹ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಸೆಪ್ಟೆಂಬರ್ 3 ಮತ್ತು 4, 2022ರ ರಾತ್ರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಲಾರೆನ್ಸ್ ಬಿಷ್ಣೋಯ್‌ನ ಸಂದರ್ಶನ ನಡೆಸಲಾಗಿದೆ ಎಂದು ಎಸ್‌ಐಟಿ ವರದಿ ಹೇಳಿದೆ.
ಕಳೆದ ಮಾರ್ಚ್‌ನಲ್ಲಿ ಖಾಸಗಿ ಸುದ್ದಿ ವಾಹಿನಿಯೊಂದು ಬಿಷ್ಣೋಯ್ ಜೊತೆಗಿನ ಎರಡು ಸಂದರ್ಶನಗಳನ್ನು ಪ್ರಸಾರ ಮಾಡಿತ್ತು. ಈ ಪೈಕಿ ಒಂದನ್ನು ಪಂಜಾಬ್‌ನ ಮೊಹಾಲಿಯ ಎಸ್‌ಎಎಸ್ ನಗರ ವ್ಯಾಪ್ತಿಯ ಖರಾರ್‌ನಲ್ಲಿರುವ ಅಪರಾಧ ತನಿಖಾ ಸಂಸ್ಥೆ (ಸಿಐಎ) ಸಿಬ್ಬಂದಿ ಆವರಣದಿಂದ ಹಾಗೂ ಮತ್ತೊಂದನ್ನು ರಾಜಸ್ಥಾನದ ಜೈಪುರದ ಕೇಂದ್ರ ಕಾರಾಗೃಹದಿಂದ ಮಾಡಿದ್ದ ವಿಡಿಯೋ ಕರೆಯಿಂದ ಚಿತ್ರೀಕರಿಸಲಾಗಿತ್ತು.
2022 ರಲ್ಲಿ ನಡೆದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಕೊಲೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್ ಜೈಲಿನಲ್ಲಿದ್ದಾನೆ. ಈತನ ತಂಡವೇ ಇತ್ತೀಚೆಗೆ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಬಾಬಾ ಸಿದ್ದೀಕ್ ಹತ್ಯೆ ಮಾಡಿದೆ ಎಂದು ಹೇಳಲಾಗುತ್ತಿದೆ. ಲಾರೆನ್ಸ್ ಬಿಷ್ಣೋಯಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ನೇರ ಬೆದರಿಕೆ ಹಾಕಿದ್ದಾನೆ. ಈತ ಜೈಲಿನಲ್ಲಿ ಕುಳಿತೇ ತನ್ನ ತಂಡದ ಮೂಲಕ ಅಪರಾಧ ಕೃತ್ಯಗಳನ್ನು ನಡೆಸುತ್ತಿದ್ದಾನೆ.
ಪೊಲೀಸ್ ಅಧಿಕಾರಿಗಳ ಬೆಂಬಲವೂ ಲಾರೆನ್ಸ್ ಬಿಷ್ಣೋಯಿಗೆ ಇದೆ ಎಂದು ಹೇಳಲಾಗ್ತಿದೆ. ಇದೀಗ ಬಿಷ್ಣೋಯಿಗೆ ಸಹಕರಿಸಿದ ಆರೋಪದ ಮೇಲೆ ಪೊಲೀಸರು ಅಮಾನತಾಗಿರುವುದು ಈ ಆರೋಪವನ್ನು ಪುಷ್ಠೀಕರಿಸಿದೆ.
ಇದನ್ನೂ ಓದಿ : ಉತ್ತರಾಖಂಡ | ಹಿಂಸಾಚಾರಕ್ಕೆ ತಿರುಗಿದ ಮಸೀದಿ ವಿರೋಧಿ ಪ್ರತಿಭಟನೆ, ಮುಸ್ಲಿಮರ ಅಂಗಡಿಗಳು ಧ್ವಂಸ


