ಅಝರ್ ಬೈಜಾನ್‌ನ ರಾಜಾಧಾನಿ ಬಾಕುವಿನಲ್ಲಿ 29ನೇ ವಿಶ್ವ ಹವಾಮಾನ ಶೃಂಗಸಭೆ (COP29) ನಡೆಯುತ್ತಿದೆ. ನವೆಂಬರ್ 11ರಂದು ಪ್ರಾರಂಭಗೊಂಡಿರುವ ಈ ಸಭೆ, 22ರವರೆಗೆ ಮುಂದುವರಿಯಲಿದೆ.
ವಿಶ್ವ ಸಂಸ್ಥೆಯ ಈ ಹವಾಮಾನ ಶೃಂಗಸಭೆ (COP) ಪ್ರತಿ ವರ್ಷವೂ ನಡೆಯುತ್ತದೆ. ಪ್ರಪಂಚದ ಬಹುತೇಕ ಎಲ್ಲಾ ದೇಶಗಳ ಸಂಪೂರ್ಣ ಸದಸ್ಯತ್ವದೊಂದಿಗೆ ಹವಾಮಾನ ಬದಲಾವಣೆಯ ಕುರಿತು ನಡೆಯುವ ವಿಶ್ವದ ಏಕೈಕ ಬಹುಪಕ್ಷೀಯ ನಿರ್ಧಾರ ವೇದಿಕೆ ಇದಾಗಿದೆ.
ಸರಳವಾಗಿ ಹೇಳುವುದಾದರೆ ಹವಾಮಾನ ಶೃಂಗಸಭೆ ಎಂಬುವುದು ಜಾಗತಿಕ ಹವಾಮಾನ ಬಿಕ್ಕಟ್ಟನ್ನು ಪರಿಹರಿಸುವ ಮಾರ್ಗಗಳನ್ನು ಕಂಡುಕೊಳ್ಳುವ ಸಮಾವೇಶವಾಗಿದೆ. ಉದಾಹರಣೆಗೆ ಜಾಗತಿಕ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್‌ಗೆ ಸೀಮಿತಗೊಳಿಸುವುದು, ದುರ್ಬಲ ಸಮುದಾಯಗಳಿಗೆ ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹೊಂದಿಕೊಳ್ಳಲು ಸಹಾಯ ಮಾಡುವುದು ಮತ್ತು 2050ರ ಹೊತ್ತಿಗೆ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವುದು.
The World Leaders Climate Action Summit at the 29th session of the Conference of the Parties (COP29) to the UN Framework Convention on Climate Change commenced on November 12 in Baku.
President Ilham Aliyev delivered a speech at the opening ceremony of the World Leaders Summit.… pic.twitter.com/ipbO7tcpd1
— COP29 Azerbaijan (@COP29_AZ) November 12, 2024
ಟ್ರಂಪ್ ಆಯ್ಕೆಯ ಕಾರ್ಮೋಡ
ಜಾಗತಿಕ ತಾಪಮಾನ ನಿಯಂತ್ರಣ ಪ್ರಯತ್ನಗಳ ಹೆಗ್ಗುರುತಾಗಿರುವ ಪ್ಯಾರಿಸ್ ಒಪ್ಪಂದದಿಂದ ಹೊರ ನಡೆಯುವುದಾಗಿ ಎರಡನೇ ಬಾರಿಗೆ ಹೇಳಿರುವ ಡೊನಾಲ್ಡ್ ಟ್ರಂಪ್ ಅವರು, ಹವಾಮಾನ ಶೃಂಗ ಸಭೆಯ ಸಮಯದಲ್ಲೇ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಜಾಗತಿಕ ಶೃಂಗಸಭೆಯನ್ನು ಮಬ್ಬಾಗಿಸಿದೆ.
ಟ್ರಂಪ್ ಪ್ಯಾರಿಸ್ ಒಪ್ಪಂದಿಂದ ಹೊರ ಬರುವ ಮೂಲಕ ಇಂಗಾಲದ ಡೈ ಆಕ್ಸೈಟ್ ಹೊರ ಸೂಸುವಿಕೆ ತಡೆಯುವ ನಿಯಂತ್ರಣ ಕ್ರಮಗಳನ್ನು ಸಡಿಲಗೊಳಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
29ನೇ ಶೃಂಗಸಭೆ ನಡೆಯುವಾಗ ಜಾಗತಿಕ ತಾಪಮಾನ ನಿಯಂತ್ರಣದ ವಿಷಯದಲ್ಲಿ ಯಾವುದೇ ರಾಷ್ಟ್ರ ತಾರ್ಕಿಕ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಎಂಬುವುದು ಮತ್ತೊಂದು ವಿಷಾದದ ವಿಷಯ. ಪ್ರಪಂಚದಾದ್ಯಂತ ಹಸಿರು ಶಕ್ತಿ ಮತ್ತು ಹವಾಮಾನ ಬದಲಾವಣೆ ತಗ್ಗಿಸುವ ಕಾರ್ಯಕ್ರಮಗಳನ್ನು ಹೇಗೆ ರೂಪಿಸಬಹುದು? ಎಂಬ ವಿಚಾರದಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳು ಒಂದರ್ಥದಲ್ಲಿ ವಿಫಲವಾಗಿವೆ.
ಇಂಧನ ಅರ್ಥಿಕತೆಯ ರಾಷ್ಟ್ರದಲ್ಲಿ ಹವಾಮಾನ ಶೃಂಗಸಭೆ
ಅಝರ್ ಬೈಜಾನ್‌ನಂತಹ ಪಳೆಯುಳಿಕೆ ಇಂಧನ ಆರ್ಥಿಕತೆಯನ್ನು ಆಧರಿಸಿದ ದೇಶದಲ್ಲಿ ಶೃಂಗಸಭೆಯನ್ನು ಆಯೋಜಿಸಿದ ನಿರ್ಧಾರವನ್ನು ಗ್ರೇಟಾ ಥನ್‌ಬರ್ಗ್ ಸೇರಿದಂತೆ ಜಾಗತಿಕ ಹವಾಮಾನ ಕಾರ್ಯಕರ್ತರು ಟೀಕಿಸಿದ್ದಾರೆ. ಇತ್ತೀಚಿನ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಈ ಬಾರಿಯ ಶೃಂಗ ಸಭೆಯನ್ನು ‘ಗ್ರೀನ್‌ವಾಶ್ ಸಮ್ಮೇಳನ’ ಎಂದು ಗ್ರೇಟಾ ಲೇವಡಿ ಮಾಡಿದ್ದಾರೆ.
ಕಲ್ಲಿದ್ದಲು, ಕಲ್ಲಿದ್ದಲು ಉತ್ಪನ್ನಗಳು, ನೈಸರ್ಗಿಕ ಅನಿಲ, ಉತ್ಪಾದಿಸಿದ ಅನಿಲ, ಕಚ್ಛಾ ತೈಲ, ಪೆಟ್ರೋಲಿಯಂ ಉತ್ಪನ್ನಗಳು, ನವೀಕರಿಸಲಾಗದ ತ್ಯಾಜ್ಯಗಳಂತಹ ಇಂಧನ ಮೂಲಗಳನ್ನು ಪಳೆಯುಳಿಕೆ ಇಂಧನ ಎಂದು ಕರೆಯಲಾಗುತ್ತದೆ.
ಕಳೆದ ವರ್ಷ ದುಬೈನಲ್ಲಿ 28ನೇ ಶೃಂಗಸಭೆ ಆಯೋಜಿಸಿದ್ದಾಗಲೂ ಹವಾಮಾನ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಏಕೆಂದರೆ, ಯುಎಇ ವಿಶ್ವದ ಅಗ್ರ 10 ತೈಲ ಉತ್ಪಾದಿಸುವ ರಾಷ್ಟ್ರಗಳಲ್ಲಿ ಒಂದಾಗಿದೆ. ಅಲ್ಲದೆ, ಕಳೆದ ವರ್ಷದ ಶೃಂಗಸಭೆಯ ಉಸ್ತುವಾರಿಯನ್ನು ಯುಎಇ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಸುಲ್ತಾನ್ ಅಲ್-ಜಾಬರ್ ವಹಿಸಿದ್ದರು.
ಫ್ರೇಮ್‌ವರ್ಕ್ ಕನ್ವೆನ್ಶನ್ ಆನ್ ಕ್ಲೈಮೇಟ್ ಚೇಂಜ್ (UNFCCC)ಯ 198 ಸದಸ್ಯ ರಾಷ್ಟ್ರಗಳು ಸೇರಿದಂತೆ 32,000ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಬಾರಿಯ ಹವಾಮಾನ ಶೃಂಗಸಭೆ (COP29)ಗೆ ಹಾಜರಾಗುವ ನಿರೀಕ್ಷೆಯಿದೆ. ಉದ್ಯಮಿಗಳು, ಯುವಜನರು, ಹವಾಮಾನ ವಿಜ್ಞಾನಿಗಳು, ಸ್ಥಳೀಯ ಜನರು, ಪತ್ರಕರ್ತರು ಮತ್ತು ಇತರ ಹಲವಾರು ಕ್ಷೇತ್ರಗಳ ತಜ್ಞರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
2021ರಲ್ಲಿ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡ ನಂತರ ತಾಲಿಬಾನ್ ಯುಎನ್ ಹವಾಮಾನ ಸಮ್ಮೇಳನದಲ್ಲಿ ಇದೇ ಮೊದಲ ಬಾರಿಗೆ ಭಾಗವಹಿಸುತ್ತಿದೆ.
ಈ ಬಾರಿಯ ಶೃಂಗಸಭೆಯ ಅಜೆಂಡಾವೇನು?
ಈ ಬಾರಿಯ ಹವಾಮಾನ ಶೃಂಗಸಭೆಯನ್ನು ‘finance COP’ ಎಂದು ಗುರುತಿಸಲಾಗಿದೆ. ಏಕೆಂದರೆ, ‘ಹಸಿರುಮನೆ ಅನಿಲ’ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಕಡಿಮೆ-ಆದಾಯದ ದೇಶಗಳನ್ನು ಬೆಂಬಲಿಸಲು ಹಣಕಾಸು ನೆರವು ನೀಡುವ ಉದ್ದೇಶವನ್ನು ಪ್ರಮುಖವಾಗಿ ಹೊಂದಲಾಗಿದೆ.
ವಿಶ್ವವು ಜಾಗತಿಕ ತಾಪಮಾನ ಏರಿಕೆಯನ್ನು ತಡೆಯಬೇಕಾದರೆ 2030ರ ವೇಳೆಗೆ ಚೀನಾವನ್ನು ಹೊರತುಪಡಿಸಿ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಿಗೆ ವಾರ್ಷಿಕ $ 2 ಟ್ರಿಲಿಯನ್‌ಗಿಂತ ಹೆಚ್ಚಿನ ಹೂಡಿಕೆಯ ಅಗತ್ಯವಿದೆ ಎಂದು ಯುಎನ್ ಬೆಂಬಲಿತ ವರದಿಗಳು ಹೇಳಿವೆ.
ಇದನ್ನೂ ಓದಿ : ಜ್ಯೋತಿಬಾ ಫುಲೆ ಅವರ ‘ಗುಲಾಮಗಿರಿ’ ಕೃತಿಗೆ 150 ವರ್ಷ; ನ.14 ರಂದು ಬೆಂಗಳೂರಿನಲ್ಲಿ ವಿಶೇಷ ಉಪನ್ಯಾಸ


