ಉಡುಪಿ ಜಿಲ್ಲೆ ಕಾರ್ಕಳದ ಬೈಲೂರಿನ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ನಕಲಿ ಪರಶುರಾಮ ಪ್ರತಿಮೆ ನಿರ್ಮಿಸಿ ಸರ್ಕಾರಕ್ಕೆ ವಂಚಿಸಿರುವ ಆರೋಪದ ಮೇಲೆ ಪ್ರತಿಮೆಯ ಶಿಲ್ಪಿ ಕೃಷ್ಣ ನಾಯಕ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಕೃಷ್ಣ ನಾಯಕ್ ‘ಕೃಷ್ ಆರ್ಟ್ ವರ್ಲ್ಡ್’ ಎಂಬ ಸಂಸ್ಥೆಯ ಮೂಲಕ ಥೀಮ್ ಪಾರ್ಕ್‌ನಲ್ಲಿ ಕಂಚಿನ ಪರಶುರಾಮ ಪ್ರತಿಮೆ ಸ್ಥಾಪಿಸಲು ಉಡುಪಿ ನಿರ್ಮಿತಿ ಕೇಂದ್ರದಿಂದ 1.25 ಕೋಟಿ ರೂಪಾಯಿ ಹಣ ಪಡೆದುಕೊಂಡು, ಕಂಚಿನ ಪ್ರತಿಮೆ ಮಾಡದೇ ನಕಲಿ ಫೈಬರ್ ಪ್ರತಿಮೆ ನಿರ್ಮಿಸಿ ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ನಲ್ಲೂರಿನ ಕೃಷ್ಣ ಶೆಟ್ಟಿ ಜೂನ್ ತಿಂಗಳಲ್ಲಿ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ರದ್ಧುಗೊಳಿಸುವಂತೆ ಕೋರಿ ಕೃಷ್ಣ ನಾಯಕ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅಕ್ಟೋಬರ್ 21ರಂದು ಅರ್ಜಿಯನ್ನು ವಜಾಗೊಳಿಸಿತ್ತು. ಈ ಹಿನ್ನೆಲೆ ಕೃಷ್ಣ ನಾಯಕ್ ನಿರೀಕ್ಷಣಾ ಜಾಮೀನು ಕೋರಿ ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ತಿರಸ್ಕರಿಸಿತ್ತು.
ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡ ಬಳಿಕ, ಕೃಷ್ಣ ನಾಯಕ್ ತಲೆಮರೆಸಿಕೊಂಡಿದ್ದರು. ಅವರನ್ನು ಕೇರಳದ ಕ್ಯಾಲಿಕಟ್‌ನಿಂದ ಭಾನುವಾರ (ನ.10) ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ಹಿನ್ನೆಲೆ : ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಕಾರ್ಕಳದ ಶಾಸಕ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಕಾರ್ಕಳದ ಬೈಲೂರಿನ ಉಮ್ಮಿಕಲ್ ಬೆಟ್ಟದ ಮೇಲೆ ಪರಶುರಾಮ ಥೀಮ್ ಪಾರ್ಕ್ ನಿರ್ಮಿಸಲಾಗಿತ್ತು.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದನ್ನು ಉದ್ಘಾಟಿಸಿದ್ದರು. ಬಳಿಕ ಕೆಲ ದಿನಗಳಲ್ಲೇ ಪಾರ್ಕ್ ಕಾಮಗಾರಿ ಪೂರ್ಣಗೊಂಡಿಲ್ಲ ಎಂಬ ಕಾರಣಕ್ಕೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿತ್ತು.
ಇದು ಜನರಲ್ಲಿ ಅನುಮಾನ ಮೂಡುವಂತೆ ಮಾಡಿತ್ತು.
ನಂತರ ಕಾಂಗ್ರೆಸ್ ನಾಯಕರು ಸೇರಿದಂತೆ ಹಲವರು ಥೀಮ್ ಪಾರ್ಕ್‌ನಲ್ಲಿರುವ ಪರಶುರಾಮ ಪ್ರತಿಮೆ ಕಂಚಿನದ್ದಲ್ಲ, ಅದು ನಕಲಿ ಫೈಬರ್ ಪ್ರತಿಮೆ ಎಂದು ಆರೋಪಿಸಿದ್ದರು. ಈ ಆರೋಪವನ್ನು ಅಲ್ಲಗಳೆದಿದ್ದ ಶಾಸಕ ಸುನಿಲ್ ಕುಮಾರ್ ಆಪ್ತರು ಮತ್ತು ಬಿಜೆಪಿ ನಾಯಕರು ಪ್ರತಿಮೆಯ ಬಳಿಗೆ ತೆರಳಿ ಸುತ್ತಿಗೆ ಮೂಲಕ ಹೊಡೆದು ಅದು ಕಂಚಿನ ಪ್ರತಿಮೆಯೇ? ಎಂದು ಸಾಬೀತುಪಡಿಸುವ ಪ್ರಯತ್ನ ಮಾಡಿದ್ದರು. ನಂತರ ಪ್ರತಿಮೆ ಏಕಾಏಕಿ ಕಾಣೆಯಾಗಿತ್ತು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಚುನಾವಣೆ ನಡೆದು ಹೊಸ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಥೀಮ್ ಪಾರ್ಕ್ ಅಕ್ರಮದ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿತು. ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿ ಪ್ರಸ್ತುತ ಸಿಐಡಿ ತನಿಖೆ ನಡೆಯುತ್ತಿದೆ.
ಪ್ರಕರಣ ಸಂಬಂಧ ಈಗಾಗಲೇ ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್ ಕುಮಾರ್ ಅವರನ್ನು ಉಡುಪಿ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾ ಕುಮಾರಿ ಅಮಾನತು ಮಾಡಿದ್ದಾರೆ. ಈಗ ಶಿಲ್ಪಿ ಕೃಷ್ಣ ನಾಯಕ್ ಬಂಧನವಾಗಿದೆ.
ಇದನ್ನೂ ಓದಿ : ಅತ್ಯಾಚಾರ ಪ್ರಕರಣ: ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್


