ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳನ್ನು ಬೆಂಬಲಿಸುವುದಿಲ್ಲ ಎಂದು ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಸೋಮವಾರ ಘೋಷಿಸಿದ್ದಾರೆ. ನಾಮಪತ್ರ ಸಲ್ಲಿಸಿರುವ ತಮ್ಮ ಬೆಂಬಲಿಗರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆಯುವಂತೆ ಅವರು ಒತ್ತಾಯಿಸಿದ್ದಾರೆ.
ನಾಮಪತ್ರ ಹಿಂಪಡೆಯಲು ಸೋಮವಾರ ಕೊನೆಯ ದಿನವಾಗಿದೆ. ನವೆಂಬರ್ 20 ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದ್ದು, ನವೆಂಬರ್ 23 ರಂದು ಮತ ಎಣಿಕೆ ನಡೆಯಲಿದೆ. ಸೋಮವಾರ ಜಾರಂಗೆ ಅವರು ಈ ಘೋಷಣೆ ಮಾಡಿದ್ದರಾದರೂ, ಈ ಹಿಂದೆ ಕೆಲವು ಕ್ಷೇತ್ರಗಳು ಮತ್ತು ಅಭ್ಯರ್ಥಿಗಳ ಪರವಾಗಿ ಬೆಂಬಲ ಸೂಚಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಸೋಮವಾರ ಬೆಳಗ್ಗೆ ಅಂತರವಾಳಿ ಸಾರಥಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಾರಂಗೆ, ‘‘ಬಹಳ ಸಮಾಲೋಚನೆಯ ನಂತರ ರಾಜ್ಯದಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ನಿರ್ಧರಿಸಿದ್ದೇನೆ. ಯಾರನ್ನು ಸೋಲಿಸಬೇಕು, ಯಾರನ್ನು ಆರಿಸಬೇಕು ಎಂಬುದನ್ನು ಮರಾಠ ಸಮುದಾಯವು ತಾನೇ ನಿರ್ಧರಿಸುತ್ತದೆ. ನಾನು ಯಾವುದೇ ಅಭ್ಯರ್ಥಿ ಅಥವಾ ರಾಜಕೀಯ ಪಕ್ಷದೊಂದಿಗೆ ಯಾವುದೇ ಸಂಬಂಧ ಅಥವಾ ಬೆಂಬಲವನ್ನು ಹೊಂದಿಲ್ಲ” ಎಂದು ಹೇಳಿದ್ದಾರೆ.
ಇದೇ ಅವರು ಆಡಳಿತಾರೂಢ ಮಹಾಯುತಿ ಒಕ್ಕೂಟ ಅಥವಾ ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (ಎಂವಿಎ) ಯಿಂದ ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ ಎಂದು ಒತ್ತಿ ಹೇಳಿದ್ದಾರೆ.
“ನಾನು ಯಾರ ಒತ್ತಡಕ್ಕೂ ಒಳಗಾಗಿಲ್ಲ. ಮರಾಠಾ ಮೀಸಲಾತಿ ಹೋರಾಟಕ್ಕಾಗಿ ಅವರ ಬದ್ಧತೆಯ ಆಧಾರದ ಮೇಲೆ ಯಾರನ್ನು ಬೆಂಬಲಿಸಬೇಕೆಂದು ಸಮುದಾಯವೇ ನಿರ್ಧರಿಸುತ್ತದೆ” ಎಂದು ಅವರು ಹೇಳಿದ್ದಾರೆ. ಮರಾಠಾ ಹಿತಾಸಕ್ತಿಗಳಿಗೆ ತಮ್ಮ ಬೆಂಬಲದ ಬಗ್ಗೆ ಅಭ್ಯರ್ಥಿಗಳಿಂದ ಲಿಖಿತ ಅಥವಾ ವೀಡಿಯೊ ಮೂಲಕ ಭರವಸೆಗಳನ್ನು ಪಡೆಯುವಂತೆ ಅವರು ಮತದಾರರನ್ನು ಕೇಳಿದ್ದಾರೆ.
“ಮರಾಠರ ಬೆಂಬಲವಿಲ್ಲದೆ ಈ ರಾಜ್ಯದಲ್ಲಿ ಯಾರೂ ಆಯ್ಕೆಯಾಗಲು ಸಾಧ್ಯವಿಲ್ಲ” ಎಂದು ಹೇಳಿರುವ ಅವರು, ಮರಾಠಾ ಸಮುದಾಯದ ಸದಸ್ಯರು ರಾಜಕೀಯ ರ್ಯಾಲಿಗಳಲ್ಲಿ ಪಾಲ್ಗೊಳ್ಳುವುದನ್ನು ತಪ್ಪಿಸಬೇಕು ಮತ್ತು ಯಾವುದೇ ಪಕ್ಷಗಳಿಗೆ ಮಣಿಯಬಾರದು ಎಂದು ಅವರು ಹೇಳಿದ್ದಾರೆ. ಮರಾಠಾ ಸಮುದಾಯಕ್ಕೆ ಅನ್ಯಾಯ ಮಾಡಿದವರಿಗೆ ಅಥವಾ ಕಿರುಕುಳ ನೀಡಿದವರಿಗೆ ಮತದಾನದ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಇತರ ಹಿಂದುಳಿದ ವರ್ಗಗಳ (ಒಬಿಸಿ) ವರ್ಗದ ಅಡಿಯಲ್ಲಿ ಮರಾಠ ಸಮುದಾಯಕ್ಕೆ ಮೀಸಲಾತಿಯನ್ನು ಪಡೆಯುವ ತನ್ನ ಬದ್ಧತೆಯನ್ನು ಜಾರಂಗೆ ಪುನರುಚ್ಚರಿಸಿದ್ದಾರೆ. ಮೀಸಲಾತಿಗಾಗಿ ತಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಅವರು ಹೇಳಿದ್ದಾರೆ. ಅವರು ಒಂದು ದಿನದ ಹಿಂದೆಯಷ್ಟೆ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪರ್ವತಿ ಮತ್ತು ದೌಂಡ್ ಕ್ಷೇತ್ರದ ಇಬ್ಬರು ಅಭ್ಯರ್ಥಿಗಳನ್ನು ಬೆಂಬಲಿಸುವ ಬಗ್ಗೆ ಘೋಷಿಸಿದ್ದರು, ಆದರೆ ಅವರು ಅವರ ಹೆಸರನ್ನು ಬಹಿರಂಗಪಡಿಸಿರಲಿಲ್ಲ.
ಪ್ರಸ್ತುತ ಈ ಎರಡು ಕ್ಷೇತ್ರಗಳು ಬಿಜೆಪಿ ವಶದಲ್ಲಿದ್ದು, ಮರಾಠಾ ಮೀಸಲಾತಿಯನ್ನು ಅವರು ವಿರೋಧಿಸುತ್ತಿದ್ದಾರೆ ಎಂದು ಜಾರಂಗೇ ಆಗಾಗ್ಗೆ ಆರೋಪಿಸುತ್ತಿದ್ದಾರೆ. ಈ ಹಿಂದೆ, ಅವರು ಫೂಲಂಬ್ರಿ, ಕನ್ನಡ (ಛತ್ರಪತಿ ಸಂಭಾಜಿನಗರ), ಹಿಂಗೋಲಿ, ಪಠಾರಿ (ಪರ್ಭಾನಿ), ಮತ್ತು ಹಡಗಾಂವ್ (ನಾಂದೇಡ್) ಅಭ್ಯರ್ಥಿಗಳನ್ನು ಬೆಂಬಲಿಸುವುದಾಗಿ ಸೂಚಿಸಿದ್ದರು.
ಅಲ್ಲದೆ, ಭೋಕರ್ದನ್ (ಜಲ್ನಾ), ಗಂಗಾಪುರ (ಛತ್ರಪತಿ ಸಂಭಾಜಿನಗರ), ಕಲಂನೂರಿ (ಹಿಂಗೋಲಿ), ಗಂಗಾಖೇಡ್, ಜಿಂಟೂರ್ (ಪರ್ಭಾನಿ), ಮತ್ತು ಔಸಾ (ಲಾತೂರ್) ನ ಮಹಾಯುತಿ ಸರ್ಕಾರದ ಹಾಲಿ ಶಾಸಕರನ್ನು ಸೋಲಿಸುವ ಬಗ್ಗೆ ಅವರು ಉಲ್ಲೇಖಿಸಿದ್ದರು. ಮರಾಠ ಮೀಸಲಾತಿ
ಇದನ್ನೂ ಓದಿ: ‘ಕೇವಲ ಹಿಂದಿ ಏಕೆ?’ | ಹಿಂದಿಯಲ್ಲಿ ಕಲಾಪ ನಡೆಸುವಂತೆ ಕೇಳಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್!
‘ಕೇವಲ ಹಿಂದಿ ಏಕೆ?’ | ಹಿಂದಿಯಲ್ಲಿ ಕಲಾಪ ನಡೆಸುವಂತೆ ಕೇಳಿದ್ದ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್!


