ಕೊಪ್ಪಳದ ಮರಕುಂಬಿ ಗ್ರಾಮದಲ್ಲಿ ನಡೆದ ದಲಿತ ದೌರ್ಜನ್ಯ ಪ್ರಕರಣದಲ್ಲಿ 98 ಮಂದಿಗೆ ಜೀವಾವಧಿ ಸೇರಿ 101 ಅಪರಾಧಿಗಳಿಗೆ ಶಿಕ್ಷೆಯಾಗಿರುವುದು ದೇಶದಾದ್ಯಂತ ಚರ್ಚೆಯಲ್ಲಿರುವ ನಡುವೆ, ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರದಲ್ಲಿ ಅಸ್ಪೃಶ್ಯತೆ ಆಚರಣೆ ನಡೆದಿರುವ ಆರೋಪ ಕೇಳಿ ಬಂದಿದೆ.
ದೊಡ್ಡಬಳ್ಳಾಪುರದ ನಗರ ಕೇಂದ್ರದಿಂದ ಕೇವಲ 3 ಕಿ.ಮೀ ದೂರದಲ್ಲಿರುವ ಮಲ್ಲಾತಹಳ್ಳಿಯ ದೇವಸ್ಥಾನಗಳಲ್ಲಿ ದೀಪಾವಳಿಯ ಪ್ರಯುಕ್ತ ಆಯೋಜಿಸಿದ್ದ ದೀಪಾರತಿ ಕಾರ್ಯಕ್ರಮದಲ್ಲಿ ಆರತಿ ಹೊತ್ತ ದಲಿತ ಮಹಿಳೆಯರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.
ಮಲ್ಲಾತಹಳ್ಳಿ ಗ್ರಾಮದಲ್ಲಿ ಚನ್ನಕೇಶವ, ಮದ್ದೂರಮ್ಮ, ಗಂಗಮ್ಮ ಮತ್ತು ಮಾರಮ್ಮ ದೇವಸ್ಥಾನಗಳಿವೆ. ಚನ್ನಕೇಶವ ಮತ್ತು ಮದ್ದೂರಮ್ಮ ಸವರ್ಣೀಯರ ಒಡೆತನದ್ದಲ್ಲಿದ್ದು, ಗಂಗಮ್ಮ ದೇವಸ್ಥಾನ ದಲಿತರ ಒಡೆತನದಲ್ಲಿದೆ.
ಈ ದೇವಸ್ಥಾನಗಳು 40 ವರ್ಷಗಳ ಹಿಂದಿನ ಹಳೆಯ ಕಟ್ಟಡಗಳನ್ನು ಹೊಂದಿದ್ದ ಕಾರಣ, ಕಳೆದ ವರ್ಷ ಜೀರ್ಣೋದ್ದಾರ ಮಾಡಲಾಗಿತ್ತು. ಕಳೆದ 15 ದಿನಗಳ ಹಿಂದೆ ಗ್ರಾಮದಲ್ಲಿ ಸಭೆ ನಡೆಸಿದ್ದ ದಲಿತರು ಮತ್ತು ಸವರ್ಣೀಯರು ಗಂಗಮ್ಮ, ಮದ್ದೂರಮ್ಮ ಮತ್ತು ಚನ್ನಕೇಶವ ದೇವಸ್ಥಾನಗಳಲ್ಲಿ ದೀಪಾವಳಿಯ ಪ್ರಯುಕ್ತ ದೀಪಾರತಿ ಮಾಡಲು ನಿರ್ಧರಿಸಿದ್ದರು.
ಕಳೆದ ಶುಕ್ರವಾರ (ನ.1) ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ದಲಿತ ಮಹಿಳೆಯರು ಆರತಿಗಳನ್ನು ಹೊತ್ತುಕೊಂಡು ಚನ್ನಕೇಶವ, ಮದ್ದೂರಮ್ಮ ಮತ್ತು ಗಂಗಮ್ಮ ದೇವಸ್ಥಾನಗಳ ಬಳಿಗೆ ಹೋಗಿದ್ದಾರೆ. ಈ ವೇಳೆ ಅವರನ್ನು ತಡೆದ ಸವರ್ಣೀಯರು, ಸವರ್ಣೀಯ ಮಹಿಳೆಯರ ಹಿಂದೆ ಬರುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ಮೊದಲು ಸವರ್ಣೀಯ ಮಹಿಳೆಯರ ಆರತಿಗಳನ್ನು ದೇವಸ್ಥಾನಗಳ ಒಳಗೆ ಬಿಡಲಾಗಿದೆ. ದಲಿತ ಮಹಿಳೆಯರನ್ನು ದೇವಸ್ಥಾನದ ಕಾಪೌಂಡ್ ಬಳಿಯೇ ತಡೆದು, ಕಾಂಪೌಂಡ್ ಹೊರಗೆ ನಿಂತು ಪೂಜೆ ಮಾಡಲು ಹೇಳಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿ ಒಳ ಹೋಗಲು ಮುಂದಾದಾಗ ದೇವಸ್ಥಾನದ ಗೇಟಿಗೆ ಬೀಗ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ದಲಿತರಿಗೆ ದೇವಸ್ಥಾನ ಪ್ರವೇಶ ನಿರಾಕರಣೆಯ ಕುರಿತು ಸವರ್ಣೀಯ ಮುಖಂಡರ ಜೊತೆ ಮಾತನಾಡಲು ಹೋದಾಗ, ದಲಿತರ ವಿರುದ್ದವೇ ದೂರು ನೀಡಲಾಗಿದೆ. ಇದೇ ವಿಚಾರವಾಗಿ ವಾಗ್ವಾದ ನಡೆದು ದಲಿತ ಯುವಕನೋರ್ವನನ್ನು ತಳ್ಳಲಾಗಿದ್ದು, ಆತನ ಕೈ ಕಾಲುಗಳಿಗೆ ತರಚಿದ ಗಾಯಗಳಾಗಿದೆ. ದೇವಸ್ಥಾನ ಪ್ರವೇಶ ನಿರಾಕರಣೆ ಸಂಬಂಧ ದಲಿತರು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಆದರೆ, ಪೊಲೀಸರು ಅಶ್ಪೃಶ್ಯತೆ ಆಚರಣೆಯ ವಿರುದ್ದ ಕ್ರಮ ಜರುಗಿಸದೆ ಎರಡು ಸಮುದಾಯಗಳ ಮುಖಂಡರ ನಡುವೆ ರಾಜಿ ಸಂಧಾನ ಮಾಡಿ ಕಳುಹಿಸಿದ್ದಾರೆ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ : ‘ಪೇಮೆಂಟ್ ಸೀಟ್ ಅಧ್ಯಕ್ಷ’ | ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಸಿಎಂ ಸಿದ್ದರಾಮಯ್ಯ ವ್ಯಂಗ್ಯ


