ಸಿನಿಮಾ ರಂಗದಲ್ಲಿ (ವಿಶೇಷವಾಗಿ ಮಲಯಾಳಂ) ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದ್ದ ಮಲಯಾಳಂ ಚಿತ್ರ ನಿರ್ಮಾಪಕಿ ಸಾಂಡ್ರಾ ಥಾಮಸ್ ಅವರನ್ನು ಕೇರಳ ಚಲನಚಿತ್ರ ನಿರ್ಮಾಪಕರ ಸಂಘ (ಕೆಎಫ್‌ಪಿಎ) ದಿಂದ ಉಚ್ಚಾಟಿಸಲಾಗಿದೆ.
ಈ ಸಂಬಂಧ ಅಕ್ಟೋಬರ್ 28ರಂದು ಸಾಂಡ್ರಾ ಅವರಿಗೆ ಪತ್ರ ಬರೆದಿರುವ ಕೆಎಫ್‌ಪಿಎ, ‘ಅಶಿಸ್ತಿನ’ ಕಾರಣಕ್ಕೆ ಸಂಘದ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ ಎಂದು ಹೇಳಿದೆ. ಅಲ್ಲದೆ, ಸಂಘದ ಸದಸ್ಯರ ನಡುವೆ ಹರಿದಾಡಿದ ಮತ್ತೊಂದು ಪತ್ರದಲ್ಲಿ ಸಂಘವು, ಸಾಂಡ್ರಾ ಅವರು ಕೆಎಫ್‌ಪಿಎ ಕುರಿತು ಸಾರ್ವಜನಿಕವಾಗಿ ನೀಡುತ್ತಿರುವ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಮಲಯಾಳಂ ಸಿನಿಮಾ ರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಮಾ ಸಮಿತಿ ವರದಿ ನೀಡಿದ ಬಳಿಕ, ಅನೇಕ ಮಹಿಳೆಯರು ನಟರು, ನಿರ್ಮಾಪಕರು ಮತ್ತು ನಿರ್ದೇಶಕರು ಸೇರಿದಂತೆ ಘಟಾನುಘಟಿಗಳ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮಾಡಿದ್ದಾರೆ. ಹಲವರು ದೂರು ದಾಖಲಿಸಿದ್ದಾರೆ. ಈ ಸಂಬಂಧ ಕೆಲವರ ಬಂಧನವೂ ಆಗಿದೆ.
ಸಾಂಡ್ರಾ ಅವರು ಮಹಿಳಾ ನಿರ್ಮಾಪಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ್ದರು. ಹೇಮಾ ಸಮಿತಿಯಲ್ಲಿ ವಿವರಿಸಲಾದ ಅಂಶಗಳ ಬಗ್ಗೆ ನಿರ್ಲಕ್ಷ್ಯ ಮತ್ತು ನೀರಸ ಭಾವನೆ ವ್ಯಕ್ತಪಡಿಸುತ್ತಿರುವ ಹಿನ್ನೆಲೆ, ಕೆಎಫ್‌ಪಿಎಗೆ ಪತ್ರ ಬರೆದು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದ್ದರು ಎಂದು ವರದಿ ವಿವರಿಸಿದೆ.
ತನ್ನ ಉಚ್ಚಾಟನೆಯ ಕುರಿತು ಮಾತನಾಡಿರುವ ಸಾಂಡ್ರಾ ಅವರು, “ನನ್ನನ್ನು ಉಚ್ಚಾಟಿಸುವ ಮೂಲಕ ಹೇಮಾ ಸಮಿತಿಯ ವರದಿಯ ಬಳಿಕ ತಮ್ಮ ಮೇಲಿನ ದೌರ್ಜನ್ಯಗಳ ಕುರಿತು ಧ್ವನಿ ಎತ್ತುತ್ತಿರುವ ಮಹಿಳಾ ಕಲಾವಿದರಿಗೆ ಅವರು (ಕೆಎಫ್‌ಪಿಎ) ಎಚ್ಚರಿಕೆ ನೀಡಿರಬಹುದು. ಅವರು ಮಹಿಳೆಯರ ಧ್ವನಿಯನ್ನು ಅಡಗಿಸಲು ಬಯಸಿದ್ದಾರೆ. ನಿರ್ಮಾಪಕಿಯಾಗಿ ಬೇರೆಯವರಿಗೆ ಕೆಲಸ ನೀಡಬಲ್ಲ ನನ್ನ ಪರಿಸ್ಥಿತಿಯೇ ಈ ರೀತಿಯಾದರೆ, ಸಿನಿಮಾ ರಂಗದಲ್ಲಿ ಇತರ ಸಣ್ಣಪುಟ್ಟ ಕೆಲಸ ಮಾಡುವ ಮಹಿಳೆಯರ ಗತಿಯೇನು?” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ನ್ಯೂಸ್ ಮಿನಿಟ್‌ನ ಸಂದರ್ಶನದಲ್ಲಿ ಮಾತನಾಡಿರುವ ಸಾಂಡ್ರಾ ಅವರು, “ಮಲಯಾಳಂ ಸಿನಿಮಾ ರಂಗದಲ್ಲಿ ನಟರು, ನಿರ್ಮಾಪಕರು, ನಿರ್ದೇಶಕರು ಮತ್ತು ಮಾಧ್ಯಮದವರ ‘ಕಾಕಸ್’ ಪವರ್ ಗ್ರೂಪ್ ಇದೆ. ಈ ಬಗ್ಗೆ ಹೇಮಾ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಪವರ್ ಗ್ರೂಪ್ ಯಾರಿಗೆ ಕೆಲಸ ಕೊಡಬೇಕು, ಯಾರಿಗೆ ಕೊಡಬಾರದು ಎಂದು ನಿರ್ಧರಿಸುತ್ತದೆ. ಇದರ ಬಗ್ಗೆ ಮಾತನಾಡಿದರೆ ಪರಿಣಾಮ ಎದುರಿಸಬೇಕಾಗುತ್ತದೆ. ಈಗ ನನಗೆ ಅನ್ಯಾಯವಾಗಿದೆ ಪ್ರಶ್ನಿಸೋಣ ಎಂದರೆ ನಿರ್ಮಾಪಕರ ಸಂಘದಲ್ಲಿ ಪಾಶ್ (POSH)ಕಾಯ್ದೆಯ ಪ್ರಕಾರ ಆಂತರಿಕ ಪರಿಹಾರ ಸಮಿತಿಯೂ ಇಲ್ಲ” ಎಂದಿದ್ದಾರೆ.
ಸಾಂಡ್ರಾ ಮತ್ತು ಅವರ ನಿರ್ಮಾಣ ಕಂಪನಿ ಸಾಂಡ್ರಾ ಥಾಮಸ್ ಪ್ರೊಡಕ್ಷನ್ಸ್ ಅನ್ನು ನಿರ್ಮಾಪಕದ ಸಂಘದಿಂದ ಹೊರಗಿಡುವ ಮುನ್ನ ವಿವರಣೆ ಕೋರಿ ಸಾಂಡ್ರಾ ಅವರಿಗೆ ಪತ್ರ ಬರೆಯಲಾಗಿತ್ತು. ಅದಕ್ಕೆ ಅವರು ನೀಡಿರುವ ಉತ್ತರ ತೃಪ್ತಿಕರವಾಗಿಲ್ಲ ಎಂದು ನಿರ್ಮಾಪಕರ ಸಂಘ ಸಮರ್ಥಿಸಿಕೊಂಡಿದೆ.
ಇದನ್ನೂ ಓದಿ : ಖಾಸಗಿ ಸ್ವತ್ತು ತೀರ್ಪು : ಅಯ್ಯರ್ ಕುರಿತ ಸಿಜೆಐ ಹೇಳಿಕೆಗೆ ನ್ಯಾ. ನಾಗರತ್ನ, ಧುಲಿಯಾ ಆಕ್ಷೇಪ


