ಮಣಿಪುರದ ಇಂಫಾಲ್ ಪಶ್ಚಿಮದ ಕೌಟ್ರುಕ್ ಮತ್ತು ಬಿಷ್ಣುಪುರದ ಟ್ರೋಂಗ್ಲೋಬಿಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಶನಿವಾರ ರಾತ್ರಿ ಗುಂಡಿನ ಚಕಮಕಿ ಮತ್ತು ಸ್ಫೋಟಗಳು ಸಂಭವಿಸಿವೆ. ವರದಿಗಳ ಪ್ರಕಾರ, ಸುಧಾರಿತ ಬಂದೂಕುಗಳು ಮತ್ತು ಸ್ಫೋಟಕಗಳನ್ನು ಬಳಸಿ ರಾತ್ರಿ 7 ಗಂಟೆ ಸುಮಾರಿಗೆ ಉಗ್ರರು ಕೌತ್ರುಕ್ ಚಿಂಗ್ ಲೈಕೈ ಗ್ರಾಮದಲ್ಲಿ ದಾಳಿ ನಡೆಸಿದ್ದಾರೆ ಎಂದು ಇಂಫಾಲ್ ಪಶ್ಚಿಮ ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದ್ದು, ಭಾರೀ ಗುಂಡಿನ ಚಕಮಕಿ ನಡೆದಿದೆ. ತೆಂಗ್ನೌಪಾಲ್ ಜಿಲ್ಲೆಯಲ್ಲಿ ನಿಷೇಧಿತ ಪೀಪಲ್ಸ್ ಲಿಬರೇಶನ್ ಆರ್ಮಿಯ ಇಬ್ಬರು ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ.
ಅಸ್ಸಾಂ ರೈಫಲ್ಸ್ ಶನಿವಾರ ಗಡಿ ಪಿಲ್ಲರ್ ಸಂಖ್ಯೆ 87 ರ ಬಳಿ ಇಬ್ಬರನ್ನು ಬಂಧಿಸಿ ನಂತರ ಪೊಲೀಸರಿಗೆ ಹಸ್ತಾಂತರಿಸಿದೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ. ಎನ್ ಪ್ರಿಯೋ ಸಿಂಗ್ (21) ಮತ್ತು ಎಸ್ ದೇವಜಿತ್ ಸಿಂಗ್ (21) ಎಂದು ಗುರುತಿಸಲಾಗಿದ್ದು, ಇಬ್ಬರನ್ನು ಪಲ್ಲೆಲ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
“ಶುಕ್ರವಾರ, ಭದ್ರತಾ ಪಡೆಗಳು ಭಾರತ-ಮ್ಯಾನ್ಮಾರ್ ಗಡಿಯ ಸಮೀಪವಿರುವ ಯಾಂಗ್‌ಹೌಬಂಗ್ ಗ್ರಾಮದಿಂದ ಕಾನೂನುಬಾಹಿರ ಪ್ರೆಪಕ್ (ಪ್ರೊ) ನ ಒಬ್ಬ ಕೇಡರ್ ಅನ್ನು ಬಂಧಿಸಿವೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಂಧಿತ ಪ್ರೆಪಕ್ (ಪ್ರೊ) ಸದಸ್ಯನನ್ನು ರಾಬರ್ಟ್ ಲಾಲ್ಹಹದಮ್ ಎಂದು ಗುರುತಿಸಲಾಗಿದ್ದು, ಆತನ ಬಳಿ ರೈಫಲ್ ಪತ್ತೆಯಾಗಿದೆ ಎಂದು ಅವರು ಹೇಳಿದರು.
ಚುರಾಚಂದ್‌ಪುರ ಜಿಲ್ಲೆಯ ತೇಜಾಂಗ್ ಗ್ರಾಮದ ಅರಣ್ಯ ಪ್ರದೇಶಗಳಲ್ಲಿನ ತಂಗ್‌ಜಿಂಗ್ ರಿಡ್ಜ್‌ನ ತಪ್ಪಲಿನಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯಲ್ಲಿ ಐದು ರೈಫಲ್‌ಗಳು, ಒಂದು ಸ್ವದೇಶಿ ಮಾರ್ಟರ್, ನಾಲ್ಕು ಡಿಟೋನೇಟರ್‌ಗಳು ಮತ್ತು ಎರಡು ಗ್ರೆನೇಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ತೌಬಲ್ ಜಿಲ್ಲೆಯ ತೆಂತಾ ತುವಾಬಂದ್ ತಪ್ಪಲಿನಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ಆರು ಬಂದೂಕುಗಳು ಮತ್ತು ಹೆಚ್ಚುವರಿ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ; ಹೈದರಾಬಾದ್: ಮದ್ಯದ ಅಮಲಿನಲ್ಲಿ ಹುಚ್ಚಾಟ, ಪೆಟ್ರೋಲ್ ಬಂಕ್‌ನಲ್ಲಿ ಲೈಟರ್ ಹಚ್ಚಿದ ಕಿಡಿಗೇಡಿ


