ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಗುತ್ತಿಗೆ ಪಡೆಯಲು ಲಂಚ ನೀಡಲಾಗಿದೆ ಎಂದು ಟಿವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ ಮೃತ ಗುತ್ತಿಗೆದಾರ ಆರ್.ಅಂಬಿಕಾಪತಿ ಅವರ ಆರೋಪವನ್ನು ಕರ್ನಾಟಕ ಲೋಕಾಯುಕ್ತ ತಳ್ಳಿಹಾಕಿದೆ.
2022ರವರೆಗೆ ಐದು ವರ್ಷಗಳ ಕಾಲ ಅಂಬಿಕಾಪತಿ ಅವರಿಗೆ ಯಾವುದೇ ಗುತ್ತಿಗೆ ನೀಡಿಲ್ಲ ಎಂದು ಲೋಕಾಯುಕ್ತ ತನಿಖೆಯಿಂದ ತಿಳಿದುಬಂದಿದೆ.
ನವೆಂಬರ್ 27, 2023 ರಂದು ಅಂಬಿಕಾಪತಿ ಅವರ ಸಾವಿನಿಂದಾಗಿ ಅವರ ಆರೋಪಗಳ ಕುರಿತು ಹೆಚ್ಚಿನ ವಿಚಾರಣೆಗೆ ಅಡ್ಡಿಯಾಯಿತು. ಅವರ ಮಗ ತನ್ನ ತಂದೆಯ ಕೆಲಸ-ಸಂಬಂಧಿತ ವ್ಯವಹಾರಗಳ ಬಗ್ಗೆ ಅವರಿಗೆ ಯಾವುದೇ ಅರಿವಿಲ್ಲ ಎಂದು ಹೇಳಿದರು.
ಆರೋಪಗಳಿಗೆ ಯಾವುದೇ ಪೂರಕ ಸಾಕ್ಷ್ಯಗಳಿಲ್ಲ ಎಂದು ಹೇಳುವ ಮೂಲಕ ಲೋಕಾಯುಕ್ತರು ಆರೋಪಗಳನ್ನು ನಿರಾಧಾರ ಎಂದು ತೀರ್ಮಾನಿಸಿದರು.
“40% ಕಮಿಷನ್ ಆರೋಪದ ಬಗ್ಗೆ ಅನೇಕ ಪ್ರಕರಣಗಳು ದಾಖಲಾಗಿವೆ. ದೂರುದಾರರಾದ ಅಂಬಿಕಾಪತಿ ಅವರ ಈ ನಿರ್ದಿಷ್ಟ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಜೂನ್‌ನಲ್ಲಿ ತನಿಖೆ ಪೂರ್ಣಗೊಂಡಿದೆ” ಎಂದು ಲೋಕಾಯುಕ್ತ ಕಚೇರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಗುತ್ತಿಗೆದಾರ ಅಂಬಿಕಾಪತಿ ಅವರು ಜೀವಂತವಾಗಿಲ್ಲ, ಅವರು 2022 ರವರೆಗೆ ಐದು ವರ್ಷಗಳವರೆಗೆ ಯಾವುದೇ ಸರ್ಕಾರಿ ಗುತ್ತಿಗೆಗಳನ್ನು ಪಡೆದಿಲ್ಲ. ಆದ್ದರಿಂದ, ಅವರ ಆರೋಪಗಳನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ” ಎಂದು ಹೇಳಿಕೆ ಸೇರಿಸಲಾಗಿದೆ.
“ಆದರೆ, ಡಿ.ಕೆಂಪಣ್ಣ ನೇತೃತ್ವದ ಗುತ್ತಿಗೆದಾರರ ಸಂಘ ಸಲ್ಲಿಸಿರುವ ಮತ್ತೊಂದು ದೂರಿನ ತನಿಖೆ ಇನ್ನೂ ನಡೆಯುತ್ತಿದೆ” ಎಂದು ಲೋಕಾಯುಕ್ತ ಕಚೇರಿ ಸ್ಪಷ್ಟಪಡಿಸಿದೆ. “ಆ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ ಮತ್ತು ಮುಚ್ಚಲಾಗಿಲ್ಲ” ಎಂದು ತಿಳಿಸಿದ್ದಾರೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.
ಹಿಂದಿನ ಬಿಜೆಪಿ ಸರ್ಕಾರದ ‘40% ಕಮಿಷನ್’ ಹಗರಣದ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಅಧ್ಯಕ್ಷರಾಗಿ ಮುಂಚೂಣಿಯಲ್ಲಿದ್ದ ಕೆಂಪಣ್ಣ ಅವರು ಸೆಪ್ಟೆಂಬರ್ 19, 2024 ರಂದು ಹೃದಯಾಘಾತದಿಂದ ನಿಧನರಾದರು. ಅವರು ಭ್ರಷ್ಟಾಚಾರ ಮತ್ತು ಲಂಚದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ಹಿರಿಯ ನಾಯಕರಿಗೆ ಪತ್ರವನ್ನೂ ಬರೆದಿದ್ದರು.
“ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಕಾಂಗ್ರೆಸ್ ಹೊರಿಸಿದ್ದ ಆರೋಪ ಸಂಪೂರ್ಣ ಸುಳ್ಳು ಎಂದು ಸಾಬೀತಾಗಿದೆ. ಬಿಜೆಪಿ ಸರ್ಕಾರದ ಮೇಲೆ ಸುಳ್ಳು ಆರೋಪ ಹೊರಿಸಿ, ಈಗ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ 100% ಸರ್ಕಾರ ಎಂಬ ಕುಖ್ಯಾತಿ ಪಡೆದಿದೆ. ಕಾಂಗ್ರೆಸ್ಸಿಗರು ಇನ್ನಾದರೂ ಸುಳ್ಳು ಹೇಳುವುದನ್ನು ಬಿಟ್ಟು ಭ್ರಷ್ಟಾಚಾರ ರಹಿತ ಆಡಳಿತ ನೀಡಲಿ” ಎಂದರು.
ಇದನ್ನೂ ಓದಿ; ಮಣಿಪುರ ಹಿಂಸಾಚಾರ: ಮೊತ್ತೋರ್ವ ಪ್ರತಿಭಟನಾಕಾರ ಸಾವು; ಬಿಜೆಪಿ-ಕಾಂಗ್ರೆಸ್ ಕಚೇರಿಗಳಿಗೆ ನುಗ್ಗಿದ ಗುಂಪು


