ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಇಂದು (ನ.11) ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಖನ್ನಾ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ನ್ಯಾಯಮೂರ್ತಿ ಖನ್ನಾ ಅವರು ಚುನಾವಣಾ ಬಾಂಡ್‌ಗಳ ಯೋಜನೆ ರದ್ದು, ವಿಧಿ 370ರ ರದ್ದತಿ ಎತ್ತಿ ಹಿಡಿಯುವುದು ಸೇರಿದಂತೆ ಸುಪ್ರೀಂ ಕೋರ್ಟ್‌ನ ಹಲವಾರು ಮಹತ್ವದ ತೀರ್ಪುಗಳನ್ನು ನೀಡಿದ್ದ ಪೀಠಗಳ ಭಾಗವಾಗಿದ್ದರು.
ಕಳೆದ ಎರಡು ವರ್ಷಗಳ ಕಾಲ ಸಿಜೆಐ ಆಗಿ ಕಾರ್ಯ ನಿರ್ವಹಿಸಿದ್ದ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಕಳೆದ ಭಾನುವಾರ ನಿವೃತ್ತರಾಗಿದ್ದಾರೆ. ಹಾಗಾಗಿ, ಹೊಸ ನ್ಯಾಯಮೂರ್ತಿಯಾಗಿ ಖನ್ನಾ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಖನ್ನಾ ಅವರನ್ನು ಮುಂದಿನ ಸಿಜೆಐ ಆಗಿ ಕಳೆದ ಅಕ್ಟೋಬರ್ 17 ರಂದು ನಿವೃತ್ತ ಸಿಜೆಐ ಚಂದ್ರಚೂಡ್ ಅವರು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಹಿರಿತನದ ಆಧಾರದಲ್ಲಿ ಖನ್ನಾ ಅವರ ಆಯ್ಕೆ ನಡೆದಿದೆ.
ನ್ಯಾಯಮೂರ್ತಿ ಸಂಜೀವ್ ಖನ್ನಾ ವೃತ್ತಿ ಜೀವನದ ಪರಿಚಯ
ಮೇ 1960ರಲ್ಲಿ ಜನಿಸಿದ ಜಸ್ಟಿಸ್ ಖನ್ನಾ ಅವರು, 1983ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‌ಗೆ ವಕೀಲರಾಗಿ ಸೇರಿಕೊಂಡರು. ದೆಹಲಿಯ ತೀಸ್ ಹಜಾರಿ ಸಂಕೀರ್ಣದಲ್ಲಿ ಜಿಲ್ಲಾ ನ್ಯಾಯಾಲಯಗಳ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ ಅವರು, ದೆಹಲಿ ಹೈಕೋರ್ಟ್‌ವರೆಗೂ ಕೆಲಸ ಮಾಡಿದ್ದಾರೆ.
ಖನ್ನಾ ಅವರು ಸಾಂವಿಧಾನಿಕ ಕಾನೂನು, ನೇರ ತೆರಿಗೆ, ಮಧ್ಯಸ್ಥಿಕೆ, ವಾಣಿಜ್ಯ ಕಾನೂನು, ಕಂಪನಿ ಕಾನೂನು, ಭೂ ಕಾನೂನು, ಪರಿಸರ ಕಾನೂನು ಮತ್ತು ವೈದ್ಯಕೀಯ ನಿರ್ಲಕ್ಷ್ಯವನ್ನು ಒಳಗೊಂಡ ವಿವಿಧ ನ್ಯಾಯಮಂಡಳಿಗಳ ಭಾಗವಾಗಿದ್ದರು. ಹೆಚ್ಚುವರಿಯಾಗಿ, ಅವರು ದೀರ್ಘಾವಧಿಯವರೆಗೆ ಆದಾಯ ತೆರಿಗೆ ಇಲಾಖೆಯ ಹಿರಿಯ ಸ್ಥಾಯಿ ವಕೀಲರ ಹುದ್ದೆಯನ್ನು ಹೊಂದಿದ್ದರು.
2004ರಲ್ಲಿ, ನ್ಯಾಯಮೂರ್ತಿ ಖನ್ನಾ ಅವರನ್ನು ದೆಹಲಿಯ ಸ್ಥಾಯಿ ವಕೀಲರಾಗಿ (ಸಿವಿಲ್) ನೇಮಿಸಲಾಯಿತು. ಅಲ್ಲಿ ಅವರ ಅಧಿಕಾರಾವಧಿಯಲ್ಲಿ, ಅವರು ದೆಹಲಿ ಹೈಕೋರ್ಟ್‌ನಲ್ಲಿ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಮತ್ತು ಅಮಿಕಸ್ ಕ್ಯೂರಿಯಾಗಿ ಹಲವಾರು ಕ್ರಿಮಿನಲ್ ಮೊಕದ್ದಮೆಗಳನ್ನು ವಿಚಾರಣೆ ನಡೆಸಿದ್ದಾರೆ.
2005ರಲ್ಲಿ, ಖನ್ನಾ ಅವರು ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು ಮತ್ತು 2006ರಲ್ಲಿ ಖಾಯಂ ನ್ಯಾಯಾಧೀಶರಾದರು. ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಅವಧಿಯಲ್ಲಿ ಖನ್ನಾ ಅವರು ದೆಹಲಿ ನ್ಯಾಯಾಂಗ ಅಕಾಡೆಮಿ, ದೆಹಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ ಮತ್ತು ಜಿಲ್ಲಾ ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರಗಳ ಅಧ್ಯಕ್ಷ/ಪ್ರಭಾರ ನ್ಯಾಯಾಧೀಶರೂ ಆಗಿದ್ದರು.
ಜನವರಿ 18,2019 ರಂದು, ನ್ಯಾಯಮೂರ್ತಿ ಖನ್ನಾ ಅವರನ್ನು ಸುಪ್ರೀಂ ಕೋರ್ಟ್‌ಗೆ ನೇಮಿಸಲಾಯಿತು. ಸುಪ್ರೀಂ ಕೋರ್ಟ್‌ನ ಅಧಿಕಾರಾವಧಿಯಲ್ಲಿ, ಅವರು ಜೂನ್ 2023 ರಿಂದ ಡಿಸೆಂಬರ್ 2023 ರವರೆಗೆ ಸುಪ್ರೀಂ ಕೋರ್ಟ್ ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಹುದ್ದೆಯನ್ನು ನಿಭಾಯಿಸಿದ್ದರು.
ಪ್ರಸ್ತುತ, ಅವರು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ ಮತ್ತು ಭೋಪಾಲ್‌ನ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯ ಆಡಳಿತ ಸಲಹೆಗಾರರ ಸದಸ್ಯರಾಗಿದ್ದಾರೆ.
ಖನ್ನಾ ಅವರು ಮೇ 13, 2025 ರವರೆಗೆ ಸಿಜೆಐ ಆಗಿ ಕಾರ್ಯನಿರ್ವಹಿಸಲಿದ್ದಾರೆ.
ಇದನ್ನೂ ಓದಿ : ವಿಚಾರಣೆ ಬಾಕಿಯಿರುವ ಆರೋಪಿಯನ್ನು ಮಾಧ್ಯಮಗಳು ಅಪರಾಧಿ-ನಿರಪರಾಧಿ ಎಂದು ಘೋಷಿಸುವಂತಿಲ್ಲ : ಕೇರಳ ಹೈಕೋರ್ಟ್


