ತಮಿಳುನಾಡಿನ ತೆಲುಗು ಸಮುದಾಯವನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಬಹುಭಾಷಾ ನಟಿ ಕಸ್ತೂರಿ ಶಂಕರ್ ಅವರಿಗೆ ಮದ್ರಾಸ್ ಹೈಕೋರ್ಟ್ ನವೆಂಬರ್ 29 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಕಸ್ತೂರಿ ಶಂಕರ್ ಅವರನ್ನು ಕಳೆದ ಶನಿವಾರ (ನ.16) ರಾತ್ರಿ ತಮಿಳುನಾಡು ಪೊಲೀಸರ ವಿಶೇಷ ತಂಡ ಹೈದರಾಬಾದ್‌ನಿಂದ ಬಂಧಿಸಿತ್ತು. ಬಳಿಕ ಚೆನ್ನೈಗೆ ಕರೆತಂದು ನಗರದ ಎಗ್ಮೋರ್‌ನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು. ಮ್ಯಾಜಿಸ್ಟ್ರೇಟ್ ರಘುಪತಿ ರಾಜಾ ಅವರು ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದರು. ಈ ಹಿನ್ನೆಲೆ ಕಸ್ತೂರಿ ಅವರು ಪುಝಲ್ ಜೈಲು ಸೇರಿದ್ದರು.
ಪೊಲೀಸ್ ಮೂಲಗಳ ಪ್ರಕಾರ, ಬಂಧನಕ್ಕೂ ಮುನ್ನ ಕಸ್ತೂರಿ ಅವರು ತೆಲುಗು ಚಲನಚಿತ್ರ ನಿರ್ಮಾಪಕ ಹರಿ ಕೃಷ್ಣನ್ ಅವರ ಹೈದರಾಬಾದ್ ನಿವಾಸದಲ್ಲಿ ತಂಗಿದ್ದರು. ಆಕೆಯ ಕುಟುಂಬ ಮತ್ತು ಕಾನೂನು ಸಲಹೆಗಾರರೊಂದಿಗೆ ಸಂವಹನ ನಡೆಸಲು ಹರಿ ಕೃಷ್ಣನ್ ಅವರ ಮೊಬೈಲ್ ಬಳಸುತ್ತಿದ್ದರು.
ಕಸ್ತೂರಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 192 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು), 196(1)(ಎ) (ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ, ಜಾತಿ, ಅಥವಾ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 353(1)(ಬಿ) (ಅಪರಾಧ ಬೆದರಿಕೆ) ಮತ್ತು 353(2) (ಕ್ರಿಮಿನಲ್ ಬೆದರಿಕೆ) ಪ್ರಕರಣ ದಾಖಲಿಸಲಾಗಿದೆ.
ನವೆಂಬರ್ 3ರಂದು ಚೆನ್ನೈನಲ್ಲಿ ಬ್ರಾಹ್ಮಣರ ರಕ್ಷಣೆಗಾಗಿ ವಿಶೇಷ ಕಾನೂನಿಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಸ್ತೂರಿ ಅವರು, “ತಮಿಳುನಾಡಿನ ರಾಜರಿಗೆ ‘ದಾಸಿಗಳಾಗಿ’ ಬಂದ ತೆಲುಗು ಭಾಷಿಕ ಮಹಿಳೆಯರು, ತಮಿಳರು ಎಂದು ಹೇಳಿಕೊಂಡು ಬ್ರಾಹ್ಮಣರ ಮೇಲೆ ‘ದಬ್ಬಾಳಿಕೆ’ ಮಾಡುತ್ತಿದ್ದಾರೆ” ಎಂದು ಕಸ್ತೂರಿ ಹೇಳಿದ್ದರು.
ಕಸ್ತೂರಿ ಅವರ ಈ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಸಂಬಂಧ ತಮಿಳುನಾಡಿನ ನಾಯ್ಡು ಮಹಾಜನ ಸಂಗಮ್ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರೊಬ್ಬರು ದೂರು ನೀಡಿದ್ದರು.
ತನ್ನ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಕ್ಷಮೆಯಾಚಿಸಿ ಪ್ರತಿಕ್ರಿಯೆ ನೀಡಿದ್ದ ಕಸ್ತೂರಿ ಅವರು, “ತಮಿಳುನಾಡಿನ ಹಿಂದೂ ವಿರೋಧಿ ಡಿಎಂಕೆ ನೆಟ್‌ವರ್ಕ್” ನನ್ನ ವಿರುದ್ದ ಸುಳ್ಳು ಸುದ್ದಿ ಹರಡುತ್ತಿದೆ” ಎಂದಿದ್ದರು.
ನವೆಂಬರ್ 14 ರಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಕಸ್ತೂರಿಯವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಹೈಕೋರ್ಟ್ ನ್ಯಾಯಮೂರ್ತಿ ಆನಂದ್ ವೆಂಕಟೇಶ್ ಅವರು ಕಸ್ತೂರಿ ಹೇಳಿಕೆ ‘ಅನುಚಿತ’ ಎಂದಿದ್ದರು. “ತೆಲುಗು ಸಮುದಾಯದ ಮಹಿಳೆಯರ ವಿರುದ್ಧ ನೀಡಿರುವ ಆಕ್ಷೇಪಾರ್ಹ ಹೇಳಿಕೆಯನ್ನು ನೇರವಾಗಿ ಉಲ್ಲೇಖಿಸಿದ ಕಾರಣ ಅವರ ಕ್ಷಮೆಯೂ ಅಸಮರ್ಪಕವಾಗಿದೆ. ಕಸ್ತೂರಿ ಅವರು ತೆಲುಗು ಸಮುದಾಯದ ಮಹಿಳೆಯರ ವಿರುದ್ಧ ಮಾತನಾಡಬಾರದಿತ್ತು” ಎಂದು ನ್ಯಾಯಾಲಯ ಹೇಳಿತ್ತು.
ತನ್ನ ವಿರುದ್ದ ಎಫ್‌ಐಆರ್ ಅನ್ನು ರಾಜಕೀಯ ಪ್ರೇರಿತ ಎಂದಿದ್ದ ಕಸ್ತೂರಿ, “ಆಡಳಿತಾರೂಢ ಡಿಎಂಕೆ ಸರ್ಕಾರವು ತನ್ನ ವಿರುದ್ದ ದ್ವೇಷ ಸಾಧಿಸುತ್ತಿದೆ. ನನ್ನ ಹೇಳಿಕೆ ತೆಲುಗು ಸಮುದಾಯವನ್ನು ಪ್ರಚೋದಿಸುವುದಿಲ್ಲ” ಎಂದು ಸಮರ್ಥಿಸಿಕೊಂಡಿದ್ದರು.
“ನನ್ನ ಹೇಳಿಕೆ ಡಿಎಂಕೆಯ ರಾಜಕೀಯವನ್ನು ಬಯಲು ಮಾಡುವ ಉದ್ದೇಶವನ್ನು ಹೊಂದಿತ್ತು. ತಮಿಳುನಾಡಿಗೆ ಬಂದಿರುವ ಗುಂಪುಗಳ ಐತಿಹಾಸಿಕ ವಲಸೆಯನ್ನು ನಿರ್ಲಕ್ಷಿಸಿ, ಬ್ರಾಹ್ಮಣರನ್ನು ಗುರಿಯಾಗಿಸುವ ಡಿಎಂಕೆ ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಕಸ್ತೂರಿ ತಮಿಳುನಾಡು ಸರ್ಕಾರದ ವಿರುದ್ದ ಕಿಡಿಕಾರಿದ್ದರು. ಡಿಎಂಕೆ ನಾಯಕ ಕರುಣಾನಿಧಿಯವರು ಕುಶಲಕರ್ಮಿಗಳು ಮತ್ತು ಸಂಗೀತಗಾರರ ವಲಸೆಯನ್ನು ಒಪ್ಪಿಕೊಂಡಿರುವುದು ಸೇರಿದಂತೆ ಐತಿಹಾಸಿಕ ವಿಷಯಗಳನ್ನು ಉಲ್ಲೇಖಿಸಿ ಕಸ್ತೂರಿ ವಾಗ್ದಾಳಿ ನಡೆಸಿದ್ದರು.
“ಡಿಎಂಕೆ ಬ್ರಾಹ್ಮಣರನ್ನು ಶೋಷಣೆ ಮಾಡುತ್ತಿದೆ. ಸನಾತನ ವಿರೋಧ ಮತ್ತು ಹಿಂದೂ ದೇವರ ಅವಮಾನವನ್ನು ಪ್ರಚಾರ ಮಾಡುತ್ತಿದೆ. ಡಿಎಂಕೆಯ ನಿಲುವು ಹಿಂದೂ, ಬ್ರಾಹ್ಮಣ ಮತ್ತು ಸನಾತನ ವಿರೋಧಿ” ಎಂದಿದ್ದರು.
ಇದನ್ನೂ ಓದಿ : ತೆಲಂಗಾಣ | ತಡರಾತ್ರಿ ಬುಡಕಟ್ಟು ಜನರ ಮನೆಗಳಿಗೆ ನುಗ್ಗಿ ಪೊಲೀಸರಿಂದ ದೌರ್ಜನ್ಯ ಆರೋಪ : ಎಸ್‌ಸಿ, ಎಸ್‌ಟಿ ಆಯೋಗಕ್ಕೆ ದೂರು


