ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಬಿಪಿಎಲ್ ಪಡಿತರ ಕಾರ್ಡ್ ರದ್ದತಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, “ಯಾವುದೇ ಕಾರಣಕ್ಕೂ ಅರ್ಹರ ಬಿಪಿಎಲ್ ಕಾರ್ಡ್ ರದ್ದಾಗಲ್ಲ” ಎಂದು ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಮಂಗಳವಾರ (ನ.19) ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, “ಬಿಪಿಎಲ್ ಕಾರ್ಡ್ ರದ್ದಾಗುತ್ತದೆ ಎನ್ನುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅರ್ಹರು ಬಿಪಿಎಲ್ ಕಾರ್ಡ್‌ನಿಂದ ಹೊರಗುಳಿಯಬಾರದು ಎಂದು ನಾನು ಮುನಿಯಪ್ಪನವರಿಗೆ ಹೇಳಿದ್ದೇನೆ. ಒಂದು ವೇಳೆ ಒಂದಿಬ್ಬರು ಅನರ್ಹರಿಗೆ ಬಿಪಿಎಲ್ ಕಾರ್ಡ್ ದೊರೆತರೂ ಪರವಾಗಿಲ್ಲ. ಆದರೆ, ಅರ್ಹರು ಮಾತ್ರ ಬಿಪಿಎಲ್ ಕಾರ್ಡ್ ವಂಚಿತರಾಗಬಾರದು. ಆದಾಯ ತೆರಿಗೆ ಕಟ್ಟುವವರನ್ನು ನಾವು ಗೃಹಲಕ್ಷ್ಮಿ ಯೋಜನೆಯಿಂದ ಹೊರಗಿಟ್ಟಿದ್ದೇವೆ. ಅದರಂತೆ ಆದಾಯ ತೆರಿಗೆ ಪಾವತಿಸುವವರನ್ನು ಬಿಪಿಎಲ್ ಪಟ್ಟಿಯಿಂದ ಹೊರಗಿಡಲಾಗುತ್ತದೆ. ಅರ್ಹರಿಗೆ ನ್ಯಾಯ ಒದಗಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಸಿಎಂ ತಿಳಿಸಿದ್ದಾರೆ.
ಬಿಪಿಎಲ್, ಎಪಿಎಲ್ ಎಂದರೇನು? ಬಡತನ ರೇಖೆಗಿಂತ ಕೆಳಗೆ ಮತ್ತು ಮೇಲೆ ಇರುವವರು ಎಂದರ್ಥ. ಶ್ರೀಮಂತರು, ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್‌ಗೆ ಅರ್ಹರಲ್ಲ. ಅವರಿಗೆ ಎಪಿಎಲ್ ಕೊಡಿ. ಯಾರಾದರು ಬಿಪಿಎಲ್ ಇದ್ದರೆ ಅರ್ಜಿ ಹಾಕಿ. ಅಂತವರಿಗೆ ಮತ್ತೆ ಕಾರ್ಡ್ ಕೊಡುತ್ತೇವೆ. ಈ ವಿಚಾರದಲ್ಲಿ ಬಿಜೆಪಿಯವರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, “ಕಾಂಗ್ರೆಸ್ ಸರ್ಕಾರ ಹಾಗೂ ಇಂದಿರಾ ಗಾಂಧಿಯವರು ಜಾರಿಗೆ ತಂದಿರುವ ಉಳುವವನೇ ಭೂಮಿಯ ಒಡೆಯ, ಪಿಂಚಣಿ, ಮಧ್ಯಾಹ್ನದ ಬಿಸಿಯೂಟ, ಪಡಿತರ ವ್ಯವಸ್ಥೆ ಸೇರಿದಂತೆ ಅನೇಕ ಯೋಜನೆಗಳನ್ನು ಯಾರಿಂದಲೂ ನಿಲ್ಲಿಸಲು ಸಾಧ್ಯವಿಲ್ಲ. ಜವಾಹರಲಾಲ್ ನೆಹರು ಅವರಿಂದ ಹಿಡಿದು ಮನಮೋಹನ್ ಸಿಂಗ್ ಅವರ ಕಾಲದ ತನಕ ಕಾಂಗ್ರೆಸ್ ಸರ್ಕಾರಗಳು ಜಾರಿಗೆ ತಂದ ಒಂದೇ ಒಂದು ಯೋಜನೆಗಳನ್ನು ನಿಲ್ಲಿಸುವ ಶಕ್ತಿ, ಧೈರ್ಯ ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸುಮಾರು 14 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಲು ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಜನರು ಈ ವಿಷಯದಲ್ಲಿ ಆತಂಕಿತರಾಗಿದ್ದಾರೆ. ಆದರೆ, ಅರ್ಹರ ಕಾರ್ಡ್‌ಗಳು ಯಾವುದೇ ಕಾರಣಕ್ಕೂ ರದ್ದಾಗಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ವರದಿಗಳ ಪ್ರಕಾರ, ರಾಜ್ಯದಲ್ಲಿ ಸುಮಾರು 13,87,639 ಅನರ್ಹ ಬಿಪಿಎಲ್ ಕಾರ್ಡ್‌ಗಳು ಪತ್ತೆಯಾಗಿವೆ. ಈ ಪೈಕಿ 6 ತಿಂಗಳಿಂದ ಪಡಿತರ ಪಡೆಯದೇ ಇರುವುದರಿಂದ 2,75,667 ಬಿಪಿಎಲ್ ಕಾರ್ಡ್, ಕುಟುಂಬ ತಂತ್ರಾಂಶದ ಪ್ರಕಾರ ಆದಾಯ ತೆರಿಗೆ ಪಾವತಿ ಮಾಡಿದ ಹಿನ್ನೆಲೆ 98,458 ಬಿಪಿಎಲ್ ಕಾರ್ಡುಗಳನ್ನು ಅನರ್ಹಗೊಳಿಸಲಾಗಿದೆ.
ಇದನ್ನೂ ಓದಿ : ಬೆಂಗಳೂರು | ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಅಗ್ನಿ ಅವಘಡ : ಪ್ರಕರಣ ದಾಖಲು


