ವಿಧಾನಸಭೆಯ ಉಪಚುನಾವಣೆಗೆ ಚನ್ನಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಿ.ಪಿ ಯೋಗೇಶ್ವರ್ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಮಾನಹಾನಿಕರ ಅಥವಾ ಅವಹೇಳನಕಾರಿ ಹೇಳಿಕೆಗಳನ್ನು ನೀಡದಂತೆ ಅವರ ಮೊದಲ ಪತ್ನಿಯ ಪುತ್ರಿ ನಿಶಾ ಯೋಗೇಶ್ವರ್‌ಗೆ ಹೈಕೋರ್ಟ್ ಸೋಮವಾರ (ನ.4) ನಿರ್ಬಂಧ ವಿಧಿಸಿದೆ.
ಸಿ.ಪಿ ಯೋಗೇಶ್ವರ್ ಅವರ ಪತ್ನಿ ಪಿ ವಿ ಶೀಲಾ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ.
ಪತಿ ಸಿ.ಪಿ ಯೋಗೇಶ್ವರ್ ಉಪಚುನಾವಣೆಗೆ ಸ್ಪರ್ಧಿಸಿರುವ ಬೆನ್ನಲ್ಲೇ ಮಗಳಾದ ನಿಶಾ ಯೋಗೇಶ್ವರ್ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಕುಟುಂಬದ ವಿರುದ್ಧ ಅವಹೇಳನಕಾರಿ ಹಾಗೂ ಮಾನಹಾನಿಕರ, ಆಧಾರರಹಿತ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಸಂಬಂಧ ಬೆಂಗಳೂರಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಅರ್ಜಿದಾರರು ದೂರಿದ್ದರು ಎಂದು ವರದಿಯಾಗಿದೆ.
ಅರ್ಜಿಯ ಮಧ್ಯಂತರ ಮನವಿಯನ್ನು ಪರಿಗಣಿಸಿದ ಹೈಕೋರ್ಟ್, ಪ್ರತಿವಾದಿಯಾದ ನಿಶಾ ಅವರು ಇನ್‌ಸ್ಟಾಗ್ರಾಂ, ಎಕ್ಸ್, ಗೂಗಲ್ ಮತ್ತು ಯೂಟ್ಯೂಬ್ ಜಾಲತಾಣಗಳಲ್ಲಿ ಯೋಗೇಶ್ವರ್ ಅವರ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ಅಪ್ಲೋಡ್ ಮಾಡಬಾರದು ಮತ್ತು ಈಗಾಗಲೇ ಪ್ರಸಾರ ಮಾಡಲಾಗಿರುವ ತುಣಕುಗಳನ್ನು ತಡೆಹಿಡಿಯಬೇಕು ಎಂದು ಮಧ್ಯಂತರ ಆದೇಶ ನೀಡಿ ವಿಚಾರಣೆ ಮುಂದೂಡಿದೆ.
ಇದನ್ನೂ ಓದಿ : ಮುಡಾ ಪ್ರಕರಣ | ಬುಧವಾರ ವಿಚಾರಣೆಗೆ ಹಾಜರಾಗುವಂತೆ ಸಿಎಂಗೆ ಲೋಕಾಯುಕ್ತ ನೋಟಿಸ್


