ಕ್ಯಾನ್ಸರ್ ರೋಗಿಯೊಬ್ಬರ ಪುತ್ರ ತನ್ನ ತಾಯಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ಚಾಕುವಿನಿಂದ ಏಳು ಬಾರಿ ಇರಿದಿರುವ ಘಟನೆ ಬುಧವಾರ (ನ.13) ಚೆನ್ನೈನಲ್ಲಿ ನಡೆದಿದೆ. ಈ ಕುರಿತು ತನಿಖೆಗೆ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಆದೇಶಿಸಿದ್ದಾರೆ.
ನಗರದ ಕಲೈಗ್ನರ್ ಶತಮಾನೋತ್ಸವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ವೈದ್ಯ ಬಾಲಾಜಿ ಜಗನ್ನಾಥ್ ಅವರನ್ನು ತೀವ್ರ ನಿಗಾ ಘಟಕ (ಐಸಿಯು) ದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತನ್ನ ತಾಯಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂದು 26 ವರ್ಷದ ವಿಘ್ನೇಶ್ವರನ್ ಎಂಬಾತ ಚಾಕುವಿನಿಂದ ದಾಳಿ ನಡೆಸಿರುವುದಾಗಿ ತಿಳಿದು ಬಂದಿದೆ. ಈತನ ಜೊತೆ ಇತರ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಬುಧವಾರ ಬೆಳಿಗ್ಗೆ 10.30ರ ಸುಮಾರಿಗೆ ವೈದ್ಯ ಜಗನ್ನಾಥ್ ಅವರು ಆಸ್ಪತ್ರೆಯ ಕ್ಯಾನ್ಸರ್ ವಿಭಾಗದಲ್ಲಿ ಕರ್ತವ್ಯದಲ್ಲಿದ್ದ ವೇಳೆ, ಅಲ್ಲಿಗೆ ಬಂದ ವಿಘ್ನೇಶ್ ಮತ್ತು ಆತನ ಮೂವರು ಗೆಳೆಯರು “ಕ್ಯಾನ್ಸರ್ ರೋಗಿಯಾಗಿರುವ ವಿಘ್ನೇಶ್ ತಾಯಿಯ ಸ್ಥಿತಿ ಹದೆಗೆಟ್ಟಿರುವ ಕುರಿತು ವೈದ್ಯನೊಂದಿಗೆ ವಾಗ್ವಾದ ನಡೆಸಿದ್ದಾರೆ. ವೈದ್ಯ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ.
ಈ ವೇಳೆ ವಿಘ್ನೇಶ್ ಏಕಾಏಕಿ ಚಾಕು ತೆಗೆದು ವೈದ್ಯ ಜಗನ್ನಾಥ್ ಅವರ ಕುತ್ತಿಗೆ, ತಲೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಇರಿದಿದ್ದಾನೆ. ಇದನ್ನು ಗಮನಿಸಿ ಧಾವಿಸಿ ಬಂದ ಆಸ್ಪತ್ರೆ ಸಿಬ್ಬಂದಿ ಮತ್ತು ಇತರರು, ಜಗನ್ನಾಥ್ ಅವರನ್ನು ತಕ್ಷಣ ಚಿಕಿತ್ಸೆ ದಾಖಲಿಸಿದ್ದಾರೆ.
“ನಾವು ತಕ್ಷಣ ಜಗನ್ನಾಥ್ ಅವರನ್ನು ಆಪರೇಷನ್ ಥಿಯೇಟರ್‌ಗೆ ಕರೆದೊಯ್ದಿದೆವು. ಅಲ್ಲಿ ಹೃದಯ ಮತ್ತು ನರ-ಶಸ್ತ್ರಚಿಕಿತ್ಸಾ ವಿಭಾಗಗಳ ತಜ್ಞರ ತಂಡವು ಅವರಿಗೆ ಶಸ್ತ್ರಚಿಕಿತ್ಸೆ ಮಾಡಿತು. ಇದರಿಂದ ಜಗನ್ನಾಥ್ ಅವರು ಅಪಾಯದಿಂದ ಪಾರಾಗಿದ್ದಾರೆ. ಅವರ ಸ್ಥಿತಿ ಈಗ ಸ್ಥಿರವಾಗಿದೆ” ಎಂದು ಆಸ್ಪತ್ರೆಯ ನಿರ್ದೇಶಕ ಎಲ್ ಪಾರ್ಥಸಾರಥಿ ತಿಳಿಸಿದ್ದಾರೆ.
ವೈದ್ಯನ ಮೇಲಿನ ದಾಳಿಯು ತಮಿಳುನಾಡು ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದು, ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಮತ್ತು ಆರೋಗ್ಯ ಸಚಿವ ಸುಬ್ರಮಣಿಯನ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯನ ಆರೋಗ್ಯ ವಿಚಾರಿಸಿದ್ದಾರೆ.
கிண்டி கலைஞர் நூற்றாண்டு உயர்சிறப்பு மருத்துவமனையில் பணிபுரியும் மருத்துவர் திரு. பாலாஜி அவர்களை நோயாளியின் குடும்ப உறுப்பினர் ஒருவர் கத்தியால் குத்திய சம்பவம் அதிர்ச்சியளிக்கிறது.
இக்கொடுஞ்செயலில் ஈடுபட்ட நபர் உடனடியாகக் கைது செய்யப்பட்டுள்ளார். மருத்துவர் திரு. பாலாஜி…
— M.K.Stalin (@mkstalin) November 13, 2024
ಸಮಯವನ್ನು ಲೆಕ್ಕಿಸದೆ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ನಮ್ಮ ಸರ್ಕಾರಿ ವೈದ್ಯರ ನಿಸ್ವಾರ್ಥ ಸೇವೆ ಅಪಾರವಾದದ್ದು. ಕೆಲಸದ ಸಮಯದಲ್ಲಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಸಿಎಂ ಎಂ.ಕೆ ಸ್ಟಾಲಿನ್ ತಿಳಿಸಿದ್ದಾರೆ.
ಇದನ್ನೂ ಓದಿ : ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ಪಡೆಯುವುದು ಸ್ಥಾಪಿತ ಹಕ್ಕಲ್ಲ : ಸುಪ್ರೀಂ ಕೋರ್ಟ್


