‘ಜನ ಸಾಮಾನ್ಯರ ಒಳಿತಿಗಾಗಿ’ ವಿತರಿಸಲು ಎಲ್ಲಾ ಖಾಸಗಿ ಒಡೆತನದ ಸಂಪನ್ಮೂಲಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಂವಿಧಾನದ ಅಡಿಯಲ್ಲಿ ಪ್ರಭುತ್ವಕ್ಕೆ ಅಧಿಕಾರವಿಲ್ಲ ಎಂದು 7:2 ಬಹುಮತದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಇಂದು (ನ.5) ಹೇಳಿದೆ.
ಆದರೆ, ಕೆಲ ಪ್ರಕರಣಗಳಲ್ಲಿ ಪ್ರಭುತ್ವ ಖಾಸಗಿ ಆಸ್ತಿಗಳ ಮೇಲೆ ಹಕ್ಕು ಸಾಧಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಒಂಬತ್ತು ನ್ಯಾಯಾಧೀಶರ ಪೀಠ ತಿಳಿಸಿದೆ.
ಖಾಸಗಿ ಆಸ್ತಿಯು ಸಮುದಾಯದ ಭೌತಿಕ ಸಂಪನ್ಮೂಲಗಳ ಭಾಗವಾಗಿರಬಹುದು. ಆದರೆ, ವ್ಯಕ್ತಿಯ ಒಡೆತನದ ಪ್ರತಿಯೊಂದು ಸಂಪನ್ಮೂಲವು ಸಮುದಾಯದ ಭೌತಿಕ ಸಂಪನ್ಮೂಲಗಳ ಭಾಗವಾಗಿರುವುದು ಅನಿವಾರ್ಯವಲ್ಲ ಎಂದು ಪೀಠವು ಮೂರು ಭಾಗಗಳ ತೀರ್ಪಿನಲ್ಲಿ ಹೇಳಿದೆ.
The Supreme Court today (November 5) held by a majority of 8:1 that all private properties cannot form part of the 'material resources of the community' which the State is obliged to equitably redistribute as per the Directive Principles of State Policy under Article 39(b) of the… pic.twitter.com/GrQECoF5nm
— Live Law (@LiveLawIndia) November 5, 2024
ಸಂವಿಧಾನದ ಪರಿಚ್ಛೇದ 39 (ಬಿ) ಅಡಿಯಲ್ಲಿ ಎಲ್ಲಾ ಖಾಸಗಿ ಒಡೆತನದ ಸಂಪನ್ಮೂಲಗಳನ್ನು ಪ್ರಭುತ್ವ ಸ್ವಾಧೀನಪಡಿಸಿಕೊಳ್ಳಬಹುದು ಎಂಬ ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ ಹಿಂದಿನ ತೀರ್ಪನ್ನು ಸಿಜೆಐ ನೇತೃತ್ವದ ಬಹುಮತದ ತೀರ್ಪು ರದ್ದುಪಡಿಸಿದೆ.
‘ ಜನರ ಸಾಮಾನ್ಯರ ಒಳಿತಿಗಾಗಿ’ ಸಂವಿಧಾನದ ಪರಿಚ್ಛೇದ 39 (ಬಿ) ಅಡಿಯಲ್ಲಿ ಖಾಸಗಿ ಆಸ್ತಿಗಳನ್ನು ‘ಸಮುದಾಯದ ವಸ್ತು ಸಂಪನ್ಮೂಲಗಳು ಎಂದು ಪರಿಗಣಿಸಬಹುದೇ? ಮತ್ತು ಪ್ರಭುತ್ವ ಅವುಗಳನ್ನು ಸ್ವಾಧೀನಪಡಿಸಿಕೊಳ್ಳಬಹುದೇ?’ ಎಂಬ ಕಾನೂನಾತ್ಮಕ ಪ್ರಶ್ನೆಯ ಕುರಿತು ತನ್ನ ಮತ್ತು ಪೀಠದಲ್ಲಿದ್ದ ಇತರ ಆರು ನ್ಯಾಯಾಧೀಶರಾದ ಹೃಷಿಕೇಶ್ ರಾಯ್, ಜೆ.ಬಿ. ಪರ್ದಿವಾಲಾ, ಮನೋಜ್ ಮಿಶ್ರಾ, ರಾಜೇಶ್ ಬಿಂದಾಲ್, ಸತೀಶ್ ಚಂದ್ರ ಶರ್ಮಾ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರ ತೀರ್ಪನ್ನು ಸಿಜೆಐ ಚಂದ್ರಚೂಡ್ ಬರೆದಿದ್ದಾರೆ.
ಈ ತೀರ್ಪು ಸಾಮಾನ್ಯರ ಒಳಿತಿಗಾಗಿ ಪ್ರಭುತ್ವ ಎಲ್ಲಾ ಖಾಸಗಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂಬ ಹಳೆಯ ಆದೇಶ ಮತ್ತು ‘ಸಮಾಜವಾದಿ ಥೀಮ್’ ಹೊಂದಿದ್ದ ಹಲವಾರು ತೀರ್ಪುಗಳನ್ನು ರದ್ದುಗೊಳಿಸಿದೆ.
ಒಟ್ಟು ಒಂಭತ್ತು ನ್ಯಾಯಾಧೀಶರ ಪೈಕಿ, ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಸಿಜೆಐ ಬರೆದ ಬಹುಮತದ ತೀರ್ಪನ್ನು ಭಾಗಶಃ ಒಪ್ಪಿಕೊಂಡಿಲ್ಲ. ಆದರೆ, ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅವರು ಎಲ್ಲಾ ಅಂಶಗಳಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ‘ಉತ್ತರ ಪ್ರದೇಶ ಮದ್ರಸಾ ಕಾಯ್ದೆ’ಯ ಸಾಂವಿಧಾನಿಕ ಸಿಂಧುತ್ವ ಎತ್ತಿಹಿಡಿದ ಸುಪ್ರೀಂ ಕೋರ್ಟ್ : ಹೈಕೋರ್ಟ್ ಆದೇಶ ರದ್ದು


