ಬೆಂಗಳೂರಿನ ರಾಜಾಜಿನಗರದ ರಾಜ್‌ಕುಮಾರ್ ರಸ್ತೆಯ ಮೈ ಇ.ವಿ (ಎಲೆಕ್ಟ್ರಿಕ್) ಸ್ಕೂಟರ್ ಶೋರೂಮ್‌ನಲ್ಲಿ ಮಂಗಳವಾರ (ನ.19) ಸಂಜೆ ಸಂಭವಿಸಿದ ಬೆಂಕಿ ಅವಘಡಲ್ಲಿ ಯುವತಿಯೊಬ್ಬರು ಸಜೀವ ದಹನವಾಗಿದ್ದಾರೆ.
ಘಟನೆ ಸಂಬಂಧ ಶೋರೂಮ್ ಮಾಲೀಕನ ವಿರುದ್ದ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಎಲೆಕ್ಟ್ರಿಕ್ ಸ್ಕೂಟರ್ ಒಂದರ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡು ಇಡೀ ಕಟ್ಟಡಕ್ಕೆ ಆವರಿಸಿದೆ. ದುರಂತದ ನಿಖರ ಕಾರಣ ತಿಳಿಯಲು ಎಫ್‌ಎಸ್‌ಎಲ್ ತಜ್ಞರು ಇಂದು ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.
ಇಂದು ಹುಟ್ಟು ಹಬ್ಬ ಆಚರಿಸಬೇಕಿದ್ದ ಯುವತಿ ಸಜೀವ ದಹನ
ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಶೋರೂಮ್ ಸಿಬ್ಬಂದಿ ಓಕಳಿಪುರದ ನಿವಾಸಿ ಪ್ರಿಯಾ (20) ಸಜೀವ ದಹನವಾಗಿದ್ದಾರೆ. ಈಕೆ ಇಂದು (ನ.20) ತನ್ನ ಹುಟ್ಟು ಹಬ್ಬ ಆಚರಿಸಬೇಕಿತ್ತು. ಅದಕ್ಕೂ ಮುನ್ನ ದುರಂತ ಅಂತ್ಯ ಕಂಡಿದ್ದಾರೆ. “ಹುಟ್ಟು ಹಬ್ಬಕ್ಕಾಗಿ ಪ್ರಿಯಾ ಕಳೆದ ಭಾನುವಾರ ಹೊಸ ಬಟ್ಟೆ ಖರೀದಿಸಿದ್ದರು. ಈಗ ಹುಟ್ಟು ಹಬ್ಬ ಆಚರಿಸಲು ಆಕೆಯೇ ಇಲ್ಲ” ಎಂದು ತಂದೆ ಆರ್ಮುಗಂ ಕಣ್ಣೀರಿಟ್ಟಿದ್ದಾರೆ.
ಶೋರೂಮ್‌ನ ಮತ್ತೊಬ್ಬರು ಸಿಬ್ಬಂದಿ ದಿಲೀಪ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಿಲೀಪ್ ಅವರ ಕೈಗಳಿಗೆ ಸುಟ್ಟ ಗಾಯಗಳಾಗಿವೆ. ದುರಂತ ನಡೆದಾಗ ಶೋರೂಮ್‌ನಲ್ಲಿದ್ದ ವೇದಾವತಿ ಮತ್ತು ರಾಜು ಎಂಬವರಿಗೆ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೆಂಕಿ ಅವಘಡದಲ್ಲಿ ಶೋರೂಮ್‌ನಲ್ಲಿದ್ದ ಸುಮಾರು 40 ಸ್ಕೂಟರ್‌ಗಳ ಪೈಕಿ 25 ಸ್ಕೂಟರ್‌ಗಳು ಸುಟ್ಟು ಕರಕಲಾಗಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ : ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭೆ ಚುನಾವಣೆ : ಇಂದು ಮತದಾನ


