ನಟ, ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಜಾತಿ ಗಣತಿಯನ್ನು ವಿಳಂಬ ಮಾಡುತ್ತಿರುವ ತಮಿಳುನಾಡು ಸರ್ಕಾರದ ವಿರುದ್ದ ಅಸಮಧಾನ ವ್ಯಕ್ತಪಡಿಸಿದೆ. ನವೆಂಬರ್ 3 ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆ ಮತ್ತು ಒಂದು ರಾಷ್ಟ್ರ ಒಂದು ಚುನಾವಣಾ ಯೋಜನೆಯ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಿದೆ ಮತ್ತು ಶಿಕ್ಷಣವನ್ನು ಸಮಾನಂತರ ಪಟ್ಟಿಯಿಂದ ರಾಜ್ಯ ಪಟ್ಟಿಗೆ ವರ್ಗಾಯಿಸಬೇಕೆಂದು ಒತ್ತಾಯಿಸಿದೆ. ಸಭೆಯಲ್ಲಿ ಒಟ್ಟು 26 ನಿರ್ಣಯಗಳನ್ನು ಅಂಗೀಕರಿಸಿದೆ.
ಚೆನ್ನೈನ ಪನಾಯೂರ್‌ನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ಟಿವಿಕೆ ಹೈಕಮಾಂಡ್‌ನಿಂದ ಪಕ್ಷದ ಮುಖ್ಯಸ್ಥ, ಪ್ರಧಾನ ಕಾರ್ಯದರ್ಶಿ ಬುಸ್ಸಿ ಆನಂದ್, ಪಕ್ಷದ ಜಿಲ್ಲಾ ಕಾರ್ಯದರ್ಶಿಗಳು ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ರಾಷ್ಟ್ರ ಮತ್ತು ರಾಜ್ಯದಲ್ಲಿ ಜಾತಿಗಣತಿ ನಡೆಸಬೇಕೆಂದು ಬಲವಾಗಿ ಪ್ರತಿಪಾದಿಸಿರುವ ಟಿವಿಕೆ, ಸಾಮಾಜಿಕ ನ್ಯಾಯದ ಹಾದಿಯಲ್ಲಿ ನಡೆಯುತ್ತಿದ್ದೇವೆ ಎಂದು ಹೇಳಿಕೊಳ್ಳುವ ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಗಂ) ಅನ್ನು ಜನರು ನಂಬುವುದಿಲ್ಲ. ಏಕೆಂದರೆ, ಸಾಮಾಜಿಕ ನ್ಯಾಯವನ್ನು ತರುವ ಸಲುವಾಗಿ ಅವರು ಜಾತಿಗಣತಿ ನಡೆಸುತ್ತಿಲ್ಲ, ವಿಳಂಬ ಮಾಡುತ್ತಿದ್ದಾರೆ ಎಂದು ಟಿವಿಕೆ ತನ್ನ ನಿರ್ಣಯದಲ್ಲಿ ಹೇಳಿದೆ.
ಏಕಕಾಲದಲ್ಲಿ ವಿಧಾನಸಭೆ ಮತ್ತು ಸಂಸತ್ತಿನ ಚುನಾವಣೆಗಳನ್ನು ನಡೆಸುವ ಕೇಂದ್ರ ಸರ್ಕಾರದ ‘ಒಂದು ರಾಷ್ಟ್ರ ಒಂದು ಚುನಾವಣೆ’ ಪ್ರಸ್ತಾಪವನ್ನು ಕಠುವಾಗಿ ವಿರೋಧಿಸಿರುವ ಟಿವಿಕೆ, ಈ ಯೋಜನೆ ಪ್ರಜಾಪ್ರಭುತ್ವ ವಿರೋಧಿ ಎಂದು ಕರೆದಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿ ರಹಸ್ಯವಾಗಿ ಮತ್ತು ನೇರವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದೆ.
“ಸಾರ್ವಜನಿಕರ ನೈಜ ಸಮಸ್ಯೆಗಳನ್ನು ಮುಂದಿಡುವುದು ಮತ್ತು ಜನವಿರೋಧಿ ನೀತಿಗಳನ್ನು ವಿರೋಧಿಸುವುದು ವಿರೋಧ ಪಕ್ಷಗಳ ಕರ್ತವ್ಯ ಮಾತ್ರವಲ್ಲದೆ ಹಕ್ಕು. ಆ ಹಕ್ಕನ್ನು ಹಿಮ್ಮೆಟ್ಟಿಸುವುದು, ಮಾಧ್ಯಮಗಳಿಗೆ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡದಿರುವುದು, ವ್ಯಕ್ತಿಗಳ ಮೇಲೆ ಸಾಮಾಜಿಕ ಮಾಧ್ಯಮಗಳ ದಾಳಿ ನಡೆಸುವುದು ಸರ್ಕಾರದ ಜನವಿರೋಧಿ ನೀತಿಗಳಾಗಿವೆ. ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಸೇರಿದಂತೆ ಯಾರೇ ಈ ರೀತಿಯ ಜನ ವಿರೋಧಿ ರಾಜಕೀಯ ಮಾಡಿದರೂ ನಾವು ಖಂಡಿಸುತ್ತೇವೆ” ಎಂದು ಟಿವಿಕೆ ಹೇಳಿದೆ.
ಪ್ರಸ್ತುತ ಭಾರೀ ಚರ್ಚೆಯಲ್ಲಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನೂ ಟಿವಿಕೆ ವಿರೋಧಿಸಿದ್ದು, ತಿದ್ದುಪಡಿ ಮಸೂದೆ ‘ಮುಸ್ಲಿಮರ ಹಕ್ಕುಗಳಿಗೆ ವಿರುದ್ಧವಾಗಿದೆ’ ಎಂದು ಹೇಳುವ ಮೂಲಕ ಅದನ್ನು ಹಿಂಪಡೆಯುವಂತೆ ಒತ್ತಾಯಿಸಿದೆ.
ಕೇಂದ್ರ ಸರ್ಕಾರವು ಶಿಕ್ಷಣವನ್ನು ಸಮಾನಂತರ ಪಟ್ಟಿಯಿಂದ ರಾಜ್ಯ ಪಟ್ಟಿಗೆ ವರ್ಗಾಯಿಸಬೇಕು ಎಂದು ಟಿವಿಕೆ ಒತ್ತಾಯಿಸಿದೆ. ಇದು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಕಲ್ಪಿಸಲು ನಡೆಸುವ ವಿವಾದಾತ್ಮಕ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್) ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ಅನುವು ಮಾಡಿಕೊಡುತ್ತದೆ ಎಂದಿದೆ. ಹಿಂದಿ ಹೇರಿಕೆ, ಇತ್ತೀಚೆಗೆ ತಮಿಳು ನಾಡಗೀತೆಯಿಂದ ದ್ರಾವಿಡ ಪದ ಕೈಬಿಟ್ಟು ಹಾಡಿರುವುದು ಸೇರಿದಂತೆ ಇತರ ವಿಚಾರಗಳನ್ನು ಟಿವಿಕೆ ಖಂಡಿಸಿದೆ.
ಇದಲ್ಲದೆ, ಪರಂಧೂರ್‌ನಲ್ಲಿ ಎರಡನೇ ವಿಮಾನ ನಿಲ್ದಾಣದ ನಿರ್ಮಾಣ ಮತ್ತು ನೇವೇಲಿ ಲಿಗ್ನೈಟ್ ಕಾರ್ಪೊರೇಶನ್‌ನ ವಿಸ್ತರಣೆಯನ್ನು ಟಿವಿಕೆ ಖಂಡಿಸಿದೆ. ಇವೆರಡನ್ನೂ ರೈತರು ಮತ್ತು ಪರಿಸರವಾದಿಗಳು ವಿರೋಧಿಸಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರವು ಕಠಿಣ ಕಾನೂನುಗಳನ್ನು ತರಬೇಕು ಮತ್ತು ತಪ್ಪಿತಸ್ಥರಿಗೆ ‘ಗರಿಷ್ಠ ಶಿಕ್ಷೆ’ ವಿಧಿಸಬೇಕು ಎಂದು ಟಿವಿಕೆ ಒತ್ತಾಯಿಸಿದೆ.
ಕೆ ಕಾಮರಾಜ್, ಡಾ. ಬಿಆರ್ ಅಂಬೇಡ್ಕರ್ ಮತ್ತು ಪೆರಿಯಾರ್ ಅವರ ಹೆಜ್ಜೆಗಳನ್ನು ಅನುಸರಿಸುವುದು, ಕೊಯಮತ್ತೂರಿಗೆ ಮೆಟ್ರೋ ರೈಲು, ಶ್ರೀಲಂಕಾ ತಮಿಳರು ಮತ್ತು ಮೀನುಗಾರರ ಹಕ್ಕುಗಳ ರಕ್ಷಣೆ, ಮದ್ಯ ನಿಷೇಧ, ವಿದ್ಯುತ್ ದರಗಳಲ್ಲಿ ಏರಿಕೆಗೆ ಖಂಡನೆ ಸೇರಿದಂತೆ ಹಲವು ವಿಷಯಗಳ ಸಂಬಂಧ ಟಿವಿಕೆ ನಿರ್ಣಯ ಅಂಗೀಕರಿಸಿದೆ. ಪಕ್ಷವು ‘ಜಾತ್ಯತೀತ ಸಾಮಾಜಿಕ ನ್ಯಾಯ’ ತಮ್ಮ ಸೈದ್ಧಾಂತಿಕ ನಿಲುವು ಎಂದು ಪುನರುಚ್ಚರಿಸಿದೆ. ಅಕ್ಟೋಬರ್ 27 ರಂದು ನಡೆದ ಮೊದಲ ರಾಜ್ಯದ ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಧನ್ಯವಾದ ಹೇಳಿದೆ.
ಇದನ್ನೂ ಓದಿ : ಆಂಬ್ಯುಲೆನ್ಸ್ ದುರ್ಬಳಕೆ ಆರೋಪ : ಕೇಂದ್ರ ಸಚಿವ ಸುರೇಶ್ ಗೋಪಿ ವಿರುದ್ದ ಪ್ರಕರಣ ದಾಖಲು


