ಶ್ರೀಲಂಕಾದ ಸಾರ್ವತ್ರಿಕ ಚುನಾವಣೆಯಲ್ಲಿ ನೂತನ ಅಧ್ಯಕ್ಷ, ಮಾರ್ಕ್ಸ್‌ವಾದಿ ನಾಯಕ ಅನುರ ಕುಮಾರ ದಿಸ್ಸನಾಯಕೆ ನೇತೃತ್ವದ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ.
ಅಧಿಕೃತ ಫಲಿತಾಂಶದ ಪ್ರಕಾರ, ಅಧ್ಯಕ್ಷ ಅನುರ ಕುಮಾರ ದಿಸ್ಸನಾಯಕೆ ನೇತೃತ್ವದ ರಾಷ್ಟ್ರೀಯ ಜನತಾ ಶಕ್ತಿ (ಎನ್‌ಪಿಪಿ) ಒಕ್ಕೂಟವು 159 ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಗಳಿಸಿದೆ.
ಸೆಪ್ಟೆಂಬರ್‌ನಲ್ಲಿ ಅಧ್ಯಕ್ಷರಾಗಿ ಚುನಾಯಿತರಾದ ದಿಸ್ಸನಾಯಕೆ ಅವರು ಶ್ರೀಲಂಕಾದ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಮತ್ತು ಆರ್ಥಿಕ ಬಿಕ್ಕಟ್ಟಿನ ದೇಶವನ್ನು ಮೇಲೆತ್ತುವ ತನ್ನ ಭರವಸೆ ಈಡೇರಿಸಲು ಸ್ಪಷ್ಟ ಬಹುಮತದ ಅಗತ್ಯವಿದೆ ಎಂದು ವರದಿಗಳು ಹೇಳಿವೆ.
ಎನ್‌ಪಿಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಚುನಾವಣಾ ಪೂರ್ವದಲ್ಲಿ ರಾಜಕೀಯ ವಿಶ್ಲೇಷಕರು ನಿರೀಕ್ಷಿಸಿದ್ದರು. ಆದರೆ, ಅದು ಬಹುಮತ ಪಡೆಯಲಿದೆಯೇ? ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ ಎಂದು ಅವರು ಊಹಿಸಿರಲಿಲ್ಲ.
ಈ ಹಿಂದಿನ ಸರ್ಕಾರದಲ್ಲಿ ದಿಸ್ಸನಾಯಕೆ ಅವರ ಪಕ್ಷ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ಕೇವಲ ಮೂರು ಸ್ಥಾನಗಳನ್ನು ಹೊಂದಿತ್ತು. ಈ ಬಾರಿಯ ಚುನಾವಣೆಯಲ್ಲಿ ದಿಸ್ಸನಾಯಕೆ ನೇತೃತ್ವದ ಮೈತ್ರಿಕೂಟ ಬರೋಬ್ಬರಿ 159 ಸ್ಥಾನಗಳನ್ನು ಪಡೆದಿದೆ. 225 ಸ್ಥಾನಗಳನ್ನು ಹೊಂದಿರುವ ಸಂಸತ್‌ನಲ್ಲಿ ಬಹುಮತ ಪಡೆಯಲು 113 ಸ್ಥಾನಗಳನ್ನು ಗೆಲ್ಲಬೇಕಿತ್ತು.
ಸೆಪ್ಟೆಂಬರ್ 22, 2024ರಂದು ನಡೆದ ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಅನುರ ಕುಮಾರ ದಿಸ್ಸನಾಯಕೆ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
2022ರಲ್ಲಿ ಶ್ರೀಲಂಕಾದಲ್ಲಿ ತೀವ್ರ ಅರ್ಥಿಕ ಬಿಕ್ಕಟ್ಟು ಶುರುವಾಗಿ ಜನರು ದಂಗೆಯೆದ್ದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ದಿಸ್ಸನಾಯಕೆ ಅಭೂತಪೂರ್ವ ಗೆಲುವು ದಾಖಲಿಸಿದ್ದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಸಂಸತನ್ನು ವಿಸರ್ಜಿಸಿದ ಅವರು, ಚುನಾವಣೆಗೆ ಆದೇಶಿಸಿದ್ದರು.
ನವೆಂಬರ್ 14ರಂದು ನಡೆದ ಮತದಾನದ ಎಣಿಕೆ ಪ್ರಕ್ರಿಯೆ ಇಂದು (ನ.15) ನಡೆದಿದೆ. ಕಳೆದ ಬಾರಿ ಸಂಸತ್‌ನಲ್ಲಿ ಮೂರು ಸ್ಥಾನಗಳನ್ನು ಹೊಂದಿದ್ದ ದಿಸ್ಸನಾಯಕೆ ನೇತೃತ್ವ ಈ ಬಾರಿ 159 ಸ್ಥಾನಗಳನ್ನು ಪಡೆದಿದೆ. ಈ ಮೂಲಕ ಎಡ ಸರ್ಕಾರ ಮತ್ತು ಎಡಪಂಥೀಯ ಅಧ್ಯಕ್ಷ ದೇಶದ ಚುಕ್ಕಾಣಿ ಹಿಡಿದಂತಾಗಿದೆ.
ಇದನ್ನೂ ಓದಿ : COP29 : ಶೃಂಗಸಭೆಯಿಂದ ಹೊರ ನಡೆದ ಅರ್ಜೆಂಟೀನಾ, ಬಾಕು ಪ್ರವಾಸ ರದ್ದುಪಡಿಸಿದ ಫ್ರಾನ್ಸ್ ಸಚಿವೆ


