ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ (ಒಬಿಸಿ) ಸಭೆಯಲ್ಲಿ ಕಾಂಗ್ರೆಸ್ ನಾಯಕ ಮಾಣಿಕ್ಕಂ ಟ್ಯಾಗೋರ್ ಸೇರಿದಂತೆ ಕೆಲವು ವಿರೋಧ ಪಕ್ಷದ ಸದಸ್ಯರು, ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದರೂ ನಾಗರಿಕ ಸೇವೆಗಳಿಗೆ ಸೇರುವಾಗ ಕೆನೆಪದರ ಮಿತಿ ಪರಿಶೀಲಿಸುವಲ್ಲಿ ಒಬಿಸಿ ಅಭ್ಯರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಧ್ವನಿ ಎತ್ತಿದ್ದಾರೆ.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಧಿಕಾರಿಗಳು ‘ಒಬಿಸಿಗಳ ಕಲ್ಯಾಣಕ್ಕಾಗಿ ವಿವಿಧ ಕ್ರಮಗಳು ಮತ್ತು ಯೋಜನೆಗಳ ಅನುಷ್ಠಾನ’ ವಿಷಯದ ಕುರಿತು ವಿವರಿಸುತ್ತಿದ್ದಾಗ ಸಂಸದರು ಈ ಕುರಿತು ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ.
ಸಂಸದರಾದ ಮಾಣಿಕ್ಕಂ ಟ್ಯಾಗೋರ್, ಡಿಎಂಕೆಯ ಟಿಆರ್ ಬಾಲು ಮತ್ತು ಸಮಾಜವಾದಿ ಪಕ್ಷದ ರಾಮಶಂಕರ್ ರಾಜ್‌ಭರ್ ಅವರು, 2023 ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಸೇವೆಗೆ ಸೇರುವಾಗ ಕೆನೆ ಪದರವನ್ನು ತಡೆಯಾಗಿ ಬಳಕೆಯಾಗುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ.
ಈ ವರ್ಷದ ಸೆಪ್ಟೆಂಬರ್‌ನಲ್ಲಿ, ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ನಾಗರಿಕ ಸೇವಾ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾದ ಒಬಿಸಿ ವರ್ಗದ ಅನೇಕ ಅರ್ಹ ಅಭ್ಯರ್ಥಿಗಳ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಮಾಣಿಕ್ಕಂ ಟ್ಯಾಗೋರ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು.
ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಒಬಿಸಿ ನಾನ್-ಕ್ರೀಮಿ ಲೇಯರ್ (ಎನ್‌ಸಿಎಲ್) ಸ್ಥಿತಿಯ ಪರಿಶೀಲನೆಗೆ ಸಂಬಂಧಿಸಿದ ಪ್ರಕ್ರಿಯೆಯಲ್ಲಿ ಗಮನಾರ್ಹ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಇದು ಅವರ ಗೊತ್ತುಪಡಿಸಿದ ಸೇವೆಗಳಿಗೆ ಸೇರುವುದನ್ನು ತಡೆಯುತ್ತಿದೆ ಎಂದು ಟ್ಯಾಗೋರ್ ಪತ್ರದಲ್ಲಿ ತಿಳಿಸಿದ್ದರು.
ತಮ್ಮ ಪತ್ರದಲ್ಲಿ, ಅಭ್ಯರ್ಥಿಗಳ ಪೋಷಕರ ವರ್ಗ III/IV ಎಂಬುವುದನ್ನು ದೃಢೀಕರಿಸಲು ರಾಜ್ಯ ಸರ್ಕಾರಗಳು ನೀಡಿದ ಸಮಾನತೆಯ ಪ್ರಮಾಣಪತ್ರಗಳನ್ನು ತಿರಸ್ಕರಿಸುವುದರ ಸುತ್ತ ಉದ್ಬವಿಸಿರುವ ಒಟ್ಟು ಸಮಸ್ಯೆಯ ಕುರಿತು ಟ್ಯಾಗೋರ್ ಗಮನ ಸೆಳೆದಿದ್ದರು.
ಕಳೆದ ಕೆಲ ತಿಂಗಳ ಹಿಂದೆ 2022ರ ಬ್ಯಾಚ್‌ನ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ಒಬಿಸಿ ಎನ್‌ಸಿಎಲ್ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಒಬಿಸಿ ಕೋಟಾ ನಿಯಂತ್ರಣ ನಿಯಮದ ಸಮಸ್ಯೆ ಉಂಟಾಗಿತ್ತು.
“ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೊರಡಿಸಿದ 1993ರ ಕಚೇರಿ ಜ್ಞಾಪಕ ಪತ್ರವು ಒಬಿಸಿ-ಎನ್‌ಸಿಎಲ್ ವರ್ಗೀಕರಣಕ್ಕೆ ಮಾರ್ಗಸೂಚಿಗಳನ್ನು ನೀಡಿದೆ. ಅದರಲ್ಲಿ ರಾಜ್ಯ ನೀಡಿದ ಪ್ರಮಾಣಪತ್ರಗಳನ್ನು ತಿರಸ್ಕರಿಸುವುದನ್ನು ಕಡ್ಡಾಯಗೊಳಿಸುವ ಯಾವುದೇ ಸ್ಪಷ್ಟ ಷರತ್ತುಗಳು ಇಲ್ಲ. ಆದರೂ, ಪ್ರಾಯೋಗಿಕವಾಗಿ ಈ ಪ್ರಮಾಣಪತ್ರಗಳನ್ನು ಅಧಿಕಾರಿಗಳು ತಿರಸ್ಕರಿಸುತ್ತಿದ್ದಾರೆ. ಇದರಿಂದ ಅನೇಕ ಒಬಿಸಿ ಅಭ್ಯರ್ಥಿಗಳು ಅನ್ಯಾಯವಾಗಿ ಅನರ್ಹರಾಗುತ್ತಿದ್ದಾರೆ” ಎಂದು ಮಾಣಿಕ್ಕಂ ಟ್ಯಾಗೋರ್ ತನ್ನ ಪತ್ರದಲ್ಲಿ ವಿವರಿಸಿದ್ದಾರೆ.
ಸಂಬಳ ಮತ್ತು ಕೃಷಿ ಆದಾಯವನ್ನು ಕೆನೆಪದರ ಮಿತಿಗೆ ಪರಿಗಣಿಸಿರುವುದು ಅಸಮಂಜಸ. ಇದು ಸಾರ್ವಜನಿಕ ವಲಯದ ಉದ್ಯಮಗಳು, ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಇತರ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಪೋಷಕರು ಉದ್ಯೋಗದಲ್ಲಿರುವ ಅಭ್ಯರ್ಥಿಗಳ ಮೇಲೆ ಅಸಾಮಾನವಾಗಿ ಪರಿಣಾಮ ಬೀರುತ್ತಿದೆ ಎಂದು ಟ್ಯಾಗೋರ್ ಹೇಳಿದ್ದಾರೆ.
ಪೋಷಕರು ಸಾರ್ವಜನಿಕ ವಲಯದಲ್ಲಿ ಮಾಡುವ ಅಭ್ಯರ್ಥಿಗಳಿಗೆ ಒಬಿಸಿ-ಎನ್‌ಸಿಎಲ್ ಸ್ಥಾನಮಾನಕ್ಕೆ ಆದಾಯ ಮಾನದಂಡಗಳ ಏಕರೂಪದ ವ್ಯಾಖ್ಯಾನವನ್ನು ಜಾರಿಗೊಳಿಸಲು, ಪಾಲಕರು III/IV ವರ್ಗದವರು ಎಂದು ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ನೀಡುವ ಸಮಾನತೆಯ ಪ್ರಮಾಣಪತ್ರಗಳ ಸ್ವೀಕಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಅಂತರ್ಗತ ನೀತಿಯನ್ನು ರೂಪಿಸಬೇಕು. ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಸಮಾನವಾಗಿ ಪರಿಗಣಿಸಬೇಕು. ಸೇವಾ ಹಂಚಿಕೆ ಮತ್ತು ಒಬಿಸಿ ಪರಿಶೀಲನಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಸುಧಾರಿಸಬೇಕು ಎಂದು ಟ್ಯಾಗೋರ್ ಒತ್ತಾಯಿಸಿದ್ದಾರೆ.
ಬುಧವಾರದ ಈ ಕುರಿತು ಎಕ್ಸ್ ಪೋಸ್ಟ್ ಹಾಕಿದ್ದ ಟ್ಯೋಗೋರ್ “ಮೋದಿಯವರು 2017 ರಿಂದ ಒಬಿಸಿ ಕೆನೆಪದರ ಆದಾಯದ ಮಿತಿಯನ್ನು ಏಕೆ ಹೆಚ್ಚಿಸಿಲ್ಲ? ಹಣದುಬ್ಬರ ಮತ್ತು ಬದಲಾಗುತ್ತಿರುವ ಆರ್ಥಿಕ ವಾಸ್ತವಗಳನ್ನು ಸರಿದೂಗಿಸಿಕೊಳ್ಳಲು ಬದಲಾವಣೆಗಳನ್ನು ತರದೆ ಏಳು ವರ್ಷಗಳು ಕಳೆಯಿತು. ಒಬಿಸಿಗಳಿಗೆ ದ್ರೋಹ ಮಾಡುತ್ತಿರುವವರು ಯಾರು? ಎಂದು ಪ್ರಶ್ನಿಸಿದ್ದಾರೆ.
Why has Modiji not raised the creamy layer income ceiling for OBCs since 2017?
It’s been 7 years with no adjustment to account for inflation and changing economic realities.Who is betraying OBCs ?#OBC #CreamyLayer pic.twitter.com/IrL0yisYdJ
— Manickam Tagore .B🇮🇳மாணிக்கம் தாகூர்.ப (@manickamtagore) November 13, 2024
ಇದನ್ನೂ ಓದಿ | ಪ್ರಯಾಗರಾಜ್: ಬ್ಯಾರಿಕೇಡ್ ಮುರಿದ ಪ್ರತಿಭಟನಾನಿರತ ಯುಪಿಪಿಎಸ್‌ಸಿ ಆಕಾಂಕ್ಷಿಗಳು; ‘ಅಪರಾಧಿಗಳು ನುಸುಳಿದ್ದಾರೆ’ ಎಂದು ಆರೋಪಿಸಿದ ಪೊಲೀಸರು


