ತಮಿಳುನಾಡು ಸಚಿವರು ಧರಿಸುವ ಬಟ್ಟೆಯ ಬಗ್ಗೆ ಯಾವುದಾದರೂ ನಿಯಮಗಳು ಮತ್ತು ನಿಬಂಧನೆಗಳು ಅಸ್ತಿತ್ವದಲ್ಲಿವೆಯೇ ಎಂದು ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠವು ತಮಿಳುನಾಡಿನ ಅಡ್ವೊಕೇಟ್ ಜನರಲ್‌ಗೆ ಕೇಳಿದ್ದು, ಈ ಬಗ್ಗೆ ಉತ್ತರಿಸಲು ಒಂದು ವಾರ ಕಾಲಾವಕಾಶ ನೀಡಿದೆ. ತಮಿಳುನಾಡು ಉಪ ಮುಖ್ಯಮಂತ್ರಿ ಉದಯನಿಧಿ ಅವರು ಟಿ ಶರ್ಟ್ ಹಾಕಿಕೊಂಡು ಬರುವುದಕ್ಕೆ ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಮದ್ರಾಸ್ ಹೈಕೋರ್ಟ್ ನಡೆಸುತ್ತಿದೆ.
ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಕ್ಯಾಶುಯಲ್ ಆಗಿ ಟಿ ಶರ್ಟ್ ಧರಿಸಿ ಬರುವುದರ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ನ್ಯಾಯಮೂರ್ತಿಗಳಾದ ಡಿ ಕೃಷ್ಣಕುಮಾರ್ ಮತ್ತು ಪಿಬಿ ಬಾಲಾಜಿ ಅವರ ಪೀಠ ವಿಚಾರಣೆ ನಡೆಸುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ವಿಚಾರಣಾ ಪೀಠವು ಇದಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ನಿಬಂಧನೆಗಳು ಯಾವುದಾದರೂ ಇದ್ದರೆ, ಅವುಗಳನ್ನು ಮುಂದಿನ ವಿಚಾರಣೆಯ ಸಮಯದಲ್ಲಿ ಪೀಠದ ಮುಂದೆ ಇರಿಸುವಂತೆ ಅರ್ಜಿದಾರರಾದ ಎಂ. ಸತ್ಯ ಕುಮಾರ್ ಮತ್ತು ತಮಿಳುನಾಡು ಅಡ್ವೊಕೇಟ್ ಜನರಲ್ ಪಿ ಎಸ್ ರಾಮನ್ ಅವರಿಗೆ ಸೂಚಿಸಿದೆ.
ಸರ್ಕಾರಿ ಕಾರ್ಯಕ್ರಮಗಳಲ್ಲಿಯೂ ಕೂಡಾ ಉಪಮುಖ್ಯಮಂತ್ರಿ ಡಿಎಂಕೆಯ ಚುನಾವಣಾ ಚಿಹ್ನೆ ‘ಉದಯ ಸೂರ್ಯ’ ಟಿ-ಶರ್ಟ್‌ಗಳನ್ನು ಧರಿಸುತ್ತಾರೆ ಎಂದು ದೂರಿ ಚೆನ್ನೈನ ಸೆಲೈಯೂರ್‌ನ ವಕೀಲ ಸತ್ಯಾ ಕುಮಾರ್ ಅವರು ಪ್ರಕರಣ ದಾಖಲಿಸಿದ್ದರು.
ಜೂನ್ 1, 2019 ರಂದು ಹೊರಡಿಸಿದ ಸರ್ಕಾರಿ ಆದೇಶಕ್ಕೆ (GO) ಬದ್ಧವಾಗಿರಲು ಉದಯನಿಧಿ ಸ್ಟಾಲಿನ್ ಅವರಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಈ ಆದೇಶವು ಸರ್ಕಾರಿ ನೌಕರರು ಅನುಸರಿಸಬೇಕಾದ ಡ್ರೆಸ್ ಕೋಡ್ ಅನ್ನು ನಿಗದಿಪಡಿಸಿತ್ತು. ಸರ್ಕಾರದ ಈ ಆದೇಶ ಸರ್ಕಾರಿ ನೌಕರರಿಗೆ ಸಂಬಂಧಿಸಿದ್ದಾಗಿದ್ದು, ಸಾರ್ವಜನಿಕ ಸೇವಕರಾದ ಸಚಿವರಿಗಲ್ಲ ಎಂದು ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅಲ್ಲದೆ, 2019 ರ ಸರ್ಕಾರಿ ಆದೇಶವು ಕ್ಯಾಶುಯಲ್ ಉಡುಪನ್ನು “ತಪ್ಪಿಸಬೇಕು” ಎಂದು ಮಾತ್ರ ಹೇಳುತ್ತದೆಯೆ ವಿನಃ, ಅದನ್ನು ಸಂಪೂರ್ಣವಾಗಿ ನಿಷೇಧಿಸುವುದಿಲ್ಲ ಎಂದು ಅವರು ನ್ಯಾಯಾಲಯದ ಗಮನಸೆಳೆದಿದ್ದಾರೆ.
ತಮಗೆ ಆರಾಮದಾಯಕವಾಗಿರುವ ಕಾರಣಕ್ಕೆ ಉಪಮುಖ್ಯಮಂತ್ರಿ ಟಿ-ಶರ್ಟ್‌ಗಳನ್ನು ಧರಿಸುತ್ತಾರೆ ಎಂದು ಅಡ್ವೊಕೇಟ್ ಜನರಲ್ ನ್ಯಾಯಾಲಯಕ್ಕೆ ಹೇಳಿದ್ದಾರೆ. “ಅಲ್ಲದೆ, ಅನೇಕ ಉನ್ನತ ಜಾಗತಿಕ ಕಾರ್ಪೊರೇಟ್ ಕಂಪನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಾರ್ವಜನಿಕ ಕಾರ್ಯಕ್ರಮಗಳಿಗೆ ಟಿ-ಶರ್ಟ್‌ಗಳನ್ನು ಧರಿಸುತ್ತಾರೆ. ಆದ್ದರಿಂದ, ಈ ಉಡುಗೆಯನ್ನು ಸೂಕ್ತವಲ್ಲ ಎಂದು ಪರಿಗಣಿಸಲು ಆಗುವುದಿಲ್ಲ” ಎಂದು ಅವರು ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಬಾಬರಿ ಮಸೀದಿ ಒಡೆದು ಕಟ್ಟಿರುವ ರಾಮ ಮಂದಿರದ ಮೂರ್ತಿಯ ಶಿಲ್ಪಿಗೂ ರಾಜ್ಯೋತ್ಸವ ಪ್ರಶಸ್ತಿ!
ಬಾಬರಿ ಮಸೀದಿ ಒಡೆದು ಕಟ್ಟಿರುವ ರಾಮ ಮಂದಿರದ ಮೂರ್ತಿಯ ಶಿಲ್ಪಿಗೂ ರಾಜ್ಯೋತ್ಸವ ಪ್ರಶಸ್ತಿ!


