ಇಲ್ಲಿಗೆ ನಾನು ಹಳೆಯ ಅಜ್ಞಾತದಿಂದ ಹೊರಬಂದು ಹೆಚ್ಚು ಕಡಿಮೆ ಐದು ವರ್ಷಗಳಾಗುತ್ತಿವೆ . 2014ರ ಡಿಸೆಂಬರ್‌ನಲ್ಲಿ ಹೊರಗೆ ಬಂದೆ. ಮುಖ್ಯವಾಗಿ ನಾವು ಮುಖ್ಯವಾಹಿನಿಗೆ ಬರಲು ಪ್ರಮುಖವಾಗಿ ಸರ್ಕಾರ ಮತ್ತು ನಮ್ಮ ಮಧ್ಯೆ ಇದ್ದು ಕೆಲಸ ಮಾಡಿದ ಸ್ವತಂತ್ರ ಹೋರಾಟಗಾರರಾದ ಎಚ್.ಎಸ್.ದೊರೆಸ್ವಾಮಿ, ಹಿರಿಯರಾದ ನಮ್ಮ ನಡುವೆ ಈಗ ಇಲ್ಲದ ಪತ್ರಕರ್ತೆ ಗೌರಿ ಲಂಕೇಶ್, ಎ.ಕೆ.ಸುಬ್ಬಯ್ಯನವರು ಕಾರಣವಾಗಿದ್ದಾರೆ.
ಇವರು ನಾವು ಮುಖ್ಯವಾಹಿನಿಗೆ ಬರಲು ಮುಖ್ಯಮಂತ್ರಿ ಮತ್ತು ಮಂತ್ರಿಗಳ ಸಭೆಯಲ್ಲಿ ಬಹಳ ಸಮರ್ಥವಾಗಿ ನಮ್ಮ ಮೇಲೆ ಹಾಕಿದ ಕೇಸುಗಳು ಸುಳ್ಳು ಕೇಸುಗಳು ಎಂದು ವಾದಿಸಿದ್ದರು. ನಮ್ಮ ಮೇಲೆ ಹಾಕಿರುವಂತಹ ಕೇಸುಗಳು 2006ರ ನಂತರದ್ದಾಗಿದೆ. ಆದರೆ ಅಷ್ಟೋತ್ತಿಗಾಗಲೆ ನಾವು ಸಂಘಟನೆ ತೊರೆದಿದ್ದೆವು. ನಾವು ಇದ್ದ ಪಕ್ಷವು ಸಹ ನಾವು ಪಕ್ಷ ಬಿಟ್ಟು ಬಂದ ಬಗ್ಗೆ ಅಧಿಕೃತ ಹೇಳಿಕೆ ಪ್ರಕಟಿಸಿತ್ತು. ಆದರೆ ಪೋಲಿಸರು ಮಾತ್ರ ಬೇರೆ ಬೇರೆ ಕೇಸುಗಳಲ್ಲಿ ನಮ್ಮ ಹೆಸರನ್ನು ಸುಮ್ಮನೆ ಸೇರಿಸಿತ್ತು.
ಸಾಕೇತ್ ರಾಜನ್ ಹತ್ಯೆಯಾದ ನಂತರ ರಾಜ್ಯ ಸಮಿತಿಯ ನಾಯಕತ್ವವನ್ನು ನಾನು ವಹಿಸಬೇಕೆಂಬ ಮಾತು ಬಂದಾಗ ನಾನು ಈ ಹೋರಾಟದಲ್ಲಿ ಭಿನ್ನಾಭಿಪ್ರಾಯವಿದ್ದುದರಿಂದ ಅದಕ್ಕೆ ಒಪ್ಪಲಿಲ್ಲ. ಇದು ಹೇಗೋ ಮಾಹಿತಿ ಮಾಧ್ಯಮಗಳವರೆಗೂ ಬಂದು ಆಗಲೇ ನೂರ್ ಶ್ರೀಧರ್ ಎಂಬ ವ್ಯಕ್ತಿ ಇದಾನೆ ಅನ್ನುವುದು ಗೊತ್ತಾಗಿದ್ದು. ಅಲ್ಲಿಯವರೆಗೂ ಪೋಲಿಸರಿಗೂ ಸಹ ಈ ವಿಷಯ ಗೊತ್ತಿರಲಿಲ್ಲ. ನಾನು ಪಕ್ಷ ಬಿಟ್ಟರೂ ಕೂಡ ಹೇಗೆ ನನ್ನ ಸುಳ್ಳು ಕೇಸ್‍ಗಳು ದಾಖಲಾಗುತ್ತವೆ ಎನ್ನುವುದನ್ನು ಈ ಪ್ರಕರಣ ಸೂಚಿಸುತ್ತದೆ.
ಒಬ್ಬ ಯಾವುದೋ ಪ್ರಕರಣದಲ್ಲಿ ಕಾಣಿಸಿಕೊಂಡರೆ ಸಾಕು ಏನಾದರೂ ಘಟನೆ ನಡೆದಾಗ ಮನಸೋ ಇಚ್ಚೆ ಪೋಲಿಸರು ಇಂತಹ ಕೇಸುಗಳಲ್ಲಿ ಅನುಮಾನ ಬಂದವರನ್ನೆಲ್ಲ ಸೇರಿಸುತ್ತಾ ಹೋಗುತ್ತಾರೆ. ಈ ಮಾದರಿ ಬದಲಾಗಬೇಕಿದೆ. ನಮ್ಮ ಸ್ನೇಹಿತ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರ ಕೇಸು ಕೂಡ ಹಾಗೆ ಆಗಿದೆ.
ನರಸಿಂಹ ಮೂರ್ತಿಯವರು ಎಲ್ಲಾ ಸಂಘಟನೆಗಳ ಹೋರಾಟಗಳಿಗೂ ಬೆಂಬಲಿಸುತ್ತಿದ್ದರು. ಆದರೆ ಅವರಿಗೂ ನಕ್ಸಲ್ ಹೋರಾಟಕ್ಕೂ ನಂಟೇ ಇರಲಿಲ್ಲ. ಆದರೆ ನರಸಿಂಹ ಮೂರ್ತಿಯವರನ್ನು ಈಗ ಈ ರೀತಿ ಅನುಮಾನಿಸಲಾಗುತಿದೆ. ನರಸಿಂಹಮೂರ್ತಿಯವರು ಎಲ್ಲರ ಕಣ್ಣಮುಂದೆಯೇ ದೊಡ್ಡ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದರು. ಆದರೂ ಅವರನ್ನು ತಲೆಮರೆಸಿಕೊಂಡಿದ್ದವರು ಎಂದು ಪೋಲಿಸರು ಅರೆಸ್ಟ್ ಮಾಡಿದ್ದಾರೆ. ಇದೆಲ್ಲ ಸರ್ಕಾರ ನಡೆದುಕೊಳ್ಳುತ್ತಿರುವ ತಪ್ಪು ಮಾದರಿಯಾಗಿದೆ.
ನರಸಿಂಹ ಮೂರ್ತಿಯವರಿಗೆ ಒಂದು ಕುಟುಂಬವಿದೆ. ಆತನ ವ್ಯಾಪಾರ ವಹಿವಾಟು ಆರ್ಥಿಕ ಬಿಕ್ಕಟ್ಟನ್ನ ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರದಿಂದ ಈ ರೀತಿ ಮಾಡುವುದು ಬರಿ ತಪ್ಪಲ್ಲ ದೊಡ್ಡ ಅಫರಾದವಾಗಿದೆ. ಇದ್ಕಕ್ಕೆ ಕರ್ನಾಟಕದ ನೆಲದಲ್ಲಿ ಬರುತ್ತಿರುವ ಪ್ರತಿರೋಧ, ಹೋರಾಟ ಎಲ್ಲಾ ಪ್ರಜಾತಾಂತ್ರಿಕ ದನಿಗಳು ನರಸಿಂಹಮೂರ್ತಿಯವರ ಜೊತೆ ನಿಂತುಕೊಂಡಿವೆ. ಈ ದನಿಯೇ ನಾವು ಮುಖ್ಯವಾಹಿನಿಗೆ ಬರಲು ಕೂಡ ಕಾರಣವಾದದ್ದು.
ಪ್ರಜಾತಾಂತ್ರಿಕ ಅವಕಾಶಗಳನ್ನ ಉಳಿಸಿಕೊಳ್ಳಲಿಕ್ಕೆ ಸುಧೀರ್ಘವಾದ ಸಂಘರ್ಷ ಮಾಡಲು ನಾವು ಸಿದ್ದರಿದ್ದೇವೆ. ನನ್ನ ಮೇಲೂ ಕೂಡ ಮುಂದೆ ಸುಳ್ಳು ಕೇಸುಗಳು ಮತ್ತೆ ಬೀಳಬಹುದು. ಅದರ ಬಗ್ಗೆ ನನಗೆ ಅನುಮಾನವೇ ಇಲ್ಲ. ಆದರೆ ಪ್ರಜಾತಾಂತ್ರಿಕ ದನಿ ಕರ್ನಾಟಕದಲ್ಲಿದೆ ಇದೇ ಹಾದಿಯೇಲ್ಲಿ ದಿಟ್ಟವಾದ ಹೋರಾಟವನ್ನು ಮುಂದುವರೆಸಬೇಕು ಅಂದುಕೊಂಡಿದ್ದೇನೆ.
ಸಾಕಷ್ಟು ಜನಕ್ಕೆ ಈ ಸಂಧರ್ಭದಲ್ಲಿ ಕೃತಜ್ಞತೆ ಹೇಳಬೇಕು, ಪಟ್ಟಿ ದೊಡ್ಡದಿದೆ. ಜಿ,ರಾಜಶೇಖರ್ ಅಂತಹವರು ಸಹ ನನ್ನ ಬೆಂಬಲಕ್ಕೆ ನಿಂತು ಪ್ರತಿ ಕೇಸಿದ್ದಾಗಲೂ ನಮ್ಮ ಜೊತೆ ಆರೋಪಿಯ ರೀತಿ ಬಂದು ಕೋರ್ಟ್‍ಲ್ಲಿ ನಿಂತಿದ್ದಾರೆ, ನನ್ನ ಕೇಸಿಗೆ ಬೇಲ್ ಕೊಟ್ಟಿದ್ದಾರೆ. ತುಂಬಾ ಜನ ನಮ್ಮ ಜೊತೆಗೆ ನಿಂತಿದ್ದಾರೆ ಈ ಎಲ್ಲರಿಗೂ ನನ್ನ ಮನದಾಳದ ಧನ್ಯವಾದಗಳು ಮತ್ತು ಒಂದು ದೊಡ್ಡ ಸಲಾಂ..


