ದೀಪಾವಳಿಯ ಸಂಭ್ರಮದ ನಡುವೆ ದೇಶದಾದ್ಯಂತ ಗುರುವಾರ (ಅ.31) ಸುಮಾರು 11 ನಗರಗಳಲ್ಲಿ ಮಹಿಳಾ ಗಿಗ್ ಕಾರ್ಮಿಕರು ‘ಡಿಜಿಟಲ್ ಪ್ರತಿಭಟನೆ’ ನಡೆಸುವ ಮೂಲಕ ‘ಕರಾಳ ದೀಪಾವಳಿ’ ಆಚರಣೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಸ್ವತಂತ್ರ ಪತ್ರಕರ್ತೆ ಗ್ರೀಷ್ಮಾ ಕುತಾರ್ ಅವರು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದ ಮಾಹಿತಿ ಆಧರಿಸಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಮಾಡಿರುವ ವರದಿಯ ಪ್ರಕಾರ, ಮಹಿಳಾ ಗಿಗ್ ಕಾರ್ಮಿಕರ ಒಕ್ಕೂಟ ‘ದಿ ಗಿಗ್ ಅಂಡ್ ಫ್ಲ್ಯಾಟ್‌ಫಾರ್ಮ್ ಸರ್ವಿಸ್ ವರ್ಕರ್ಸ್ ಯೂನಿಯನ್ (ಜಿಐಪಿಎಸ್‌ಡಬ್ಲ್ಯುಯು)’ ನೇತೃತ್ವದಲ್ಲಿ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡುವ ಡಿಜಿಟಲ್ ಮುಷ್ಕರ ನಡೆಸಲಾಗಿದೆ.
ಈ ಮೂಲಕ ಸರ್ಕಾರಿ ರಜಾದಿನಗಳಲ್ಲಿಯೂ ಕೆಲಸ ಮಾಡುವಂತೆ ಒತ್ತಾಯಿಸುವುದು ಸೇರಿದಂತೆ ವಿವಿಧ ಫ್ಲ್ಯಾಟ್‌ಫಾರ್ಮ್ ಕಂಪನಿಗಳ ಶೋಷಣೆಯ ವಿರುದ್ದ ಮೊದಲ ಬಾರಿಗೆ ಧ್ವನಿಯೆತ್ತಲಾಗಿದೆ.
ಕಂಪನಿಗಳ ಶೋಷಣೆಯ ಖಂಡನೆ, ತಮ್ಮ ಹಕ್ಕುಗಳನ್ನು ದೊರಕಿಸಿಕೊಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದು ಮತ್ತು ದೇಶದಾದ್ಯಂತ ವಿವಿಧ ಗಿಗ್ ಕಾರ್ಮಿಕರನ್ನು ಒಗ್ಗೂಡಿಸುವುದು ಮುಷ್ಕರದ ಉದ್ಧೇಶ ಎಂದು ಜಿಐಪಿಎಸ್‌ಡಬ್ಲ್ಯುಯು ಹೇಳಿದೆ.
ರಜೆ ನೀಡದಿರುವುದು, ಸರ್ಕಾರಿ ರಜಾ ದಿನಗಳಲ್ಲಿಯೂ ಕೆಲಸ ಮಾಡಿಸುವುದು, ಹೆಚ್ಚು ದುಡಿಸಿಕೊಂಡು ಕಡಿಮೆ ವೇತನ ಕೊಡುವುದು, ಸರಿಯಾಗಿ ವೇತನ ನೀಡದಿರುವುದು, ಅಸಾಧ್ಯವಾದ ಗಡುವುಗಳನ್ನು (Deadlines)ಪೂರೈಸಲು ಒತ್ತಡ ಹೇರುವುದು, ಕೆಲಸದ ಸ್ಥಳದ ಕಿರುಕುಳ, ಮಹಿಳಾ ಕಾರ್ಮಿಕರ ಖಾಸಗಿ ಬದುಕಿಗೆ ಅವಕಾಶ ಕೊಡದಿರುವುದು ಸೇರಿದಂತೆ ಅನೇಕ ಶೋಷಣೆಗಳ ವಿರುದ್ದ ಡಿಜಿಟಲ್ ಮುಷ್ಕರ ನಡೆಸಲಾಗಿದೆ ಎಂದಿದೆ.
ಗಿಗ್ ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡಲು ಕಾರ್ಮಿಕ ಕಾನೂನುಗಳಿಲ್ಲ. ಸರ್ಕಾರ ಕಾರ್ಮಿಕರಿಗೆ ಹಕ್ಕುಗಳ ದೊರಕಿಸಿ ಕೊಡುವ ಬದಲು ಕಾರ್ಪೋರೇಟ್ ಕಂಪನಿಗಳ ಹಿತಾಸಕ್ತಿ ಕಾಪಾಡುತ್ತಿವೆ ಎಂದು ಮುಷ್ಕರ ನಿರತ ಮಹಿಳಾ ಗಿಗ್ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳಾ ಕಾರ್ಮಿಕರಿಗೆ ಕೆಲಸಕ್ಕೆ ಸಂಬಂಧಿಸಿದ ಹಕ್ಕುಗಳನ್ನು ಮತ್ತು ಸೌಲಭ್ಯಗಳನ್ನು ನೀಡುವುದರ ಜೊತೆಗೆ, ಅವರಿಗೆ ಹೆರಿಗೆ, ಮುಟ್ಟು, ಮಕ್ಕಳ ಆರೈಕೆಗೆ ರಜೆ ನೀಡುವುದು. ಮಹಿಳಾ ಕಾರ್ಮಿಕರ ಕುಂದು ಕೊರೆತಗಳನ್ನು ಆಲಿಸಲು ಅಥವಾ ಹೇಳಿಕೊಳ್ಳಲು ಒಂದು ವೇದಿಕೆ ಒದಗಿಸುವುದು ಸೇರಿದಂತೆ ಇತರ ಬೇಡಿಕೆಗಳು ನಮ್ಮ ಮುಷ್ಕರದಲ್ಲಿ ಒಳಗೊಂಡಿವೆ ಎಂದು ಜಿಐಪಿಎಸ್‌ಡಬ್ಲ್ಯುಯುನ ಪ್ರಧಾನ ಕಾರ್ಯದರ್ಶಿ ಸೀಮಾ ಸಿಂಗ್ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಗಿಗ್ ಕಾರ್ಮಿಕರಾಗಿ ಕೆಲಸ ಮಾಡುವ ಮಹಿಳೆಯರು ಗ್ರಾಹಕರ ಮನೆಯೊಳಗೆ ಹೋಗಿ ಸೇವೆ ಒದಗಿಸಬೇಕಾಗುತ್ತದೆ. ಈ ಸಂದರ್ಭಗಳಲ್ಲಿ ಅವರು ಲೈಂಗಿಕ ಕಿರುಕುಳ, ನಿಂದನೆ, ಹಲ್ಲೆ, ತುರ್ತು ಸಂದರ್ಭಗಳಲ್ಲಿ ಶೌಚಾಲಯದ ನಿರಾಕರಣೆ ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ವೇಳೆ ಅವರಿಂದ ಕೆಲಸ ಮಾಡಿಸಿಕೊಳ್ಳುತ್ತಿರುವ ಕಂಪನಿಗಳು ಯಾವುದೇ ಸಹಾಯಕ್ಕೆ ಬರುವುದಿಲ್ಲ ಎಂದು ಸೀಮಾ ಸಿಂಗ್ ವಿವರಿಸಿದ್ದಾರೆ.
ನಾವು ದುರ್ಬಲರು, ನಮ್ಮ ಕೈಯ್ಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ನಮಗೆ ಕುಟುಂಬ ನಡೆಸಲು ಕೆಲಸ ಅನಿವಾರ್ಯ ಎಂದು ಅವರಿಗೆ (ಕಂಪನಿಗಳಿಗೆ) ಗೊತ್ತಿದೆ. ಇಂದು ನಾವು ಮೊದಲ ಮುಷ್ಕರ ನಡೆಸುತ್ತಿದ್ದೇವೆ. ಮುಂದೆ ದೊಡ್ಡ ಮಟ್ಟದ ಹೋರಾಟಗಳನ್ನು ನಡೆಸುವ ಉದ್ದೇಶವಿದೆ. ನಮ್ಮನ್ನು ದುಡಿಸಿಕೊಳ್ಳುವ ಪ್ಲಾಟ್‌ಫಾರ್ಮ್ ಕಂಪನಿಗಳು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುವಂತೆ ಮಾಡುವುದು ಸರ್ಕಾರದ ಜವಾಬ್ದಾರಿ ಎಂದು ಜಿಐಪಿಎಸ್‌ಡಬ್ಲ್ಯುಯುನ ಉಪಾಧ್ಯಕ್ಷೆ ಸೆಲ್ವಿ ಎಂ ಹೇಳಿದ್ದಾರೆ.
ಇದನ್ನೂ ಓದಿ : ಕೇಂದ್ರಾಡಳಿತ ಸಂಸ್ಥಾಪನಾ ದಿನ ಜಮ್ಮು ಕಾಶ್ಮೀರಕ್ಕೆ ‘ಕಪ್ಪು ದಿನ’ – ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ


