ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಚಳಕಾಪೂರ ಗ್ರಾಮದ ಹನುಮಾನ್ ಜಾತ್ರೆಯಲ್ಲಿ ಭಾಗವಹಿಸಿದ್ದಕ್ಕೆ ದಲಿತ ಸಮುದಾಯದ ಹಲವರ ಮೇಲೆ ಹಲ್ಲೆ ನಡೆಸಿ, ನಿಂದಿಸಿದ ಪ್ರಕರಣ ಸಂಬಂಧ ಲಿಂಗಾಯತ ಸಮುದಾಯದ 69 ಜನರನ್ನು ಪೊಲೀಸರು ಮಂಗಳವಾರ (ನ.5) ಬಂಧಿಸಿದ್ದಾರೆ.
ಭಾನುವಾರ (ನ.3) ಹನುಮಾನ್ ಜಾತ್ರಾ ಮಹೋತ್ಸವದ ಮೆರವಣಿಗೆಯ ಸಂದರ್ಭದಲ್ಲಿ ಹಲ್ಲೆ ಘಟನೆ ನಡೆದಿದೆ. ಇದರ ವಿರುದ್ದ ಹಲ್ಲೆಗೊಳಗಾದವರು ದಲಿತ ಸಮುದಾಯದ ಇತರ ಜನರ ಜೊತೆ ಸೋಮವಾರ (ನ.4) ಖಟಕಚಿಂಚೋಳಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಲಿಂಗಾಯತ ಸಮುದಾಯದ 73 ಮಂದಿಯ ವಿರುದ್ಧ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಪೈಕಿ 69 ಮಂದಿಯನ್ನು ಮಂಗಳವಾರ ಬಂಧಿಸಲಾಗಿದೆ.
“ಜಾತ್ರೆಗೆ ಹೋದಾಗ ತಡೆದು ಹಿಯಾಳಿಸಿದ್ದಾರೆ. ದಲಿತರ ಓಣಿಗಳಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಮಹಿಳೆಯರು, ಯುವಕರು ಮನಬಂದಂತೆ ಥಳಿಸಿದ್ದಾರೆ. ಗ್ರಾಮದೊಳಗೆ ನೀವು ಬರುವಂತಿಲ್ಲ. ಗ್ರಾಮದ ಮಳಿಗೆಗಳಿಗೂ ನೀವು ಬರಬಾರದು ಎಂದು ಹೆದರಿಸಿದ್ದಾರೆ” ಎಂಬುವುದಾಗಿ ದಲಿತ ಸಮುದಾಯವರು ಆರೋಪಿಸಿದ್ದಾರೆ.
ಘಟನೆ ಬಳಿಕ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುಂಜಾಗೃತ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.
100 ಜನರ ವಿರುದ್ದ ಪ್ರತಿ ದೂರು
ಘಟನೆಗೆ ಸಂಬಂಧಿಸಿದಂತೆ ದಲಿತ ಸಮುದಾಯದ 100 ಜನರ ವಿರುದ್ದ ಲಿಂಗಾಯತರು ಪ್ರತಿ ದೂರು ದಾಖಲಿಸಿದ್ದಾರೆ. ದಲಿತರೇ ಮೊದಲು ಜಗಳಕ್ಕಿಳಿದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮೂವರು ಪೊಲೀಸರ ಅಮಾನತು
ಘಟನೆ ಸಂಬಂಧ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಖಟಕಚಿಂಚೋಳಿ ಠಾಣೆಯ ಪಿಎಸ್‌ಐ ರಾಚಯ್ಯ ಮಠಪತಿ, ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಅಮಾನತು ಮಾಡಿ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ತಮಿಳುನಾಡು: ತಿರುನಲ್ವೇಲಿಯಲ್ಲಿ ದಲಿತ ಬಾಲಕನ ಮೇಲೆ ಅಮಾನುಷ ಹಲ್ಲೆ, ಮನೆಗೆ ಹಾನಿ


