ಪ್ರತಿಪಕ್ಷಗಳ ವಿರುದ್ಧ ‘ಸ್ಪಷ್ಟ ಪಕ್ಷಪಾತ’ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ ಹಿನ್ನೆಲೆ ಚುನಾವಣಾ ಆಯೋಗ ಇಂದು (ನ.4) ಮಹಾರಾಷ್ಟ್ರದ ಡಿಜಿಪಿ ರಶ್ಮಿ ಶುಕ್ಲಾ ಅವರನ್ನು ವರ್ಗಾವಣೆ ಮಾಡಿದೆ.
ಡಿಜಿಪಿ ರಶ್ಮಿ ಶುಕ್ಲಾ ಅವರ ಜವಾಬ್ದಾರಿಯನ್ನು ಮಹಾರಾಷ್ಟ್ರ ಕೇಡರ್‌ನ ಮುಂದಿನ ಹಿರಿಯ ಐಪಿಎಸ್ ಅಧಿಕಾರಿಗೆ ಹಸ್ತಾಂತರಿಸುವಂತೆ ಚುನಾವಣಾ ಆಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಜಾತಾ ಸೌನಿಕ್ ಅವರಿಗೆ ಆದೇಶಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.
ಹೊಸ ಡಿಜಿಪಿಯ ಆಯ್ಕೆಗೆ ನಾಳೆ (ನ.5) ಮಧ್ಯಾಹ್ನದೊಳಗೆ ಮೂವರು ಐಪಿಎಸ್ ಅಧಿಕಾರಿಗಳ ಸಮಿತಿ ರಚಿಸುವಂತೆ ಮುಖ್ಯ ಕಾರ್ಯದರ್ಶಿಗೆ ಚುನಾವಣಾ ಆಯೋಗ ಸೂಚಿಸಿದೆ.
ಕಳೆದ ತಿಂಗಳು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ ಅವರು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಪತ್ರ ಬರೆದು ಡಿಜಿಪಿ ಸ್ಥಾನದಿಂದ ರಶ್ಮಿ ಶುಕ್ಲಾ ಅವರನ್ನು ವಜಾ ಅಥವಾ ಅಮಾನತುಗೊಳಿಸುವಂತೆ ಮನವಿ ಮಾಡಿದ್ದರು.
ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಎಸ್‌ಪಿ) ಸೇರಿದಂತೆ ರಾಜ್ಯದ ವಿರೋಧ ಪಕ್ಷಗಳ ವಿರುದ್ಧ ಡಿಜಿಪಿ ಶುಕ್ಲಾ ಅವರು ‘ಸ್ಪಷ್ಟ ಪಕ್ಷಪಾತ’ ಪ್ರದರ್ಶಿಸುತ್ತಿದ್ದಾರೆ ಎಂದು ಪತ್ರದಲ್ಲಿ ಪಟೋಲೆ ಆರೋಪಿಸಿದ್ದರು.
ಶುಕ್ಲಾ ಅವರು ಪುಣೆ ಪೊಲೀಸ್ ಆಯುಕ್ತರಾಗಿದ್ದಾಗ ಪ್ರತಿಪಕ್ಷ ನಾಯಕರ ಅಕ್ರಮ ಫೋನ್ ಕದ್ದಾಲಿಕೆ ಆರೋಪ ಹೊತ್ತಿದ್ದರು ಎಂದು ಅವರು ಹೇಳಿದ್ದರು.
ಸುದ್ದಿಗೋಷ್ಠಿ ಮತ್ತು ಇತರ ಹೇಳಿಕೆಗಳ ಮೂಲಕ ಡಿಜಿಪಿಯನ್ನು ವಜಾಗೊಳಿಸುವಂತೆ ನಾವು ಹಲವು ಬಾರಿ ಮನವಿ ಮಾಡಿದ್ದೇವೆ. ಕಳೆದ 20 ದಿನಗಳಿಂದ ಪ್ರತಿಪಕ್ಷಗಳ ನಾಯಕರ ವಿರುದ್ದ ರಾಜಕೀಯ ಹಿಂಸಾಚಾರ ನಡೆಯುತ್ತಿದೆ. ಪ್ರತಿಪಕ್ಷಗಳು ಮತ್ತು ನಾಯಕರ ಕಾರ್ಯಕ್ರಮಗಳಲ್ಲಿ ಕಾನೂನು ಸುವ್ಯವಸ್ಥೆ ಕ್ಷೀಣಿಸಿದೆ. ಇದರ ಹಿಂದೆ ಡಿಜಿಪಿಯವರ ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಎಸ್‌ಪಿ) ವಿರುದ್ದದ ಪಕ್ಷಪಾತಿ ಧೋರಣೆ ಇದೆ. ಡಿಜಿಪಿ ರಶ್ಮಿ ಶುಕ್ಲಾ ಅವರು ಪುಣೆಯ ಪೊಲೀಸ್ ಆಯುಕ್ತೆ ಮತ್ತು ರಾಜ್ಯ ಗುಪ್ತಚರ ಇಲಾಖೆ (ಎಸ್‌ಐಡಿ) ಆಯುಕ್ತೆ ಆಗಿದ್ದಾಗ ಪ್ರತಿಪಕ್ಷ ನಾಯಕರ ಫೋನ್ ಕದ್ದಾಲಿಕೆ ಮಾಡಿರುವುದು ಇದಕ್ಕೆ ಸಾಕ್ಷಿ ಎಂದು ನಾನಾ ಪಟೋಲೆ ತನ್ನ ಪತ್ರದಲ್ಲಿ ಹೇಳಿದ್ದರು.
“ರಾಜ್ಯದ ಪೊಲೀಸ್ ಮಹಾನಿರ್ದೇಶಕಿ ರಶ್ಮಿ ಶುಕ್ಲಾ ವಿರುದ್ಧ ಬಹಳ ಗಂಭೀರವಾದ ಆರೋಪವಿದೆ. 2019 ರಲ್ಲಿ ನಮ್ಮ ಸರ್ಕಾರ ರಚನೆಯಾದಾಗ ಅವರು ನೇರವಾಗಿ ಬಿಜೆಪಿ ಪರ ಕೆಲಸ ಮಾಡುತ್ತಿದ್ದರು. ನಮ್ಮೆಲ್ಲ ಫೋನ್‌ಗಳನ್ನು ಟ್ಯಾಪ್ ಮಾಡಿ, ನಾವು ಏನು ಮಾಡಲಿದ್ದೇವೆ ಎಂಬುವುದರ ಕುರಿತು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ಗೆ ಸಂಪೂರ್ಣ ಮಾಹಿತಿ ನೀಡುತ್ತಿದ್ದರು” ಎಂದು ರಾಜ್ಯಸಭಾ ಸಂಸದ ಮತ್ತು ಶಿವಸೇನೆ (ಯುಬಿಟಿ) ನಾಯಕ ಸಂಜಯ್ ರಾವುತ್ ಕೂಡ ಮಾಧ್ಯಮಗಳ ಮುಂದೆ ಹೇಳಿದ್ದರು.
ಇದನ್ನೂ ಓದಿ : ಆಂಬ್ಯುಲೆನ್ಸ್ ದುರ್ಬಳಕೆ ಆರೋಪ : ಕೇಂದ್ರ ಸಚಿವ ಸುರೇಶ್ ಗೋಪಿ ವಿರುದ್ದ ಪ್ರಕರಣ ದಾಖಲು


