ನಾಲ್ಕು ವರ್ಷಗಳ ಹಿಂದೆ ಸಾರ್ಸ್-ಕೋವಿಡ್-2 ವೈರಸ್ಸು ಜಗತ್ತನ್ನೇ ಹೈರಾಣಾಗಿಸಿದಾಗ, ಹಲವು ಹೊಸ ಪದಗಳು ಜನಪ್ರಿಯವಾದವು. ಕೊರೊನಾ, ವೈರಸ್ಸು, ಕೋವಿಡ್ ಮೊದಲಾದವುಗಳ ಜೊತೆಯಲ್ಲಿಯೇ ಆರ್‌ಎನ್‌ಎ, ಲಸಿಕೆ ಮುಂತಾದ ಪದಗಳೂ ಜನಜನಿತವಾದವು. ಕೋವಿಡ್ ನಿಯಂತ್ರಿಸಲು ಬಳಸಿದ ಕೊವ್ಯಾಕ್ಸಿನ್ ಲಸಿಕೆ ವಾಸ್ತವದಲ್ಲಿ ಪ್ರಪಂಚದ ಪ್ರಪ್ರಥಮ ಆರ್‌ಎನ್‌ಎ ಲಸಿಕೆ ಎಂದು ಹೆಸರು ಗಳಿಸಿತ್ತು. ಆರ್‌ಎನ್‌ಎ ಎನ್ನುವ ಪದ ಎಲ್ಲರ ನಾಲಗೆಯಲ್ಲಿ ಉರುಳಾಡಿತ್ತು. ಇದೀಗ ಅದೇಪದ ಮತ್ತೊಮ್ಮೆ ಚಾಲ್ತಿಗೆ ಬಂದಿದೆ. ಮೈಕ್ರೊ-ಆರ್‌ಎನ್‌ಎ ಎನ್ನುವ ರೂಪದಲ್ಲಿ ಸುದ್ದಿಯಲ್ಲಿದೆ. ಏಕೆಂದರೆ ಪ್ರತಿವರ್ಷ ವಿಜ್ಞಾನ ಲೋಕ ಕಾತುರದಿಂದ ಎದುರು ನೋಡುವ ಜಾಗತಿಕ ಪ್ರಶಸ್ತಿಯನ್ನು ಮೈಕ್ರೊ-ಆರ್‌ಎನ್‌ಎಯ ಇರವನ್ನು ಪತ್ತೆ ಮಾಡಿದ ಇಬ್ಬರು ಅಮೆರಿಕನ್ನರಿಗೆ ನೀಡಲಾಗಿದೆ. ಅಮೆರಿಕೆಯ ಮೆಸಾಚುಸೆಟ್ಸ್ ವಿಶ್ವವಿದ್ಯಾನಿಲಯದ ಚಾನ್ ಮೆಡಿಕಲ್ ಸ್ಕೂಲಿನಲ್ಲಿ ಪ್ರೊಫೆಸರ್ ಆಗಿರುವ ವಿಕ್ಟರ್ ಆಂಬ್ರೋಸ್ ಹಾಗೂ ಹಾರ್ವರ್ಡ್ ಮೆಡಿಕಲ್ ಸ್ಕೂಲಿನ ಮೆಸಾಚುಸೆಟ್ಸ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಗ್ಯಾರಿ ರವ್ಕನ್ ವೈದ್ಯಕೀಯ ಹಾಗೂ ಜೀವಕ್ರಿಯೆ ವಿಭಾಗದಲ್ಲಿನ ಸಂಶೋಧನೆಗಾಗಿ ನೀಡುವ ನೊಬೆಲ್ ಪಾರಿತೋಷಕವನ್ನು ಹಂಚಿಕೊಂಡಿದ್ದಾರೆ. ಮೈಕ್ರೊ ಆರ್‌ಎನ್‌ಎ ಹಾಗೂ ಅವು ಹೇಗೆ ಜೀನ್‌ಗಳನ್ನು ನಿಯಂತ್ರಿಸುತ್ತವೆ ಎನ್ನುವುದನ್ನು ಪತ್ತೆ ಮಾಡಿದ್ದಕ್ಕಾಗಿ ಇವರಿಗೆ ಈ ಪ್ರಶಸ್ತಿ ದಕ್ಕಿದೆ.
ಪ್ರೊಟೀನು ತಯಾರಿಕೆ ಎನ್ನುವ ಜೀವತತ್ವ
ತಳಿಗುಣಗಳನ್ನು ಪ್ರತಿನಿಧಿಸುತ್ತದೆ ಎನ್ನುವ ಡಿಎನ್‌ಎ ಎಂಬ ರಾಸಾಯನಿಕ ಪತ್ತೆಯಾಗುವ ಮುನ್ನವೇ ಆರ್‌ಎನ್‌ಎ ಪತ್ತೆಯಾಗಿತ್ತು. ಸಸ್ಯಗಳ ವೈರಸ್ಸುಗಳಲ್ಲಿ ಇದುವೇ ಪ್ರಧಾನವಾಗಿತ್ತು. ಆದರೆ 1953ರಲ್ಲಿ ರಿಚರ್ಡ್ ವಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್ ಜೋಡಿ ಡಿಎನ್‌ಎ ಎನ್ನುವುದು ನಾಲ್ಕು ಬಗೆಯ ಡಿಯಾಕ್ಸಿನ್ಯೂಕ್ಲಿಯೋಟೈಡು ಎನ್ನುವ ಅಣುಗಳ ಜೋಡಿ ಸರಪಳಿ ಎಂದು ಸೂಚಿಸಿದಾಗಿನಿಂದ ಆರ್‌ಎನ್‌ಎ ಬಗ್ಗೆಯೂ ಕುತೂಹಲ ಹೆಚ್ಚಾಗಿತ್ತು. ಡಿಎನ್‌ಎ ಬಲು ದೀರ್ಘವಾದ ಸರಪಳಿಯಾದರೆ, ಆರ್‌ಎನ್‌ಎ ಅದರ ತುಣುಕಿನಂತಿತ್ತು. ಸ್ವಲ್ಪವೇ ವ್ಯತ್ಯಾಸ. ಆರ್‌ಎನ್‌ಎಯ ನ್ಯೂಕ್ಲಿಯೋಟೈಡುಗಳಲ್ಲಿ ಇದ್ದ ಸಕ್ಕರೆ ಅಣುವಿನಲ್ಲಿ ಆಕ್ಸಿಜನ್ ಉಳಿದಿತ್ತು. ಡಿಎನ್‌ಎಯಲ್ಲಿ ಹೀಗಿರಲಿಲ್ಲ ಮತ್ತೂ ಒಂದು ವ್ಯತ್ಯಾಸ ಎಂದರೆ ಯಾವುದೇ ಜೀವಿಯ, ಯಾವುದೇ ಅಂಗದ, ಯಾವುದೇ ಜೀವಕೋಶವನ್ನು ತೆಗೆದರೂ ಒಂದೇ ಬಗೆಯ ಡಿಎನ್‌ಎ ಕಾಣುತ್ತಿತ್ತು. ಆದರೆ ಒಂದೇ ಜೀವಕೋಶದಲ್ಲಿ ಹಲವು ಬಗೆಯ ಆರ್‌ಎನ್‌ಎ ಸಿಗುತ್ತಿದ್ದುವು. ಡಿಎನ್‌ಎ ಮೂಲತಃ ಜೀವಕೋಶದ ನಡುವಿನಲ್ಲಿರುತ್ತಿದ್ದ ಕೋಶಕೇಂದ್ರ ಅಥವಾ ನ್ಯೂಕ್ಲಿಯಸ್‌ನಲ್ಲಷ್ಟೆ ಕಾಣಬರುತ್ತಿತ್ತು. ಆರ್‌ಎನ್‌ಎ ಹಾಗಲ್ಲ. ಅದು ಕೋಶಕೇಂದ್ರದ ಹೊರಗೆ ವಿವಿಧ ಗಾತ್ರದ ಅಣುಗಳಾಗಿ ಸಿಗುತ್ತಿತ್ತು.
ಡಿಎನ್‌ಎ ಹಾಗೂ ಆರ್‌ಎನ್‌ಎ ಎರಡೂ ಜೀವಕೋಶಗಳಲ್ಲಿ, ತನ್ಮೂಲಕ ಜೀವಿಗಳಲ್ಲಿ, ಪ್ರೊಟೀನುಗಳ ತಯಾರಿಕೆಗೆ ಅವಶ್ಯಕವಾದಂಥವು. ಡಿಎನ್‌ಎ ಎಲ್ಲ ಪ್ರೊಟೀನುಗಳ ರಚನೆ ಹೇಗಿರುತ್ತದೆ ಎಂಬ ಮಾಹಿತಿಯನ್ನು ಕೂಡಿಟ್ಟುಕೊಂಡಿರುತ್ತದೆ. ಅದನ್ನು ಪ್ರೊಟೀನು ರೂಪಕ್ಕೆ ಆರ್‌ಎನ್‌ಎ ಪರಿವರ್ತಿಸುತ್ತಿರಬೇಕು ಎಂದು ಜೇಮ್ಸ್ ವಾಟ್ಸನ್ ಮೊದಲು ತರ್ಕಿಸಿದರು. ಇದನ್ನೇ ಜೀವಿಗಳ ಮೂಲಮಂತ್ರ ಅಥವಾ ಸೆಂಟ್ರಲ್ ಡಾಗ್ಮಾ ಎಂದು ಕರೆಯುತ್ತಾರೆ. ಇದರ ಅರ್ಥ ಇಷ್ಟೆ. ಡಿಎನ್‌ಎಯ ನ್ಯೂಕ್ಲಿಯೋಟೈಡುಗಳ ಸರಮಾಲೆಯೇ ಮಾಹಿತಿ ಖಜಾನೆ. ಅದರಲ್ಲಿ ಪ್ರೋಟೀನು ಹೇಗಿರಬೇಕೆಂಬ ಮಾಹಿತಿ ಗುಪ್ತ ಸಂಕೇತಗಳ ರೂಪದಲ್ಲಿ ಅಡಗಿರುತ್ತದೆ. ಇದನ್ನೇ ಜೀನ್ ಎನ್ನುತ್ತೇವೆ. ಈ ಸಂದೇಶವನ್ನು ಗುರುತಿಸಿ ಪ್ರೊಟೀನು ರೂಪಕ್ಕೆ ಪರಿವರ್ತಿಸುವುದು ಆರ್‌ಎನ್‌ಎ.
ಅನಂತರದ ಎರಡು ದಶಕಗಳಲ್ಲಿ ನಡೆದ ಸಂಶೋಧನೆಗಳು ಜೀವಕೋಶದಲ್ಲಿದ್ದ ಮೂರು ಬಗೆಯ ಆರ್‌ಎನ್‌ಎಗಳು ಹೇಗೆ ಪ್ರೊಟೀನು ತಯಾರಿಕೆಯಲ್ಲಿ ಪಾಲ್ಗೊಳ್ಳುತ್ತವೆ ಎಂದು ಪತ್ತೆ ಮಾಡಿದ್ದವು. ಡಿಎನ್‌ಎಯಲ್ಲಿರುವ ಪ್ರೊಟೀನು ಮಾಹಿತಿ ಮೆಸೆಂಜರ್ ಆರ್‌ಎನ್‌ಎ ರೂಪಕ್ಕೆ ನಕಲಾಗುತ್ತದೆ. ಇದನ್ನು ಟ್ರಾನ್ಸ್‌ಕ್ರಿಪ್ಷನ್ ಎನ್ನುತ್ತಾರೆ. ಮೆಸೆಂಜರ್ ಆರ್‌ಎನ್‌ಎಯಲ್ಲಿರುವ (ಎಂಆರ್‌ಎನ್‌ಎ) ಮಾಹಿತಿಯನ್ನು ಅನುಸರಿಸಿ, ರೈಬೊಸೋಮಲ್ ಆರ್‌ಎನ್‌ಎ (ಆರ್‌ಆರ್‌ಎನ್‌ಎ) ವಿವಿಧ ಅಮೈನೊ ಆಮ್ಲಗಳನ್ನು ಹೆಕ್ಕಿ ಜೋಡಿಸುತ್ತದೆ. ಇದನ್ನು ಟ್ರಾನ್ಸ್‌ಲೇಶನ್ ಎನ್ನುತ್ತಾರೆ. ಜೀವಕೋಶದೊಳಗೆ ಇರುವ ವಿವಿಧ ಅಮೈನೊ ಆಮ್ಲಗಳನ್ನು ಟ್ರಾನ್ಸ್‌ಫರ್ ಆರ್‌ಎನ್‌ಎ (ಟಿಆರ್‌ಎನ್‌ಎ) ಎನ್ನುವ ಮತ್ತೊಂದು ವಿಧದ ಆರ್‌ಎನ್‌ಎ ರೈಬೊಸೋಮಿನ ಬಳಿ ಹೊತ್ತುತರುತ್ತದೆ. ಹೀಗೆ ಪ್ರೊಟೀನು ತಯಾರಿಕೆಯಲ್ಲಿ ಮಾಹಿತಿಯನ್ನು ಸೂಚಿಸುವ ಎಂಆರ್‌ಎನ್‌ಎ, ಸರಕು ಸಾಗಿಸುವ ಟಿಆರ್‌ಎನ್‌ಎ ಮತ್ತು ತಯಾರಿಕೆಯಲ್ಲಿ ತೊಡಗುವ ಆರ್‌ಆರ್‌ಎನ್‌ಎಗಳು ಪಾಲ್ಗೊಳ್ಳುತ್ತವೆ ಎಂದು ತಿಳಿದುಬಂದಿತು. ಜೀವಗಳ ಬದುಕಿಗೆ ಇದು ಮೂಲ ಎಂದು ಭಾವಿಸಲಾಯಿತು. ಏಕೆಂದರೆ ಜೀವಿಗಳಲ್ಲಿನ ಎಲ್ಲ ಚಟುವಟಿಕೆಗಳು ಹಾಗೂ ಜೀವಿಕ್ರಿಯೆಗಳಲ್ಲಿಯೂ ವಿವಿಧ ಪ್ರೊಟೀನುಗಳು ಭಾಗವಹಿಸುತ್ತವೆ. ಹಾಗೆಯೇ ಅಂಗಗಳ ರಚನೆಗೂ ಇವೇ ಕಾರಣ. ಬೇರೆಬೇರೆ ಅಂಗಗಳಲ್ಲಿರುವ ಕೋಶಗಳಲ್ಲಿ ಬೇರೆಬೇರೆ ಪ್ರೊಟೀನುಗಳು ಪ್ರಧಾನವಾಗಿರುವುದು ಇದಕ್ಕೆ ಪುರಾವೆ.
ವೈವಿಧ್ಯದ ಮೂಲವೇನು?
ಪ್ರೊಟೀನು ತಯಾರಿಕೆಯೇ ಜೀವದ ಮೂಲ ಕ್ರಿಯೆ ಎನ್ನುವುದು ಅರ್ಥವಾದರೂ, ಒಂದು ಸಮಸ್ಯೆ ಉಳಿದಿತ್ತು. ಜೀವಿಗಳ ವೈವಿಧ್ಯ ಹೇಗಾಗುತ್ತದೆ? ಅಥವಾ ವಿವಿಧ ಅಂಗಗಳ ಬೆಳವಣಿಗೆ ಹೇಗಾಗುತ್ತದೆ? ಇವೆರಡೂ ಪ್ರಶ್ನೆಗಳಿಗೂ ಮೂಲ ಒಂದೇ ಕುತೂಹಲ. ಇಷ್ಟೊಂದು ಪ್ರೊಟೀನುಗಳನ್ನು ತಯಾರಿಸುವ ಸಾಮರ್ಥ್ಯ ಇರುವ ಜೀವಕೋಶಗಳಲ್ಲಿ ಕೆಲವೇ ಪ್ರೊಟೀನುಗಳು ತಯಾರಾಗುತ್ತವೆ. ಅದೂ ಎಲ್ಲವೂ ಒಟ್ಟಿಗಲ್ಲ. ಬೇರೆಬೇರೆ ಕಾಲದಲ್ಲಿ ವಿಭಿನ್ನ ಪ್ರೊಟೀನುಗಳನ್ನು ಕಾಣುತ್ತೇವೆ. ಅಂದರೆ ಎಲ್ಲ ಜೀನುಗಳೂ ಎಲ್ಲ ಸಮಯದಲ್ಲಿಯೂ ಪ್ರೊಟೀನುಗಳನ್ನು ತಯಾರಿಸುವುದಿಲ್ಲ. ಕೆಲವೇ ಜೀನುಗಳು ನಿರ್ದಿಷ್ಟ ಕಾಲದಲ್ಲಿ ಪ್ರೊಟೀನನ್ನು ತಯಾರಿಸುತ್ತವೆ. ಇದು ಹೇಗೆ? ಇಂಥದ್ದೇ ಜೀನು ಇಂಥದ್ದೇ ಸಮಯದಲ್ಲಿ ಪ್ರೊಟೀನು ತಯಾರಿಸಬೇಕು ಎಂದು ನಿಶ್ಚಯಿಸುವ ವಸ್ತು ಯಾವುದು? ಅಥವಾ ಹೀಗೂ ಹೇಳಬಹುದು. ಎಲ್ಲ ಜೀನುಗಳೂ ಏಕಕಾಲದಲ್ಲಿ ಪ್ರೊಟೀನುಗಳನ್ನು ತಯಾರಿಸದಂತೆ ನಿಯಂತ್ರಿಸುವುದು ಯಾವುದು?
ಈ ಪ್ರಶ್ನೆಗೆ ಮತ್ತೊಂದು ಆಯಾಮವೂ ಇದೆ. ಎಲ್ಲ ಜೀವಿಗಳೂ ಒಂದೇ ಒಂದು ಜೀವಕೋಶದಿಂದ ಹುಟ್ಟುತ್ತವೆ. ಈ ಜೀವಕೋಶವೇ ಸಂಖ್ಯೆಯಲ್ಲಿ ಹೆಚ್ಚಾಗಿ ಜೀವಿಯಾಗುತ್ತದೆ. ಮಾರ್ಗಮಧ್ಯದಲ್ಲಿ ಅದರಿಂದ ಹುಟ್ಟಿದ ಜೀವಕೋಶಗಳು ವಿಭಿನ್ನ ಚಟುವಟಿಕೆ ಇರುವವಾಗುತ್ತವೆ. ಸ್ನಾಯು, ರಕ್ತಕೋಶ, ನರಕೋಶ ಮೊದಲಾಗಿ ಬೇರೆಬೇರೆಯಾಗುತ್ತವೆ. ಅಂಗಗಳು ರೂಪುಗೊಳ್ಳುತ್ತವೆ. ಜೀವಿ ಎನ್ನಿಸಿಕೊಳ್ಳುತ್ತದೆ. ಇದು ಹೇಗಾಗುತ್ತದೆ? ಡಿಎನ್‌ಎಯಲ್ಲಿರುವ ಜೀನುಗಳಲ್ಲಿ ಕೆಲವೇಕೆಲವು ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳುವ ಕ್ರಿಯೆ ಯಾವುದು? ಮನುಷ್ಯನಲ್ಲಿ ಪ್ರತಿ ಜೀವಕೋಶಕ್ಕೂ ಹದಿನೆಂಟು ಸಾವಿರಕ್ಕೂ ಹೆಚ್ಚು ಪ್ರೊಟೀನುಗಳನ್ನು ತಯಾರಿಸುವ ಸಾಮರ್ಥ್ಯ ಇರುತ್ತದೆ. ಆದರೆ ಒಂದೊಂದು ಬಗೆಯ ಕೋಶವೂ ಕೆಲವೇಕೆಲವು ಪ್ರೊಟೀನನ್ನು ತಯಾರಿಸುವುದನ್ನು ಕಂಡಿದ್ದೇವೆ. ಉದಾಹರಣೆಗೆ ರಕ್ತಕೋಶದಲ್ಲಿ ಹಿಮೊಗ್ಲೋಬಿನ್ ಪ್ರಮಾಣ ಹೆಚ್ಚು. ಸ್ನಾಯುಗಳಲ್ಲಿ ಮಯೋಸಿನ್ ಎನ್ನುವುದು ಹೆಚ್ಚು. ಈ ಪ್ರಮುಖ ಕ್ರಿಯೆಯಲ್ಲಿ ಹೊಸದೊಂದು ಆರ್‌ಎನ್‌ಎಯ ಪಾತ್ರವಿದೆ ಎಂದು ಪತ್ತೆ ಮಾಡಿದವರು ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರವ್ಕನ್.
ಮೈಕ್ರೊ ಆರ್‌ಎನ್‌ಎ
ಇಪ್ಪತ್ತೊಂದು ವರ್ಷಗಳ ಹಿಂದೆ, 1993ನೇ ಇಸವಿಯಲ್ಲಿ ವಿಕ್ಟರ್ ಆಂಬ್ರೋಸ್ ಮೈಕ್ರೊ-ಆರ್‌ಎನ್‌ಎ ಎನ್ನುವ ಹೊಸದೊಂದು ಬಗೆಯ ಆರ್‌ಎನ್‌ಎಯನ್ನು ಪತ್ತೆ ಮಾಡಿದರು. ಆಗ ಇವರ ಅಧ್ಯಯನ ಸೀನೊರೇಬ್ಡೈಟಿಸ್ ಎಲಿಗೆನ್ಸ್ ಎನ್ನುವ ಹುಳುವಿನ ಬೆಳವಣಿಗೆ ಹೇಗಾಗುತ್ತದೆ ಎಂಬುದನ್ನು ಕುರಿತಾಗಿತ್ತು. 2002ನೇ ಇಸವಿಯಲ್ಲಿ ನೊಬೆಲ್ ಪ್ರಶಸ್ತಿ ಗಳಿಸಿದ್ದ ಸಿಡ್ನಿ ಬ್ರೆನ್ನರರ ಜೊತೆಗೂಡಿದ್ದರು. ಎಲಿಗೆನ್ಸ್ ಹುಳುವಿನ ವಿಶೇಷವೆಂದರೆ, ಅದು ಮೊಟ್ಟೆಯಿಂದ ಬೆಳೆದು ಮರಿ ಮಾಡುವವರೆಗೂ, ಅದರ ದೇಹದಲ್ಲಿರುವ ಪ್ರತಿಯೊಂದು ಜೀವಕೋಶವೂ ಹೇಗೆ ಹುಟ್ಟಿತು ಎಂಬುದನ್ನು ಗುರುತಿಸಬಹುದು. ಹೀಗಾಗಿ ಇದರ ಬೆಳವಣಿಗೆಯಲ್ಲಿನ ಏರುಪೇರುಗಳು ಯಾವ ಜೀವಕೋಶದಲ್ಲಿನ ದೋಷದಿಂದ ಆಗಿರಬಹುದು ಎಂದು ನಿಖರವಾಗಿ ಹೇಳಬಹುದಿತ್ತು. ಇಂತಹ ಹುಳುವಿನಲ್ಲಿ ಬ್ರೆನ್ನರ್ ಒಂದು ವಿಕೃತಿಯನ್ನು ಗಮನಿಸಿದ್ದರು. ಈ ವಿಕೃತ ಹುಳುವಿನ ಬೆಳವಣಿಗೆ ಸರಿಯಾಗಿ ಆಗುತ್ತಿರಲಿಲ್ಲ. ಈ ದೋಷಕ್ಕೆ ಒಂದೇ ಒಂದು ಜೀನ್ ಕಾರಣ ಎಂದು ಬ್ರೆನ್ನರ್ ನಿರೂಪಿಸಿದ್ದರು. ಇದನ್ನು ಎಲ್‌ಐಎನ್-14 (ಲಿನ್ 14) ಎಂದು ಕರೆಯುತ್ತಾರೆ. ಆಂಬ್ರೋಸಿಗೆ ಈ ಜೀನ್ ಹೇಗೆ ವಿಕೃತಿಗೆ ಕಾರಣವಾಗಿದೆ ಎಂಬುದನ್ನು ತಿಳಿಯುವ ಆಸಕ್ತಿ.
ಅಂದಿನ ದಿನಗಳಲ್ಲಿ ಜೀನುಗಳಲ್ಲಿನ ಚಟುವಟಿಕೆ ಕುಂದಲು ಕೆಲವೇ ಕಾರಣಗಳನ್ನು ತರ್ಕಿಸಲಾಗಿತ್ತು. ಮೊದಲನೆಯದಾಗಿ ಜೀನಿನಲ್ಲಿಯೇ ದೋಷ ಇರಬೇಕು. ಜೀನೇ ಕಾಣೆಯಾಗಿರಬಹುದು. ಜೀನಿನ ಚಟುವಟಿಕೆಯಲ್ಲಿ, ಅಂದರೆ ಅದರಲ್ಲಿನ ಮಾಹಿತಿ ನಕಲಾಗುವುದರಲ್ಲಿ ತಪ್ಪಾಗಿರಬಹುದು. ಈ ಕೆಲಸ ಮಾಡುವ ಕಿಣ್ವಗಳಲ್ಲಿ ತೊಂದರೆ ಇದ್ದರೂ ಹೀಗಾಗುತ್ತದೆ ಅಥವಾ ಜೀನಿನ ಚಟುವಟಿಕೆಯನ್ನು ಇನ್ನೇನಾದರೂ ಕಾರಣ ಕುಗ್ಗಿಸುತ್ತಿರಬಹುದು ಅಥವಾ ಜೀನಿನಿಂದ ಹುಟ್ಟಿದ ಪ್ರೊಟೀನೇ ದೋಷಪೂರ್ಣವಾಗಿರಬಹುದು ಎಂದೆಲ್ಲ ತರ್ಕಗಳಿದ್ದವು. ಅವುಗಳಲ್ಲಿ ಯಾವುದು ಎಂಬುದನ್ನು ಪತ್ತೆ ಮಾಡಲು ಆಂಬ್ರೋಸ್ ಹೊರಟರು.
ಇದನ್ನೂ ಓದಿ: ‘ಸಂಸ್ಥೆಗಳು-ಸಮೃದ್ಧಿಯ ಅಧ್ಯಯನ’ಕ್ಕಾಗಿ ಮೂವರು ಅರ್ಥಶಾಸ್ತ್ರಜ್ಞರಿಗೆ ನೊಬೆಲ್ ಪ್ರಶಸ್ತಿ
ಅವರ ಮೊದಲ ಗುರಿ, ಜೀನಿನ ಚಟುವಟಿಕೆಯನ್ನು ತಡೆಗಟ್ಟುವ ಪ್ರೊಟೀನು ಯಾವುದು ಎಂಬುದಾಗಿತ್ತು. ಸಾಧಾರಣವಾಗಿ ಬಹುತೇಕ ಜೀನುಗಳನ್ನು ಪ್ರೊಟೀನುಗಳು ನಿಯಂತ್ರಿಸುತ್ತಿದ್ದವು. ಇಂತಹ ಸಂದರ್ಭಗಳಲ್ಲಿ ಜೀನಿನಿಂದ ಸಂದೇಶವನ್ನು ನಕಲುಮಾಡಿದ ಎಂಆರ್‌ಎನ್‌ಎ ಇರುವುದಿಲ್ಲ. ಆದರೆ ಲಿನ್-14ರಲ್ಲಿ ಈ ಎಂಆರ್‌ಎನ್‌ಎ ಇತ್ತು. ಇದು ಕುತೂಹಲ ಕೆರಳಿಸಿತ್ತು. ಜೀನಿನಿಂದ ಸಂದೇಶವನ್ನು ನಕಲು ಮಾಡಿದ ಮೇಲೂ ಪ್ರೊಟೀನು ತಯಾರಾಗದಂತೆ ಏನು ತಡೆಯುತ್ತಿರಬಹುದು? ತಯಾರಾದ ಪ್ರೊಟೀನು ಅರಗಿ ಹೋಗುತ್ತಿದೆಯೇ? ಅಥವಾ ಪ್ರೊಟೀನೇ ತಯಾರಾಗುತ್ತಿಲ್ಲವೇ? ಅಥವಾ ಸಂದೇಶವನ್ನು ನಕಲಿಸಿದ ಎಂಆರ್‌ಎನ್‌ಎ ನಶಿಸಿಹೋಗುತ್ತಿದೆಯೇ? ಇವೆಲ್ಲವನ್ನೂ ಪರಿಶೀಲಿಸುತ್ತಿದ್ದಾಗ ಲಿನ್-14ರ ಎಂಆರ್‌ಎನ್‌ಎಯಲ್ಲಿ ಸಂದೇಶಗಳು ಇಲ್ಲದಂತಹ ಭಾಗಕ್ಕೆ ಒಂದು ಪುಟ್ಟ ಆರ್‌ಎನ್‌ಎ ತುಣುಕು ಅಂಟಿಕೊಂಡಿದ್ದು ಕಂಡಿತು. ಈ ಪುಟ್ಟ ಆರ್‌ಎನ್‌ಎಯನ್ನು ಅವರು ಮೈಕ್ರೊ-ಆರ್‌ಎನ್‌ಎ ಎಂದು ಕರೆದರು. ಕೇವಲ ಇಪ್ಪತ್ತೋ, ಇಪ್ಪತ್ತೆರಡೋ ನ್ಯೂಕ್ಲಿಯೋಟೈಡುಗಳಷ್ಟೆ ಇದರಲ್ಲಿ ಇದ್ದವು. ಉಳಿದ ಆರ್‌ಎನ್‌ಎಗಳು ಸುರುಳಿ ಸುತ್ತಿಕೊಂಡಿರುವಂತೆ ಇದು ಇರಲಿಲ್ಲ. ನೇರವಾದ ಸರಪಳಿಯಂತಿದ್ದುವು. ಇದು ಅಂಟಿಕೊಂಡ ಭಾಗ ಎಂಆರ್‌ಎನ್‌ಎಯ ಒಂದು ತುದಿ. ಪ್ರೊಟೀನು ತಯಾರಿಕೆ ಆರಂಭವಾಗಬೇಕಿದ್ದರೆ ಈ ತುದಿ ಮುಕ್ತವಾಗಿರಬೇಕಿತ್ತು. ಡಿಎನ್‌ಎಯಲ್ಲಿಯೂ ಇಂತಹ ತುದಿ ಇದೆ. ಅದನ್ನು ಮುಚ್ಚಿಬಿಟ್ಟರೆ ಡಿಎನ್‌ಎ ನಕಲಾಗುವುದಿಲ್ಲ. ಹೀಗೆ ಅದು ಜೀನಿನ ಚಟುವಟಿಕೆಯ ನಿಯಂತ್ರಕ ಭಾಗ ಎಂದು ತಿಳಿದಿತ್ತು. ಎಂಆರ್‌ಎನ್‌ಎಯಲ್ಲಿಯೂ ಅದೇ ಭಾಗದಲ್ಲಿ ಈ ಪುಟ್ಟ ಆರ್‌ಎನ್‌ಎ ನೆಲೆಯಾಗಿದ್ದರಿಂದ, ಇದುವೂ ಲಿನ್-14 ಜೀನಿನ ಚಟುವಟೆಕೆಯನ್ನು ನಿಯಂತ್ರಿಸುತ್ತಿರಬೇಕು. ಅದುವೂ ಎಂ-ಆರ್‌ಎನ್‌ಎ ತಯಾರಾದ ನಂತರ ಎಂದು ಆಂಬ್ರೋಸ್ ತರ್ಕಿಸಿದ್ದರು. ಎಲಿಗೆನ್ಸ್ ಹುಳುವಿನ ಬೆಳವಣಿಗೆಯ ವೇಳೆ ಪ್ರತಿಯೊಂದು ಜೀವಕೋಶದ ವಿಧಿಯನ್ನೂ ನಿಖರವಾಗಿ ತಿಳಿಯಬಹುದು. ಇವತ್ತು ಇಂತಹ ಜಾಗದಲ್ಲಿರುವ ಕೋಶ, ನಾಳೆ ಯಾವ ಅಂಗವಾಗಿ ಬೆಳೆಯುತ್ತದೆ ಎನ್ನುವುದು ಸ್ಪಷ್ಟವಾಗಿ ನಿರ್ಧಾರವಾಗಿರುವುದರಿಂದ ಬೇರೆಬೇರೆ ಕಾಲದಲ್ಲಿ ಆ ಜಾಗದಲ್ಲಿರುವ ಜೀವಕೋಶಗಳನ್ನು ಗಮನಿಸುವ ಮೂಲಕ ಏನೇನು ಬದಲಾವಣೆಗಳಾಗಿವೆ ಎಂದು ತಿಳಿಯಬಹುದು. ಈ ರೀತಿಯ ಅಧ್ಯಯನವನ್ನು ಕೈಗೊಂಡಾಗ ಲಿನ್-14ರಲ್ಲಿನ ಕೆಲವು ಜೀವಕೋಶಗಳ ಚಟುವಟಿಕೆಗಳು ನಿರಂತರವಾಗಿ ಮರುಕಳಿಸುತ್ತಿರುತ್ತವೆ. ಇತರೆ ಕೋಶಗಳಲ್ಲಿಯಂತೆ ನಿಂತು, ಬೇರೊಂದು ಪ್ರೊಟೀನು ತಯಾರಿಕೆ ನಡೆಯುವುದಿಲ್ಲ ಎಂದು ತಿಳಿಯಿತು. ಇದರಿಂದಾಗಿ ಹುಳು ವಿವಿಧ ಅಂಗಗಳಿಗೆ ಬದಲಾಗಿ ದೇಹದ ತುಂಬಾ ಮೊಟ್ಟೆಗಳನ್ನು ತುಂಬಿಕೊಂಡು ಬೆಳೆಯುತ್ತದೆ. ಹುಳುವಿನ ಬೇರೆ ಅಂಗಗಳ ಕೋಶಗಳಲ್ಲಿ ಈ ಜೀನ್ ಚಟುವಟಿಕೆ ಬೇರೆ ಸಮಯದಲ್ಲಿ ಕಾಣಿಸುತ್ತದೆ. ಅಲ್ಲಿ ಇದರ ಪರಿಣಾಮ ಮರುಕಳಿಸುವ ಪ್ರೊಟೀನು ತಯಾರಿಕೆಯಲ್ಲ. ಹಾಗಿದ್ದರೆ ಇದನ್ನು ಮೈಕ್ರೊ ಆರ್‌ಎನ್‌ಎ ನಿಯಂತ್ರಿಸುತ್ತಿರಬಹುದೇ? ಇದು ಆಂಬ್ರೋಸರ ವಿಚಾರವಾಗಿತ್ತು.
ನಿಯಂತ್ರಕ ಅಣು
ಆಂಬ್ರೋಸರ ಈ ಊಹೆಗೆ ಪುರಾವೆ ಒದಗಿಸಿದವರು ಗ್ಯಾರಿ ರವ್ಕನ್. ಇವರು ಮೈಕ್ರೊ ಆರ್‌ಎನ್‌ಎಯ ಕೆಲಸ ಹೀಗಿರಬಹುದು ಎಂಬುದು ಊಹೆಯಷ್ಟೆ ಅಲ್ಲವೆಂದು ನಿರೂಪಿಸಿದರು. ಲಿನ್-4ರಂತೆಯೇ ಲಿನ್-14 ಎನ್ನುವ ವಿಕೃತಿಯೂ ಇದೆ. ಇದು ಹುಳುಗಳ ಬೆಳವಣಿಗೆಯನ್ನು ಸಾರಾಸಗಟಾಗಿ ನಿಲ್ಲಿಸಿಬಿಡುತ್ತದೆ. ಈ ವಿಕೃತಿಯನ್ನು ತಿದ್ದಿದರೆ ಏನಾಗುತ್ತದೆ ಎಂದು ಗಮನಿಸಿದರು. ಜೀನ್‌ಗಳ ಚಟುವಟಿಕೆ ಹೆಚ್ಚಾದಾಗ ಸಾಮಾನ್ಯವಾಗಿ ಎಂ-ಆರ್‌ಎನ್‌ಎ ಪ್ರಮಾಣವೂ ಹೆಚ್ಚಾಗುತ್ತದೆ. ಪರಿಣಾಮವಾಗಿ ಪ್ರೊಟೀನಿನ ಪ್ರಮಾಣವೂ ಹೆಚ್ಚಾಗುತ್ತದೆ. ಆದರೆ ಲಿನ್-14 ಪ್ರೊಟೀನಿನ ಪ್ರಮಾಣ ಹೆಚ್ಚಾಗಿದ್ದರೂ, ಅದರ ಎಂ-ಆರ್‌ಎನ್‌ಎ ಪ್ರಮಾಣ ಇದ್ದಷ್ಟೇ ಇತ್ತು. ಅಂದರೆ ಎಂ-ಆರ್‌ಎನ್‌ಎ ತಯಾರಾದ ಮೇಲೆ ಅದರ ಚಟುವಟಿಕೆ ಹೇಗೋ ಹೆಚ್ಚಿರಬೇಕು ಎಂದಷ್ಟೆ ಅರ್ಥ; ಈ ಬಗೆಯಲ್ಲಿ ಟ್ರಾನ್ಸ್‌ಕ್ರಿಪ್ಷನಿನ ನಂತರ ಪ್ರೊಟೀನು ತಯಾರಿಕೆಯ ನಿಯಂತ್ರಣವಾಗುತ್ತದೆ ಎಂದು ತಿಳಿದದ್ದು ಅದೇ ಮೊದಲು. ಎಲಿಗೆನ್ಸಿನ ಕುಲಕ್ಕೆ ಸೇರಿದ ಬೇರೆ ಹುಳುಗಳಿಂದ ಹೆಕ್ಕಿದ ಲಿನ್-14 ಜೀನುಗಳನ್ನು ವಿಕೃತಿಯಿದ್ದ ಹುಳುಗಳೊಳಗೆ ಇಟ್ಟು, ಅವುಗಳ ಬೆಳವಣಿಗೆ ಸರಿಯಾಗಿದ್ದನ್ನೂ ಇವರು ಕಂಡರು.
ಅನಂತರದ ದಿನಗಳಲ್ಲಿ ಈ ಲಿನ್-4 ಮೈಕ್ರೊ ಆರ್‌ಎನ್‌ಎಯಂತಹ ಇನ್ನೂ ಹಲವು ಪುಟ್ಟ ಮೈಕ್ರೊ ಆರ್‌ಎನ್‌ಎ ಜೀನುಗಳನ್ನು ಪತ್ತೆ ಮಾಡಲಾಗಿದೆ. ಅಷ್ಟೇ ಅಲ್ಲ. ಈ ನ್ಯೂಕ್ಲಿಯೋಟೈಡುಗಳನ್ನು ಹೋಲುವ ತುಣುಕುಗಳು ಬೇರೆ ಜೀವಿಗಳ ಡಿಎನ್‌ಎಯಲ್ಲಿಯೂ ಇರಬಹುದೇ ಎಂದು ಹುಡುಕಿದ್ದೂ ಆಗಿದೆ. ಹಣ್ಣಿನ ನೊಣಗಳಿಂದ ಹಿಡಿದು ಮನುಷ್ಯನವರೆಗೆ ಬಹಳಷ್ಟು ಜೀವಿಗಳಲ್ಲಿ ಈ ಮೈಕ್ರೊ ಆರ್‌ಎನ್‌ಎಯಂತಹ ತುಣುಕುಗಳು ಪತ್ತೆಯಾಗಿವೆ. ಜೀವಿಗಳ ವಂಶವೃಕ್ಷದಲ್ಲಿ ಇವು ಯಾವಾಗ ಉದಿಸಿದವು ಎಂದು ಕೂಡ ವಿಶ್ಲೇಷಿಸಲಾಗಿದೆ. ಹಲವಾರು ಜೀವಕೋಶಗಳು ಕೂಡಿಕೊಂಡು ಸಮೂಹದಲ್ಲಿ ಬಾಳುವಂತಹ ಸ್ಪಂಜುಗಳಂತಹ ಜೀವಿಗಳಲ್ಲಿ ಇವು ಇಲ್ಲ. ಆದರೆ ಅನಂತರ ಅಂಗಗಳನ್ನು ಬೆಳೆಸಿಕೊಂಡಂತಹ ಜೀವಿಗಳಲ್ಲಿ ಇವು ಇದ್ದುದು ಪತ್ತೆಯಾಗಿದೆ. ಅಂದರೆ ಈ ವಿಕೃತಿ ವಿಕಾಸವಾದ ನಂತರವಷ್ಟೆ ಅಂಗಗಳಿರುವ ಜೀವಿಗಳು ಉದಿಸಿರಬೇಕು ಎಂದು ಊಹಿಸಬಹುದು. ಹೀಗೆ ಈ ಮೈಕ್ರೊ ಆರ್‌ಎನ್‌ಎ ದೇಹದಲ್ಲಿನ ಜೀವಕೋಶಗಳು ವಿಭಿನ್ನವಾಗಿ ಬೆಳೆಯುವಂತೆ ನಿರ್ದೇಶಿಸುವ ಮೂಲಕ ಜೀವಿವೈವಿಧ್ಯಕ್ಕೂ ಕಾರಣವಾಗಿರಬಹುದು ಎಂದು ಈಗ ನಂಬಲಾಗಿದೆ.
ಮೈಕ್ರೊ ಆರ್‌ಎನ್‌ಎಯನ್ನು ಬಳಸಿಕೊಂಡು ದೋಷಪೂರ್ಣ ಜೀನುಗಳನ್ನು ನಿಯಂತ್ರಿಸಬಹುದೇ? ನಿರ್ದಿಷ್ಟ ಕಾಲಘಟ್ಟದಲ್ಲಿ ಮಾತ್ರವೇ ಚಟುವಟಿಕೆ ತೋರುವ ಮೈಕ್ರೊ ಆರ್‌ಎನ್‌ಎಗಳು ಕೆಲವು ಕಾಯಿಲೆಗೂ ಕಾರಣವಾಗಬಹುದು. ಆ ಕಾಲಘಟ್ಟದಲ್ಲಿ ಇವು ಕೆಲಸ ಮಾಡದಂತೆ ತಡೆದರೆ ರೋಗಗಳಿಗೆ ಚಿಕಿತ್ಸೆ ಸಾಧ್ಯವೇ ಎಂಬ ಕುತೂಹಲವೂ ಇದೆ. ಆದರೆ ಇವು ಎಲ್ಲವೂ ಇನ್ನೂ ಊಹೆಗಳಷ್ಟೆ. ಆರ್‌ಎನ್‌ಎ ಲಸಿಕೆಗಳಂತೆ ಇನ್ನೂ ನಿಜವಾಗಿಲ್ಲ.
ಈ ಹೊಸ ಅರಿವನ್ನು ಮೂಡಿಸಿದ ವಿಕ್ಟರ್ ಆಂಬ್ರೋಸ್ ಹಾಗೂ ಗ್ಯಾರಿ ರವ್ಕನ್ ಸುಮಾರು ಒಂಭತ್ತು ಕೋಟಿ ರೂ ಮೌಲ್ಯದ ಪ್ರಶಸ್ತಿಯನ್ನು ಸರಿಸಮನಾಗಿ ಹಂಚಿಕೊಂಡಿದ್ದಾರೆ.


