ಮಹಾರಾಷ್ಟ್ರದ ಹಿರಿಯ ರಾಜಕಾರಣಿ, ಎನ್‌ಸಿಪಿ ನಾಯಕ ಬಾಬಾ ಸಿದ್ದೀಕ್ ಅವರ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು, ಘಟನೆ ನಡೆದ ಒಂದು ತಿಂಗಳ ಬಳಿಕ ಭಾನುವಾರ (ನ.10) ಬಂಧಿಸಲಾಗಿದೆ.
ಮುಂಬೈ ಪೊಲೀಸರ ಅಪರಾಧ ವಿಭಾಗ ಮತ್ತು ಉತ್ತರ ಪ್ರದೇಶದ ಎಸ್‌ಟಿಎಫ್ ಜಂಟಿ ಕಾರ್ಯಾಚರಣೆ ನಡೆಸಿ ಉತ್ತರ ಪ್ರದೇಶ ಬಹ್ರೈಚ್‌ನಿಂದ ಆರೋಪಿ ಶಿವಕುಮಾರ್ ಗೌತಮ್ ಅಲಿಯಾಸ್ ಶಿವನನ್ನು ಬಂಧಿಸಿದೆ. ಈತ ನೇಪಾಳಕ್ಕೆ ಪರಾರಿಯಾಗಲು ಸಿದ್ದತೆ ನಡೆಸಿದ್ದ ಎನ್ನಲಾಗಿದೆ.
ಪ್ರಕರಣದ ಇನ್ನಿಬ್ಬರು ಶಂಕಿತ ಶೂಟರ್‌ಗಳಾದ ಹರಿಯಾಣದ ಗುರ್‌ಮೈಲ್ ಸಿಂಗ್ ಮತ್ತು ಉತ್ತರ ಪ್ರದೇಶದ ಧರ್ಮರಾಜ್ ಕಶ್ಯಪ್ ಅವರನ್ನು ಈಗಾಗಲೇ ಬಂಧಿಸಲಾಗಿದೆ.
ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಗ್ಯಾಂಗ್‌ಸ್ಟರ್ ಅನ್ಮೋಲ್ ಬಿಷ್ಣೋಯ್ ಜೊತೆ ಶಿವ ನೇರ ಸಂಪರ್ಕದಲ್ಲಿದ್ದ. ಸಿದ್ದೀಕ್ ಅವರ ಹತ್ಯೆಯನ್ನು ಲಾರೆನ್ಸ್ ಗ್ಯಾಂಗ್ ಭಯ ಹುಟ್ಟು ಹಾಕಲು ಮತ್ತು ಸುಲಿಗೆ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಯೋಜಿಸಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಬಹ್ರೈಚ್‌ನ ಹೊರವಲಯದ ಅರಣ್ಯ ಪ್ರದೇಶದ ಕುಗ್ರಾಮವೊಂದರಲ್ಲಿ ಶಿವ ಅಡಗಿಕೊಂಡಿದ್ದ. ಪೊಲೀಸರಿಂದ ತಪ್ಪಿಸಿಕೊಳ್ಳಲು ಆತ ಮೊಬೈಲ್ ಫೋನ್ ಬಳಸುತ್ತಿರಲಿಲ್ಲ. ಆತನಿಗೆ ಸಹಾಯ ಮಾಡಿದ್ದ ಇಬ್ಬರು ವ್ಯಕ್ತಿಗಳನ್ನೂ ಕೂಡ ಬಂಧಿಸಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶಿವ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
“ಬಾಬಾ ಸಿದ್ದೀಕ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಿವನನ್ನು ಉತ್ತರ ಪ್ರದೇಶದಿಂದ ಬಂಧಿಸಲಾಗಿದೆ. ನಾಲ್ವರು ಅಧಿಕಾರಿಗಳ ಸಮರ್ಪಿತ ತಂಡ 28 ದಿನಗಳ ಕಾಲ ಆತನಿಗಾಗಿ ಹುಡುಕಾಟ ನಡೆಸಿತ್ತು. ಅಂತಿಮವಾಗಿ ಉತ್ತರ ಪ್ರದೇಶ ಎಸ್‌ಟಿಎಫ್‌ನ ಸಹಾಯದಿಂದ ನಾವು ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ” ಎಂದು ಮುಂಬೈನ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಲಕ್ಷ್ಮಿ ಗೌತಮ್ ತಿಳಿಸಿದ್ದಾರೆ.
“ಶಿವ ಜೊತೆ ಬಂಧಿತರಾಗಿರುವ ಇನ್ನಿಬ್ಬರು ಆರೋಪಿಗಳಾದ ಅನುರಾಗ್ ಕಶ್ಯಪ್ ಮತ್ತು ಜ್ಞಾನ್ ಪ್ರಕಾಶ್ ತ್ರಿಪಾಠಿ ಶಿವ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದರು. ಅಲ್ಲದೆ, ಆತನೊಂದಿಗೆ ನೇಪಾಳಕ್ಕೆ ಪರಾರಿಯಾಗಲು ಅವರೂ ಯೋಜಿಸುತ್ತಿದ್ದರು” ಎಂದು ಡಿಸಿಪಿ ದತ್ತ ನಲವಾಡೆ ಹೇಳಿದ್ದಾರೆ.
ಅನುರಾಗ್ ಕಶ್ಯಪ್ ಈ ಹಿಂದೆ ಬಂಧಿತನಾಗಿರುವ ಧರ್ಮರಾಜ್ ಕಶ್ಯಪ್‌ನ ಸಹೋದರ. ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿಗೆ ತ್ರಿಪಾಠಿ 1.5 ಲಕ್ಷ ರೂ. ಕಳುಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸಿದ್ದೀಕ್ ಹತ್ಯೆ ಬಳಿಕ ಶಿವ ಥಾಣೆಗೆ ಮತ್ತು ನಂತರ ಪುಣೆಗೆ ಪರಾರಿಯಾಗಿದ್ದ. ಮಾರ್ಗಮಧ್ಯೆ ಆತ ತನ್ನ ಮೊಬೈಲ್ ಫೋನ್ ಅನ್ನು ಬಿಸಾಕಿದ್ದ. ಆದ್ದರಿಂದ, ಪೊಲೀಸರಿಗೆ ಆತನ ಮೊಬೈಲ್ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಉತ್ತರ ಪ್ರದೇಶಕ್ಕೆ ಪರಾರಿಯಾಗುವ ವೇಳೆ ಶಿವ ರೈಲು ಪ್ರಯಾಣಿಕರಿಂದ ಮೊಬೈಲ್ ಪಡೆದುಕೊಂಡು ಅನುರಾಗ್‌ಗೆ ಕರೆ ಮಾಡುತ್ತಿದ್ದ. ಅಲ್ಲದೆ, ತನ್ನ ಸ್ಥಳವನ್ನು ಆಗಾಗ ಬದಲಾಯಿಸುತ್ತಿದ್ದ.
ಬಾಬಾ ಸಿದ್ದೀಕ್ ಅವರನ್ನು, ದಸರಾ ಹಬ್ಬದ ಅಂಗವಾಗಿ ಮಗ ಝೀಶಾನ್ ಸಿದ್ದೀಕ್ ಕಚೇರಿ ಬಳಿ ಪಠಾಕಿ ಸಿಡಿಸುತ್ತಿದ್ದ ವೇಳೆ ಕಳೆದ ಅಕ್ಟೋಬರ್ 12ರಂದು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಇದನ್ನೂ ಓದಿ : ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್ ಖನ್ನಾ ಪ್ರಮಾಣವಚನ ಸ್ವೀಕಾರ


