ಎನ್‌ಡಿಎ ಮಿತ್ರ ಪಕ್ಷವಾದ ಮೇಘಾಲಯ ಸಿಎಂ ಕಾನ್ರಾಡ್ ಕೆ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡದ್ದ ಬೆಂಬಲವನ್ನು ಭಾನುವಾರ (ನ.18) ಹಿಂತೆಗೆದುಕೊಂಡಿದೆ.
ಕಳೆದ ಒಂದು ವರ್ಷದಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯುವಲ್ಲಿ ಮುಖ್ಯಮಂತ್ರಿ
ಎನ್. ಬಿರೇನ್ ಸಿಂಗ್ ‘ಸಂಪೂರ್ಣ ವಿಫಲರಾಗಿದ್ದಾರೆ’ ಎಂದು ಎನ್‌ಪಿಪಿ ಹೇಳಿಕೊಂಡಿದೆ.
“ಕಳೆದ ಕೆಲ ದಿನಗಳಿಂದ ಮಣಿಪುರದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜನರು ಭಯದಿಂದ ಬದುಕುತ್ತಿದ್ದು, ಅತಿಯಾದ ಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ಬಿಜೆಪಿ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ” ಎಂದು ಎನ್‌ಪಿಪಿ ಮುಖ್ಯಸ್ಥ ಕಾನ್ರಾಡ್ ಕೆ ಸಂಗ್ಮಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಒಟ್ಟು 60 ಸದಸ್ಯ ಬಲದ ಮಣಿಪುರ ವಿಧಾನಸಭೆಯಲ್ಲಿ 7 ಮಂದಿ ಎನ್‌ಪಿಪಿ ಶಾಸಕರಿದ್ಧಾರೆ. ಇವರು ಬೆಂಬಲ ವಾಪಸ್ ಪಡೆದರೂ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ, ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ನ ಐವರು ಮತ್ತು ಜನತಾದಳ ಯುನೈಟೆಡ್ (ಜೆಡಿಯು)ನ 6 ಮಂದಿ ಶಾಸಕ ಬೆಂಬಲದೊಂದಿಗೆ ಬಿಜೆಪಿ 32 ಸ್ಥಾನಗಳ ಸ್ಪಷ್ಟ ಬಹುಮತ ಹೊಂದಿದೆ.
ಮೂರು ಬಾರಿ ಸಿಎಂ ಆಗಿರುವ ಕಾಂಗ್ರೆಸ್‌ನ ಒಕ್ರಾಮ್ ಇಬೋಬಿ ಸಿಂಗ್ ಅವರು ಮುಖ್ಯಮಂತ್ರಿ ಬಿರೇನ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ವಿಫಲವಾಗಿದೆ. ಪ್ರಧಾನಿ ಮೋದಿ ತಕ್ಷಣ ಮಧ್ಯಪ್ರವೇಶಿಸದಿದ್ದರೆ, ಇತರ ಎನ್‌ಡಿಎಯೇತರ ಶಾಸಕರೊಂದಿಗೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
“ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುವುದು ಹಿಂಸಾಚಾರ ಮಿತಿ ಮೀರಿದೆ ಎಂಬುವುದನ್ನು ಸೂಚಿಸುತ್ತದೆ. ಸಿಎಂ ಬೀರೇನ್ ಸಿಂಗ್ ಸರ್ವಪಕ್ಷ ನಿಯೋಗ ಕೊಂಡೊಯ್ಯಲು ತಕ್ಷಣ ಪ್ರಧಾನಿಯೊಂದಿಗೆ ಸಮಯವಕಾಶ ಕೇಳಬೇಕು. ಪ್ರಧಾನಿ ವಿದೇಶದಿಂದ ಬಂದ ತಕ್ಷಣ ಭೇಟಿಯಾಗಲು ನಾವು ಸಿದ್ದರಿದ್ದೇವೆ” ಎಂದು ಒಕ್ರಾಮ್ ಇಬೋಬಿ ಹೇಳಿದ್ದಾರೆ.
ಇನ್ನೆರಡು ಮೃತದೇಹಗಳು ಪತ್ತೆ
ಇತ್ತೀಚಿನ ವರದಿಯ ಪ್ರಕಾರ, ಮಣಿಪುರದಲ್ಲಿ ಭಾನುವಾರ (ನ.17) ಇನ್ನೆರಡು ಮೃದೇಹಗಳು ಪತ್ತೆಯಾಗಿವೆ. ಗೋಣಿ ಚೀಲದಲ್ಲಿ ಕಟ್ಟಿದ್ದ ವಿವಸ್ತ್ರ ಮಹಿಳೆ ಮತ್ತು ಹೆಣ್ಣು ಮಗುವಿನ ಶವ ದಕ್ಷಿಣ ಅಸ್ಸಾಂನ ಬರಾಕ್ ನದಿಯಲ್ಲಿ ದೊರೆತಿದೆ.
ನವೆಂಬರ್ 11ರಿಂದ ಮೈತೇಯಿ ಸಮುದಾಯಕ್ಕೆ ಸೇರಿದ 6 ಮಂದಿಯನ್ನು ಕುಕಿ ಬಂಡುಕೋರರು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಬಳಿಕ ಶುಕ್ರವಾರ (ನ.15) ಮೂವರು ಮಹಿಳೆಯರ ಶವ ಪತ್ತೆಯಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿತ್ತು. ಇನ್ನೂ ಕೆಲ ಮಾಧ್ಯಮಗಳು ಒಬ್ಬರು ಮಹಿಳೆ ಮತ್ತು ಇಬ್ಬರು ಮಕ್ಕಳ ಮೃತದೇಹಗಳು ದೊರೆತಿವೆ ಎಂದಿತ್ತು. ಆದರೆ, ಶನಿವಾರ ಬೆಳಿಗ್ಗೆ 6 ಮಂದಿಯ ಶವಗಳೂ ಪತ್ತೆಯಾಗಿರುವುದಾಗಿ ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. ನಿನ್ನೆ (ನ.17) ಮತ್ತೆರಡು ಮೃತದೇಹಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ಶಾಸಕರ ಮನೆ ಮೇಲೆ ದಾಳಿ
ಹಿಂಸಾಚಾರದ ನಡುವೆ ಇಂಫಾಲ್ ಕಣಿವೆಯಲ್ಲಿ ಒಂಬತ್ತು ಮಂದಿ ಬಿಜೆಪಿ ಶಾಸಕರು ಸೇರಿದಂತೆ 13 ಶಾಸಕರ ಮನೆಗಳ ಮೇಲೆ ಉದ್ರಿಕ್ತರ ಗುಂಪು ದಾಳಿ ನಡೆಸಿದೆ ಎಂದು ಭಾನುವಾರ (ನ.18) ವರದಿಯಾಗಿದೆ. ಪಶ್ಚಿಮ ಇಂಫಾಲದಲ್ಲಿರುವ ಬಿಜೆಪಿ ಶಾಸಕ ರಬೀಂದ್ರೊ ಅವರನ್ನು ಭೇಟಿ ಮಾಡಲು ಬಯಸಿದ ಪ್ರತಿಭಟನಾಕಾರರು, ಅವರ ನಿವಾಸವನ್ನು ಭಾನುವಾರ ಸಂಜೆ ಧ್ವಂಸಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ದೆಹಲಿ ಸಚಿವ ಕೈಲಾಶ್ ಗೆಹ್ಲೋಟ್ ರಾಜೀನಾಮೆ ಬೆನ್ನಿಗೆ ಬಿಜೆಪಿಯ ಪ್ರಮುಖ ನಾಯಕ ಎಎಪಿಗೆ ಸೇರ್ಪಡೆ


