ಆಪಾದಿತ ಕುಕಿ ಬಂಡುಕೋರರ ವಿರುದ್ದ ಬೃಹತ್ ಕಾರ್ಯಾಚರಣೆ ನಡೆಸುವಂತೆ ಮತ್ತು ಅವರನ್ನು ‘ಕಾನೂನು ಬಾಹಿರ’ ಎಂದು ಘೋಷಿಸುವಂತೆ ಆಗ್ರಹಿಸಿ ಮಣಿಪುರದ ಆಡಳಿತರೂಢ ಎನ್‌ಡಿಎ ನಿರ್ಣಯ ಅಂಗೀಕರಿಸಿದೆ.
ಆಪಾದಿತ ಕುಕಿ ಬಂಡುಕೋರರ ಗುಂಪನ್ನು ‘ಕಾನೂನುಬಾಹಿರ ಸಂಘಟನೆ’ ಎಂದು ಮುಂದಿನ ಏಳು ದಿನಗಳ ಒಳಗೆ ಘೋಷಿಸಬೇಕು. ರಾಜ್ಯದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆ ಐದು ಕಣಿವೆ ಜಿಲ್ಲೆಗಳಲ್ಲಿ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದೆ.
ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆ ಅಥವಾ AFSPA, ಗಲಭೆ ಪೀಡಿತ ಪ್ರದೇಶಗಳಲ್ಲಿ ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆ ಗಾಗಿ ಅಗತ್ಯವೆಂದು ಭಾವಿಸಿದರೆ, ಶೋಧಿಸಲು, ಬಂಧಿಸಲು ಮತ್ತು ಗುಂಡಿನ ದಾಳಿ ನಡೆಸಲು ಸೇನಾ ಸಿಬ್ಬಂದಿಗೆ ವ್ಯಾಪಕ ಅಧಿಕಾರವನ್ನು ನೀಡುತ್ತದೆ.
ಸೋಮವಾರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಕರೆದಿದ್ದ ಎನ್‌ಡಿಎ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ. ಈ ಸಭೆಯಲ್ಲಿ ಆಡಳಿತಾರೂಢ ಮೈತ್ರಿಕೂಟದ 45 ಶಾಸಕರ ಪೈಕಿ 27 ಮಂದಿ ಹಾಜರಿದ್ದರು. ಆರು ಶಾಸಕರು ತಮ್ಮ ಅನುಪಸ್ಥಿತಿಗೆ ವೈದ್ಯಕೀಯ ಕಾರಣಗಳನ್ನು ನೀಡಿದ್ದರು. ಒಬ್ಬ ಸಚಿವರು ಸೇರಿದಂತೆ 11 ಶಾಸಕರು ವಿವರಣೆ ನೀಡದೆ ಸಭೆಗೆ ಗೈರಾಗಿದ್ದರು.
ಮಣಿಪುರದಲ್ಲಿ ಆಡಳಿತ ನಡೆಸುತ್ತಿರುವ ಎನ್‌ಡಿಎ ಮೈತ್ರಿಕೂಟವು ಭಾರತೀಯ ಜನತಾ ಪಕ್ಷ (ಬಿಜೆಪಿ) ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‌ಪಿಪಿ) ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮತ್ತು ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ)ವನ್ನು ಒಳಗೊಂಡಿತ್ತು.
ಆದರೆ, ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‌ಪಿಪಿ) ರಾಜ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಉಲ್ಲೇಖಿಸಿ ಕಳೆದ ಭಾನುವಾರ (ನ.16) ಎನ್‌ಡಿಎಗೆ ನೀಡಿದ್ದ ಬೆಂಬಲ ವಾಪಸ್ ಪಡೆದಿದೆ.
ಮಣಿಪುರದಲ್ಲಿ 2023ರ ಮೇ ತಿಂಗಳಿನಿಂದ ನಡೆಯುತ್ತಿರುವ ಮೈತೇಯಿ ಮತ್ತು ಕುಕಿ ಝೋ ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷದಲ್ಲಿ ಇದುವರೆಗೆ ಸುಮಾರು 255 ಮಂದಿ ಮೃತಪಟ್ಟಿದ್ದು, 59 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ.
ಈ ವರ್ಷದ ನವೆಂಬರ್ 7ರಿಂದ ಜನಾಂಗೀಯ ಹಿಂಸಾಚಾರ ಮತ್ತೆ ಉಲ್ಬಣಗೊಂಡ ನಂತರ, ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನವೆಂಬರ್ 14ರಿಂದ AFSPA ಜಾರಿಗೊಳಿಸಲಾಗಿದೆ. ನವೆಂಬರ್ 7ರ ನಂತರದ ಹಿಂಸಾಚಾರದಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ : ಬಾಬಾ ಸಿದ್ದಿಕಿ ಹತ್ಯೆ ಆರೋಪಿ ಅನ್ಮೋಲ್ ಬಿಷ್ಣೋಯಿ ಬಂಧನ


