ತಮ್ಮ ವಿರೋಧವನ್ನೂ ಲೆಕ್ಕಿಸದೆ ದಲಿತರು ಕಾಲಭೈರವೇಶ್ವರ ದೇಗುಲ ಪ್ರವೇಶಿಸಿ ಪೂಜೆ ಸಲ್ಲಿಸಿದರು ಎಂಬ ಕಾರಣಕ್ಕೆ ಕೆರಳಿದ ಸವರ್ಣೀಯರು, ಉತ್ಸವ ಮೂರ್ತಿಯನ್ನು ಹೊರತಂದು, ದೇವಾಲಯದ ನಾಮಫಲಕವನ್ನು ಎಸೆದಿರುವ ಅಮಾನುಷ ಸಾಮೂಹಿಕ ಕೃತ್ಯ ಮಂಡ್ಯ ಜಿಲ್ಲೆಯ ಹನಕೆರೆ ಗ್ರಾಮದಲ್ಲಿ ನಡೆದಿದೆ.
2014ರಲ್ಲಿ ದಲಿತರ ವಿರುದ್ಧ ದೌರ್ಜನ್ಯ ಎಸಗಿದ್ದ ಕೊಪ್ಪಳದ ಮರಕುಂಬಿ ಗ್ರಾಮದ 98 ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿರುವ ಸುದ್ದಿ ಇನ್ನೂ ಹಸಿಯಾಗಿರುವಾಗಲೇ, ಮಂಡ್ಯದ ಜಾತಿವಾದಿಗಳು ದಲಿತರಿಗೆ ಸಾಮಾಜಿಕ ಸಮಾನತೆಯನ್ನು ನಿರಾಕರಿಸಿದ್ದಾರೆ.
ಪ್ರಸ್ತುತ ಹನಕೆರೆ ಗ್ರಾಮ ಬೂದಿಮುಚ್ಚಿದ ಕೆಂಡದಂತಿದ್ದು, ಘಟನೆ ಹಿನ್ನೆಲೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಕಳೆದ 2 ವರ್ಷಗಳ ಹಿಂದೆ ದೇವಾಲಯ ಪುನರ್ನಿರ್ಮಾಣ ಮಾಡಲಾಗಿತ್ತು. ನಂತರ, ದಲಿತರ ದೇಗುಲ ಪ್ರವೇಶಕ್ಕೆ ಸವರ್ಣೀಯರು ಒಪ್ಪಿಲ್ಲ, ಈ ಕುರಿತಾಗಿ ಎರಡು ಬಾರಿ ನಡೆಸಿದ ಶಾಂತಿ ಸಭೆಯೂ ವಿಫಲವಾಗಿತ್ತು.
ದಲಿತರು ದೇಗುಲ ಪ್ರವೇಶಕ್ಕೆ ಸವರ್ಣೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಗುಲ ಅವರೇ ಇಟ್ಟುಕೊಳ್ಳಲಿ, ದೇವರನ್ನ ತೆಗುದುಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ. ಈ ಮಧ್ಯೆ ಪೊಲೀಸರ ಭದ್ರತೆ ನಡುವೆ ದಲಿತರು ದೇಗುಲ ಪ್ರವೇಶಿಸಿದ್ದಾರೆ.
ಮಾಜಿ ಶಾಸಕ ಎಂ ಶ್ರೀನಿವಾಸ್ ಸವರ್ಣೀಯರ ಮನವೊಲಿಸಲು ಯತ್ನಿಸಿದ್ದಾರೆ. ತಹಶೀಲ್ದಾರ್, ಸಮಾಜ ಕಲ್ಯಾಣ, ಪೊಲೀಸ್ ಇಲಾಖೆ ಅಧಿಕಾರಿಗಳು ಮನವೊಲಿಕೆಗೆ ಯತ್ನಿಸಿದ್ದು, ಯಾರ ಮನವಿಗೂ ಗ್ರಾಮಸ್ಥರು ಸ್ಪಂದಿಸುತ್ತಿಲ್ಲ. ಕೊನೆಗೆ ಸರ್ಕಾರಿ ಅಧಿಕಾರಿಗಳು ದಲಿತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದಾರೆ.
ದಲಿತರ ದೇವಾಲಯ ಪ್ರವೇಶಿಸಿದ್ದಾರೆ, ಇನ್ನು ಮುಂದೆ ನಾವು ದೇವಾಲಯ ಪ್ರವೇಶ ಮಾಡುವುದಿಲ್ಲ ಎಂದು ಸವರ್ಣೀಯರು ಕೋಪಗೊಂಡಿದ್ದಾರೆ. ಸದ್ಯಕ್ಕೆ ದೇವಸ್ಥಾನಕ್ಕೆ ಬಾಗಿಲು ಬಂದ್ ಮಾಡಲಾಗಿದ್ದು, ಎಂದಿನಂತೆ ಸಂಜೆ ತೆರೆಯುತ್ತದೆ ಎಂದು ಜಿಲ್ಲಾಡಳಿತ ಹೇಳಿದೆ. ದೇವಸ್ಥಾನ ಪ್ರವೇಶಕ್ಕೆ ಇಲಾಖೆ ಎಲ್ಲರಿಗೂ ಅವಕಾಶ ಮಾಡಿಕೊಟ್ಟಿದೆ. ಸವರ್ಣೀಯರು ಉತ್ಸವ ಮೂರ್ತಿಯನ್ನು ಮತ್ತೊಂದು ಕೋಣೆಯಲ್ಲಿ ಇಟ್ಟಿದ್ದು, ಉತ್ಸವ ಮೂರ್ತಿಯನ್ನ ದೇವಸ್ಥಾನಕ್ಕೆ ಸಾಗಿಸಲು ಮುಜರಾಯಿ ಇಲಾಖೆ ತೀರ್ಮಾನಿಸಿದೆ.
ಈ ಬಗ್ಗೆ ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರದಾರ್ ಹೇಳಿಕೆ ನೀಡಿದ್ದು, ದೇವಸ್ಥಾನಕ್ಕೆ ಪ್ರವೇಶ ಇಲ್ಲ ಎಂದು ನಮಗೆ ದೂರು ನೀಡಿದ್ದಾರೆ. ದಲಿತರು ತಮಗೆ ಪ್ರವೇಶ ಇಲ್ಲ ಎಂಬ ಬಗ್ಗೆ ನಮಗೆ ಮಾಹಿತಿ ಕೊಟ್ಟಿದ್ದರು. 4 ತಿಂಗಳ ಹಿಂದೆ ಎಲ್ಲರೂ ದೇವಸ್ಥಾನಕ್ಕೆ ಹೋಗುತ್ತಿದ್ದರು. ಕೆಲವು ದಿನಗಳ ಹಿಂದೆ ಇಲ್ಲಿ ಸಮಸ್ಯೆ ಉಂಟಾಗಿದೆ. ಇದು ಮುಜುರಾಯಿ ದೇವಸ್ಥಾನವಾಗಿದ್ದು, ಎಲ್ಲರಿಗೂ ಪ್ರವೇಶಕ್ಕೆ ಅವಕಾಶ ಇದೆ ಎಂದರು.
ಸಮಾಜ ಕಲ್ಯಾಣ ಅಧಿಕಾರಿ ಸಿದ್ದಲಿಂಗಪ್ಪ ಮಾತನಾಡಿ, 4 ತಿಂಗಳಿನಿಂದ ಈ ಸಮಸ್ಯೆ ಇದೆ. ದಲಿತರ ದೇಗುಲ ಪ್ರವೇಶಕ್ಕೆ ಬಿಟ್ಟಿಲ್ಲ. 2 ಬಾರಿ ಸಭೆ ಮಾಡಿ ಗ್ರಾಮಸ್ಥರಿಗೆ ತಿಳಿಸಿದ್ದೇವೆ. ಗ್ರಾಮದಲ್ಲಿರುವ ವಿರೋಧದ ಬಗ್ಗೆ ಮಾಹಿತಿ ನೀಡಿದ್ದೇವೆ. ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದರು.
ಇದನ್ನೂ ಓದಿ; ಬೆಂಗಳೂರು | ನಗರದಲ್ಲಿ 12 ಗಂಟೆಯೊಳಗೆ ಮೂರು ಕೊಲೆಗಳು!



This is a routine affairs.