ಈ ವರ್ಷದ (2024) 10 ತಿಂಗಳ ಅವಧಿಯಲ್ಲಿ ಸೈಬರ್ ವಂಚಕರು ಭಾರತೀಯರ ಬರೋಬ್ಬರಿ 2, 140 ಕೋಟಿ ರೂಪಾಯಿಗಳನ್ನು ದೋಚಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯದ ಸೈಬರ್ ವಿಭಾಗ ಐ4ಸಿ (I4C) ವರದಿ ತಿಳಿಸಿದೆ.
ಡಿಜಿಟಲ್ ಅರೆಸ್ಟ್ ವಂಚನೆಯ ಮೂಲಕ ಹೆಚ್ಚಿನ ಹಣವನ್ನು ದೋಚಲಾಗಿದೆ. ಸೈಬರ್ ವಂಚಕರು ಜಾರಿ ನಿರ್ದೇಶನಾಲಯ (ಇಡಿ) ಕೇಂದ್ರಿಯ ತನಿಖಾ ದಳ (ಸಿಬಿಐ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮತ್ತು ಪೊಲೀಸ್ ಅಧಿಕಾರಿಗಳಂತೆ ಸೋಗು ಹಾಕಿ ಜನರು ತಮ್ಮ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾಯಿಸುವಂತೆ ಮಾಡುತ್ತಿದ್ದಾರೆ ಎಂದು ವರದಿ ಹೇಳಿದೆ.
ಹೆಚ್ಚಿನ ಸೈಬರ್ ವಂಚನೆಗಳು ಅಥವಾ ಡಿಜಿಟಲ್ ಅರೆಸ್ಟ್ ವಂಚನೆಯನ್ನು ಕಾಂಬೋಡಿಯಾ, ಮ್ಯಾನ್ಮಾರ್, ವಿಯೆಟ್ನಾಂ, ಲಾವೋಸ್ ಮತ್ತು ಥೈಲ್ಯಾಂಡ್‌ನಂತಹ ದೇಶಗಳಿಂದ ಕಾರ್ಯನಿರ್ವಹಿಸುತ್ತಿರುವ ಹಲವಾರು ಕಾಲ್ ಸೆಂಟರ್‌ಗಳಿಂದ ಮಾಡಲಾಗುತ್ತಿದೆ.
ಕಾಂಬೋಡಿಯಾ ಮತ್ತು ಚೀನಾ ಒಡೆತನದ ಕ್ಯಾಸಿನೋಗಳಲ್ಲಿ ಹೆಚ್ಚಾಗಿ ಈ ಕಾಲ್ ಸೆಂಟರ್‌ಗಳು ನೆಲೆಗೊಂಡಿವೆ. ಅಲ್ಲಿನ ಸೈಬರ್ ಗುಲಾಮಗಿರಿಯು ಕಳವಳಕಾರಿ ವಿಷಯವಾಗಿದೆ. ವಂಚನೆಯ ಮೂಲ ವಿದೇಶದಲ್ಲಿದ್ದರೂ, ಅದಕ್ಕೆ ಬಲಿಯಾಗುತ್ತಿರುವ 30 ರಿಂದ 40 ಶೇಖಡ ಜನರು ಭಾರತೀಯರು. ಇಲ್ಲಿನ ಸ್ಥಳೀಯ ವಂಚನೆಯ ಜಾಲಗಳೂ ಈ ವಿಚಾರದಲ್ಲಿ ಸಕ್ರಿಯವಾಗಿವೆ ಎಂದು ವರದಿ ವಿವರಿಸಿದೆ.
ವರದಿಯ ಪ್ರಕಾರ, ಜನವರಿ 2024 ರಿಂದ, ಭಾರತದಲ್ಲಿ 92,334ಕ್ಕೂ ಹೆಚ್ಚು ಡಿಜಿಟಲ್ ಅರೆಸ್ಟ್ ಘಟನೆಗಳು ನಡೆದಿವೆ. ಬಹುತೇಕ ಪ್ರಕರಣಗಳಲ್ಲಿ ತಕ್ಷಣ ಹಣ ವರ್ಗಾಯಿಸದಿದ್ದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೆದರಿಕೊಂಡು ಜನರು ಮೋಸ ಹೋಗುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವರದಿಯ ಬೆನ್ನಲ್ಲೇ ಕೇಂದ್ರ ಗೃಹ ಸಚಿವಾಲಯ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ಸೈಬರ್ ಸೆಕ್ಯುರಿಟಿ ಏಜೆನ್ಸಿ CERT-IN ಜನರು ಸೈಬರ್ ವಂಚನೆಯ ಜಾಲದಲ್ಲಿ ಬಿದ್ದಿರುವ ಅನುಮಾನ ಎದುರಾದರೆ ರಕ್ಷಣೆ ಪಡೆಯಲು ಹಲವು ಸಲಹೆಗಳನ್ನು ನೀಡಿದೆ. ವಂಚನೆಗೊಳಗಾದವರು ಸಹಾಯವಾಣಿ ಸಂಖ್ಯೆ 1930ಗೆ ಕರೆ ಮಾಡಿ ಐ4ಸಿಗೆ ನೇರವಾಗಿ ವರದಿ ಮಾಡಬಹುದು. ಹೀಗೆ ವರದಿ ಮಾಡಿದರೆ, ಜನರು ಕಳೆದುಕೊಂಡಿರುವ ಹಣವನ್ನು ಮರಳಿ ಪಡೆಯಬಹುದು ಅಥವಾ ನಷ್ಟವನ್ನು ತಡೆಗಟ್ಟಲು ಗರಿಷ್ಠ ಪ್ರಯತ್ನ ಮಾಡಬಹುದು.
ಹೆಚ್ಚುತ್ತಿರುವ ಡಿಜಿಟಲ್ ಅರೆಸ್ಟ್ ವಂಚನೆಯ ಕುರಿತು ಅಕ್ಟೋಬರ್ 27ರಂದು ನಡೆದ ಮನ್ ಕಿ ಬಾತ್ 115ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ ಉಲ್ಲೇಖಿಸಿದ ಬಳಿಕ ಹೆಚ್ಚಿನ ಚರ್ಚೆ ನಡೆಯುತ್ತಿದೆ.
ಈ ಡಿಜಿಟಲ್ ಅರೆಸ್ಟ್ ಅಂದರೆ ಏನು? ಅದರ ಮೂಲಕ ಹೇಗೆ ಜನರಿಂದ ಹಣ ದೋಚಲಾಗುತ್ತದೆ ಎಂಬುವುದರ ಕುರಿತ ವಿಸ್ಕೃತ ವರದಿ ಕೆಳಗಿದೆ ⇓
ಇದನ್ನೂ ಓದಿ : Explained : ಏನಿದು ‘ಡಿಜಿಟಲ್ ಅರೆಸ್ಟ್’ ವಂಚನೆ?


