ತೆರಿಗೆ ಪಾಲು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಸಮಸ್ಯೆ ಸರಿಪಡಿಸಿ ಎಂದರೂ ನ್ಯಾಯ ದೊರೆತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಬೆಂಗಳೂರಿನ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನಡೆಸಿ ಅವರು ಮಾತನಾಡಿದರು.
15ನೇ ಹಣಕಾಸು ಆಯೋಗ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಅದನ್ನು ಸರಿಪಡಿಸಿ ಎಂದು ಹಲವು ಬಾರಿ ಕೇಳಿಕೊಂಡರೂ ನ್ಯಾಯ ದೊರೆತಿಲ್ಲ. ನ್ಯಾಯಯುತವಾದ ಪಾಲನ್ನು ಕೊಡಿ ಎಂದು ಕೇಳುವ ಶಕ್ತಿ ಬೆಳೆಸಿಕೊಂಡಾಗ ಮಾತ್ರ, ಇದೆಲ್ಲಾ ಪರಿಹಾರವಾಗುತ್ತದೆ. ರಾಜ್ಯದಿಂದ ಸಂಸತ್‌ಗೆ ಆಯ್ಕೆಯಾದವರು ಈ ಅನ್ಯಾಯದ ವಿರುದ್ದ ಧ್ವನಿ ಎತ್ತಬೇಕು ಎಂದರು.
ಕರ್ನಾಟಕ ರಾಜ್ಯ, ದೇಶದಲ್ಲಿ ಅತಿ ಹೆಚ್ಚು ತೆರಿಗೆ ನೀಡುವ ಎರಡನೇ ರಾಜ್ಯವಾಗಿದೆ. 4 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ನೀಡಿದರೂ, ಕೇಂದ್ರದಿಂದ ದೊರೆಯುವ ತೆರಿಗೆ ಪಾಲು ಕೇವಲ 50-60 ಸಾವಿರ ಕೋಟಿ ಮಾತ್ರ. ಕನ್ನಡ ನಾಡು ಮುಂದುವರೆದಿದೆ ಎಂದು ಕೇಂದ್ರ ಸರ್ಕಾರ ನಮಗೆ ಅನ್ಯಾಯವೆಸಗಬಾರದು. ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ತೆರಿಗೆ ಪಾಲನ್ನು ನೀಡಿ ಎಂದು… pic.twitter.com/WrIPowwqTJ
— CM of Karnataka (@CMofKarnataka) November 1, 2024
ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಅದನ್ನುಒಪ್ಪಿಕೊಂಡಿದ್ದೇವೆ. ಸಂವಿಧಾನವನ್ನೂ ಒಪ್ಪಿಕೊಂಡಿದ್ದೇವೆ. ಹಾಗೆಂದು ನಮಗೆ ಅನ್ಯಾಯವಾದಾಗ ಅದನ್ನು ಎದರಿಸದೆ ಇರಲಾಗದು. ನಮ್ಮ ಹಕ್ಕುಗಳ ರಕ್ಷಣೆಗಾಗಿ ಹೋರಾಟ ಮಾಡಲೇಬೇಕು. ಕರ್ನಾಟಕಕ್ಕೆ ದೊರೆಯಬೇಕಾದ ತೆರಿಗೆ ಪಾಲನ್ನು ಕೇಳಿದರೆ, ಅದಕ್ಕೆ ರಾಜಕೀಯ ಬೆರೆಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ನಾವು 4 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಕೊಟ್ಟರೂ ಪಡೆಯುತ್ತಿರುವುದು ಕೇವಲ 50-60 ಸಾವಿರ ಕೋಟಿ ಮಾತ್ರ. ಅಂದರೆ, 1ರೂ.ಗೆ 14-15 ಪೈಸೆ ಮಾತ್ರ ನಮಗೆ ವಾಪಸ್ ಬರುತ್ತಿದೆ. ನಾವು ಮುಂದುವರೆದ ರಾಜ್ಯ ಎಂದು ತೆರಿಗೆ ಪಾಲಿನಲ್ಲಿ ಅನ್ಯಾಯ ಮಾಡುತ್ತಿದ್ದಾರೆ ಎಂದರು.
ಇದನ್ನೂ ಓದಿ : ವಕ್ಫ್ ಸ್ವತ್ತುಗಳನ್ನು ರಾಷ್ಟ್ರೀಕರಣಗೊಳಿಸಲು ಪ್ರಧಾನಿಗೆ ಪತ್ರ ಬರೆದ ಶಾಸಕ ಯತ್ನಾಳ್


