ಯುಎಸ್ (ಅಮೆರಿಕ) ನ ಮುಂದಿನ ಅಧ್ಯಕ್ಷರ ಆಯ್ಕೆಗೆ ಮಂಗಳವಾರ (ನ.5) ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಮತ್ತು ಹಾಲಿ ಉಪಾಧ್ಯಕ್ಷೆ ಹಾಗೂ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.
ವರದಿಗಳ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರು ಕಮಲಾ ಹ್ಯಾರಿಸ್‌ಗಿಂತ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಆದರೆ, ನಿರ್ಣಾಯಕ ಏಳು ರಾಜ್ಯಗಳ ಪೈಕಿ ಐದರಲ್ಲಿ ಇಬ್ಬರ ನಡುವೆ ಜಿದ್ದಾಜಿದ್ದಿನ ಸಮರ ಏರ್ಪಟ್ಟಿದೆ. ಟ್ರಂಪ್ ಅವರು ಈಗಾಗಲೇ ಉತ್ತರ ಕೆರೊಲಿನಾವನ್ನು ಗೆದ್ದುಕೊಂಡಿದ್ದಾರೆ.
ಉತ್ತರ ಕೆರೊಲಿನಾದಲ್ಲಿ ಡೊನಾಲ್ಡ್ ಟ್ರಂಪ್ ಶೇಕಡಾ 50.8, ಅಂದರೆ 25,71,258 ಮತಗಳನ್ನು ಗಳಿಸಿದರೆ, ಕಮಲಾ ಹ್ಯಾರಿಸ್ 24,36,454 ( ಶೇ. 48.1) ಮತಗಳನ್ನು ಗಳಿಸಿದ್ದಾರೆ.
ಅಧ್ಯಕ್ಷ ಸ್ಥಾನವನ್ನು ಗೆಲ್ಲಲು ಒಟ್ಟು 270 ಸ್ಥಾನಗಳ ಅಗತ್ಯವಿದ್ದು, ಪ್ರಸ್ತುತ ಕಮಲಾ ಹ್ಯಾರಿಸ್ ಎದುರು ಟ್ರಂಪ್ 230-210 ಅಂತರದ ಮುನ್ನಡೆಯಲ್ಲಿದ್ದಾರೆ. ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹ್ಯಾರಿಸ್ ಅವರು ರಾಷ್ಟ್ರದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವ ಮೊದಲ ಮಹಿಳೆ ಎಂದು ಎನಿಸಿಕೊಳ್ಳಲು ಆಶಿಸಿದ್ದಾರೆ. ಟ್ರಂಪ್ ಅವರು ಎರಡನೇ ಬಾರಿಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಇತಿಹಾಸ ನಿರ್ಮಿಸುವ ಪ್ರಯತ್ನದಲ್ಲಿದ್ದಾರೆ.
ಯಾವ ರಾಜ್ಯದಲ್ಲಿ ಯಾರಿಗೆ ಎಷ್ಟು ಸ್ಥಾನ? ( ಬೆಳಿಗ್ಗೆ 11 ಗಂಟೆ- IST)
ಡೊನಾಲ್ಡ್ ಟ್ರಂಪ್ : ಯೊಮಿಂಗ್ (3), ವೆಸ್ಟ್ ವರ್ಜೀನಿಯಾ (4), ಉತಾಹ್ (6), ಟೆಕ್ಸಾಸ್ (40), ಟೆನೆಸ್ಸೀ (11), ದಕ್ಷಿಣ ಕರೋಲಿನಾ (9), ಒಕ್ಲಾಹೊಮಾ (7), ಒಹಿಯೊ (17), ನೆಬ್ರಸ್ಕಾ (3), ಉತ್ತರ ಡಕೋಟ (3), ಮೊಂಟಾನ (4), ಮಿಸ್ಸಿಸ್ಸಿಪ್ಪಿ (6), ಮಿಸ್ಸೌರಿ (10), ಲೂಸಿಯಾನಾ (8), ಕೆಂಟುಕಿ (8), ಕಾನ್ಸಾಸ್ (6), ಇಂಡಿಯಾನಾ (11), ಲೋವಾ (6), ಫ್ಲೋರಿಡಾ (30), ಅರ್ಕಾನ್ಸಸ್ (6), ಅಲಬಾಮ (9).
ಕಮಲಾ ಹ್ಯಾರಿಸ್ : ಕೊಲೊರಾಡೊ (10), ಕನೆಕ್ಟಿಕಟ್ (7), ವಾಷಿಂಗ್ಟನ್ (3), ಡೆಲವೇರ್ (3), ಇಲಿನಿಯೊಸ್ (19), ಮಸ್ಸಾಚುಸೆಟ್ಸ್ (11), ಮೇರಿಲ್ಯಾಂಡ್ (10), ನ್ಯೂಜೆರ್ಸಿ (14), ನ್ಯೂಯಾರ್ಕ್ (28), ರೋಡ್ ಐಸ್‌ಲ್ಯಾಂಡ್ (4), ವೆರ್ಮಾಂಟ್ (3).
ನಿರೀಕ್ಷೆಯಂತೆ ಟ್ರಂಪ್ ಅವರು ‘ಕೆಂಪು ರಾಜ್ಯಗಳು’ ಎಂದು ಗುರುತಿಸಲ್ಪಡುವ ಸಾಂಪ್ರಾದಾಯಿಕ ಅಮೆರಿಕನ್ನರು ಹೆಚ್ಚಿರುವ ಕಡೆಗಳಲ್ಲಿ ತನ್ನ ಪ್ರಭಾವವನ್ನು ಉಳಿಸಿಕೊಂಡಿದ್ದಾರೆ. ಈ ರಾಜ್ಯಗಳ ಪೈಕಿ ಇಂಡಿಯಾನಾ, ಕೆಂಟುಕಿ ಮತ್ತು ವೆಸ್ಟ್ ವರ್ಜೀನಿಯಾದಲ್ಲಿ ಗೆಲುವು ಸಾಧಿಸಿದ್ದಾರೆ.
ಟೆಕ್ಸಾಸ್‌ನಲ್ಲಿ 40 ಸ್ಥಾನಗಳನ್ನು ಟ್ರಂಪ್ ಪಡೆದಿದ್ದಾರೆ. 2016 ರಿಂದಲೂ ಪ್ರತಿ ಚುನಾವಣೆಗಳಲ್ಲಿ ಅವರು ಇಲ್ಲಿ ಇಷ್ಟು ಸ್ಥಾನಗಳನ್ನು ಪಡೆಯುತ್ತಿದ್ದಾರೆ. ಓಹಿಯೋದಲ್ಲಿ 17 ಸ್ಥಾನಗಳನ್ನು ಪಡೆಯುವ ಮೂಲಕ ಟ್ರಂಪ್ ಹ್ಯಾರಿಸ್ ಅವರನ್ನು ಸೋಲಿಸಿದ್ದಾರೆ.
ಮತ್ತೊಂದೆಡೆ, ಹ್ಯಾರಿಸ್ ಅವರು ಡೆಮಾಕ್ರಟಿಕ್ ಭದ್ರಕೋಟೆಗಳಲ್ಲಿ ಯಶಸ್ಸನ್ನು ಕಂಡುಕೊಂಡಿದ್ದಾರೆ, ನ್ಯೂಯಾರ್ಕ್‌ನಲ್ಲಿ ದೊಡ್ಡ ಗೆಲುವು ಸಾಧಿಸಿದ್ದಾರೆ. ಅಲ್ಲಿ ಅವರು 28 ಸ್ಥಾನಗಳನ್ನು ಪಡೆದಿದ್ದಾರೆ. ‘ನೀಲಿ ರಾಜ್ಯಗಳು’ ಎಂದು ಗುರುತಿಸಲ್ಪಡುವ ಉದಾರವಾದಿ ಅಮೆರಿಕನ್ನರು ಹೆಚ್ಚಿರುವ ಪ್ರದೇಶಗಳಾದ ಇಲಿನಿಯೊಸ್ (19) ನ್ಯೂಜೆರ್ಸಿ(14) ಮತ್ತು ಕೊಲೊರಾಡೋ ಮತ್ತು ವಾಷಿಂಗ್ಟನ್ ಡಿ.ಸಿ ಸೇರಿದಂತೆ ಈಶಾನ್ಯದ ಇತರ ರಾಜ್ಯಗಳಲ್ಲಿ ಹ್ಯಾರಿಸ್ ಪ್ರಾಬಲ್ಯ ಸಾಧಿಸಿದ್ದಾರೆ.
ಇದನ್ನೂ ಓದಿ : ದೀಪಾವಳಿಯಂದು ದೇವಸ್ಥಾನದ ಮೇಲೆ ದಾಳಿ; ಕೆನಡಾದಲ್ಲಿ ಹಿಂದೂಗಳಿಂದ ಬೃಹತ್ ಪ್ರತಿಭಟನೆ


