ಬಾಗಲಕೋಟೆಯ ತೇರದಾಳದ ದೇವಸ್ಥಾನ ಉದ್ಘಾಟನಾ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಬಿಜಾಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತಿಗೆ ಸಭಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಕಾರ್ಯಕ್ರಮದಲ್ಲಿ ವಕ್ಫ್ ವಿಚಾರ ಪ್ರಸ್ತಾಪಕ್ಕೆ ಜನರು ವಿರೋಧ ವ್ಯಕ್ತಪಡಿಸಿದ್ದು, ಯತ್ನಾಳ್ ಅನಿವಾರ್ಯವಾಗಿ ವೇದಿಕೆ ತೊರೆಯಬೇಕಾಯಿತು.
ಬಾಗಲಕೋಟೆಯ ತೇರದಾಳ ಪಟ್ಟಣದ ಅಲ್ಲಮಪ್ರಭು ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಶಾಸಕ ಯತ್ನಾಳ್ ಮುಖ್ಯ ಅತಿಥಿಗಳಲ್ಲಿ ಒಬ್ಬರಾಗಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಯತ್ನಾಳ್, ಪ್ರಸ್ತುತ ನಡೆಯುತ್ತಿರುವ ವಕ್ಫ್ ಭೂ ವಿವಾದವನ್ನು ಪ್ರಸ್ತಾಪಿಸಿದರು. ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ವಕ್ಫ್ ಜಮೀನು ವಿವಾದವನ್ನು ಎಳೆದಿದ್ದಕ್ಕೆ ಜನರ ವಿರೋಧ ವ್ಯಕ್ತವಾಯಿತು. ‘ವಕ್ಫ್ ವಿಷಯವನ್ನು ಎಳೆದುಕೊಂಡು ಕಾರ್ಯಕ್ರಮವನ್ನು ರಾಜಕೀಯಗೊಳಿಸಬಾರದು’ ಎಂದು ಭಕ್ತರು ಬಿಜೆಪಿ ಶಾಸಕರಿಗೆ ತಾಕೀತು ಮಾಡಿದರು.
“ಅಲ್ಲಮಪ್ರಭು ದೇವಾಲಯ ನಿರ್ಮಾಣಕ್ಕೆ ಮುಸ್ಲಿಮರು 6 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ” ಎಂದು ಜನರು ಈ ಸಂದರ್ಭದಲ್ಲಿ ಹೇಳಿದ್ದಾರೆ. ಜನರ ಆಕ್ಷೇಪದ ಹಿನ್ನೆಲೆಯಲ್ಲಿ ಯತ್ನಾಳ್ ವೇದಿಕೆಯಿಂದ ಹೊರ ನಡೆದರು.

ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಿಜಯಪುರದಲ್ಲಿ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಎಂದು ಹೆಸರು ನಮೂದಾಗಿರುವುದು ಕಂಡುಬಂದಿದೆ. ಅಲ್ಲದೇ ಈ ವಿಚಾರವಾಗಿ ರೈತರಿಗೆ ನೋಟಿಸ್ ಸಹ ನೀಡಿದ್ದು, ವಿರೋಧದ ಬಳಿಕ ವಾಪಸ್ ಪಡೆಯಲಾಗಿದೆ.
ರಾಜಕಾರಣದ ಭಾಷಣ ಮಾಡುವ ವೇದಿಕೆ ಇದಲ್ಲ ಎಂದು ಯತ್ನಾಳ್ ನಿಗೆ ಛೀ ಮಾರಿ ಹಾಕಿದ ಜನ.
ಇಂಗು ತಿಂದ ಮಂಗನಂತೆ ವೇದಿಕೆಯಿಂದ ಹೊರಗೆ ಹೋದ ಯತ್ನಾಳ್. pic.twitter.com/snyV5gJG9B
— 👑Che_ಕೃಷ್ಣ🇮🇳💛❤️ (@ChekrishnaCk) November 11, 2024
ಈ ವಿಚಾರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಇದೇ ವಿಚಾರವನ್ನು ಯತ್ನಾಳ್, ಬಾಗಲಕೋಟೆ ಜಿಲ್ಲೆ ತೇರದಾಳ ಪಟ್ಟಣದಲ್ಲಿ ಅಲ್ಲಮಪ್ರಭು ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮದಲ್ಲೂ ಪ್ರಸ್ತಾಪಿಸಿದ್ದಾರೆ. ಆದರೆ, ಬಿಜೆಪಿ ಶಾಸಕರ ನಡೆಗೆ ಸ್ಥಳೀಯರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ; ಅತ್ಯಾಚಾರ ಪ್ರಕರಣ: ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್


