ಕೇಂದ್ರ ಸರ್ಕಾರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ಮಸೂದೆ ಮಂಡನೆಗೆ ಮುಂದಾಗಿರುವ ನಡುವೆ ದೇಶದ ವಿವಿಧ ಭಾಗಗಳಲ್ಲಿ ಬಿಜೆಪಿ, ಸಂಘ ಪರಿವಾರ ಮತ್ತು ಅದರ ಮಿತ್ರ ಪಕ್ಷಗಳು ರೈತರು, ದೇವಸ್ಥಾನಗಳು, ಮಠಗಳು, ಸರ್ಕಾರಿ ಶಾಲಾ-ಕಾಲೇಜುಗಳು ಸೇರಿದಂತೆ ಹಲವರ ಜಮೀನುಗಳನ್ನು ವಕ್ಫ್ ಬೋರ್ಡ್ ಕಬಳಿಸುತ್ತಿದೆ ಎಂಬ ಆರೋಪ ಮಾಡಿದೆ.
ಕರ್ನಾಟಕದಲ್ಲಿ ವಕ್ಫ್ ಬೋರ್ಡ್ ರೈತರ ಜಮೀನುಗಳನ್ನು ತನ್ನದೆಂದು ಹೇಳುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಕಳೆದ ಒಂದು ತಿಂಗಳು ಬಿಜೆಪಿ ಮತ್ತು ಸಂಘ ಪರಿವಾರ ಈ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ದ ಮುಗಿಬಿದ್ದಿತ್ತು. ಕೊನೆಗೆ ಸರ್ಕಾರ ಯಾವುದೇ ರೈತರಿಗೆ ವಕ್ಫ್ ಭೂಮಿ ಸಂಬಂಧ ನೋಟಿಸ್ ನೀಡುವುದಿಲ್ಲ. ಕೊಟ್ಟ ನೋಟಿಸ್ ವಾಪಸ್ ಪಡೆಯುತ್ತೇವೆ ಎಂದು ಹೇಳಿದ ಬಳಿಕ, ಈಗ ವಿಷಯ ಸ್ವಲ್ಪ ತಣ್ಣಗಾಗಿದೆ.
ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕೆಲ ಸುದ್ದಿ ವಾಹಿನಿಗಳಲ್ಲಿ ಅಲ್ಲಲ್ಲಿ ವಕ್ಫ್ ಬೋರ್ಡ್ ಜಮೀನು ಸಂಬಂಧ ನೋಟಿಸ್ ನೀಡಲಾಗಿದೆ ಎಂಬ ಸುದ್ದಿ ಈಗಲೂ ಹಂಚಲಾಗುತ್ತಿದೆ. ಇದರ ಭಾಗವಾಗಿ ಮುಂಬೈನ ಪ್ರಸಿದ್ದ ಸಿದ್ದಿ ವಿನಾಯಕ ದೇವಸ್ಥಾನದ ಜಾಗವನ್ನು ವಕ್ಫ್ ತನ್ನದೆಂದು ಹೇಳಿರುವುದಾಗಿ ಸುದ್ದಿ ಹಬ್ಬಿದೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾನ ಇಂದು (ನ.20) ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಸಿದ್ದಿ ವಿನಾಯಕ ದೇವಸ್ಥಾನದ ಜಾಗವನ್ನು ವಕ್ಫ್ ತನ್ನದೆಂದು ಹೇಳಿರುವುದಾಗಿ ಸುದ್ದಿ ಹರಿದಾಡುತ್ತಿರುವುದು ಗಮನಾರ್ಹ
ಬಿಜೆಪಿ ಶಾಸಕ ನಿತೇಶ್ ರಾಣೆ ಅವರು ನವೆಂಬರ್ 19ರಂದು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟರ್‌ವೊಂದನ್ನು ಹಂಚಿಕೊಂಡು “ವಕ್ಫ್ ಬೋರ್ಡ್ ಮುಂಬೈನ ಸಿದ್ದಿ ವಿನಾಯಕ ದೇವಸ್ಥಾನ ತನ್ನದೆಂದು ಹೇಳಿದೆ. ಅದಕ್ಕೆ ಯುಬಿಟಿ (ಶಿವಸೇನೆ ಉದ್ದವ್ ಠಾಕ್ರೆ ಬಣ) ಮತ್ತು ಕಾಂಗ್ರೆಸ್ ಬೇಡ ಎಂಬುವುದಾಗಿ ಹೇಳುತ್ತಿರುವುದು” ಎಂದು ಬರೆದುಕೊಂಡಿದ್ದರು. ನಿತೇಶ್ ರಾಣೆ ಹಂಚಿಕೊಂಡಿದ್ದ ಫೋಟೋ ಮೇಲೆ ‘ಸಕಾಲ್’ ಎಂಬ ಲೋಗೋ ಇತ್ತು.

सनातनी Rinki (@rynkee) ಎಂಬ ಎಕ್ಸ್ ಬಳಕೆದಾರರು ನವೆಂಬರ್ 18ರಂದು ಸಕಾಲ್ ಲೋಗೋ ಇರುವ ಅದೇ ಪೋಟೋವನ್ನು ಹಂಚಿಕೊಂಡು “ಮುಂಬೈನ ಸಿದ್ದಿ ವಿನಾಯಕ ದೇವಸ್ಥಾನವನ್ನೂ ವಕ್ಫ್ ಬೋರ್ಡ್ ತನ್ನದೆಂದು ಹೇಳಿಕೊಂಡಿದೆ. ಎಂವಿಎ ಉಲಮಾ ಮಂಡಳಿಯ ಎಲ್ಲಾ ಬೇಡಿಕೆಗಳನ್ನು ಒಪ್ಪಿಕೊಂಡಿದೆ. ಪ್ರೀತಿಯ ಹಿಂದೂಗಳೇ..ನಿಮಗೆ ಕ್ರೊನೋಲಜಿ ಅರ್ಥವಾಗಿರಬಹುದು. ಬಟೇಂಗೆ ತೊ ಕಟೇಂಗೆ, ಏಕೆ ಹೈ ತೋ ಸೇಫ್ ಹೈ, ಮಹಾಯುತಿ ಏಕೈಕ ಆಯ್ಕೆ” ಎಂದು ಬರೆದುಕೊಂಡಿದ್ದರು.
🚨Mumbai’s Siddhivinayak Temple also claimed under Waqf.
MVA has accepted all demands of the Ulema Board.
Dear Hindus,
Aap chronology samajh lijiye!
Batenge toh Katenge.
Ek hai toh Safe hai.
Mahayuti is the only option. pic.twitter.com/YqtK8Ggg9K
— सनातनी Rinki 🚩🕉️ (@rynkee) November 18, 2024
Kreately.in ಎಂಬ ಮತ್ತೊಂದು ಎಕ್ಸ್ ಖಾತೆಯಲ್ಲೂ “ಮುಂಬೈನ ಸಿದ್ದಿ ವಿನಾಯಕ ದೇವಸ್ಥಾನವನ್ನು ವಕ್ಫ್ ಬೋರ್ಡ್ ತನ್ನದೆಂದು ಹೇಳಿಕೊಂಡಿದೆ” ಎಂದು ಪೋಸ್ಟರ್ ಹಂಚಿಕೊಳ್ಳಲಾಗಿತ್ತು.

ಈ ಪೋಸ್ಟರ್ ಅನ್ನು ಬಲಪಂಥೀಯ ಸಾಮಾಜಿಕ ಜಾಲತಾಣ ಪ್ರಭಾವಿ @MrSinha ಹಂಚಿಕೊಂಡು “ಸಾಕೆಂದರೆ, ಸಾಕು. ಅವರು ಕೈ ಮೀರುತ್ತಿದ್ದಾರೆ, ಅವರನ್ನು ನಿಲ್ಲಿಸಬೇಕಾಗಿದೆ” ಎಂದು ಬರೆದುಕೊಂಡಿದ್ದರು.

ಇನ್ನೂ ಅನೇಕ ಬಲಪಂಥೀಯ ಸಾಮಾಜಿಕ ಜಾಲತಾಣ ಬಳಕೆದಾರರು ಕೂಡ ‘ಸಿದ್ದಿ ವಿನಾಯಕ ದೇವಸ್ಥಾನವನ್ನು ವಕ್ಫ್ ಬೋರ್ಡ್ ಕಬಳಿಸಿದೆ’ ಎಂಬರ್ಥ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು.
ಫ್ಯಾಕ್ಟ್‌ಚೆಕ್ : ವೈರಲ್ ಸುದ್ದಿಯ ಸತ್ಯಾಸತ್ಯತೆ ತಿಳಿಯಲು ನಾವು ಈ ಕುರಿತ ಮಾಹಿತಿ ಹುಡುಕಿದ್ದೇವೆ. ಈ ವೇಳೆ ಹಲವರು ಪೋಸ್ಟರ್ ಹಂಚಿಕೊಂಡಿರುವ ‘ಸಕಾಲ್ ನ್ಯೂಸ್‘ ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ”ನಾವು ಈ ರೀತಿಯ ಗ್ರಾಫಿಕ್ಸ್ ಹಂಚಿಕೊಂಡಿಲ್ಲ. ಯಾರೋ ನಮ್ಮ ಲೋಗೋ ಬಳಸಿಕೊಂಡು, ನಮ್ಮದೇ ಶೈಲಿಯಲ್ಲಿ ಗ್ರಾಫಿಕ್ಸ್ ಮಾಡಿದ್ದಾರೆ” ಎಂದು ಸ್ಪಷ್ಟಪಡಿಸಿರುವುದು ಕಂಡು ಬಂದಿದೆ.

ಅಲ್ಲದೆ, ಸಕಾಲ್ ನ್ಯೂಸ್ ತಮ್ಮ ಹೆಸರಿನಲ್ಲಿ ಸುಳ್ಳು ಪೋಸ್ಟ್ ಹಂಚಿಕೊಂಡಿರುವ ಕುರಿತು ಫ್ಯಾಕ್ಟ್‌ಚೆಕ್ ಸುದ್ದಿಯನ್ನೂ ಬರೆದಿದೆ. ಅದರಲ್ಲಿ, ತಮ್ಮ ಅಸಲಿ ಪೋಸ್ಟರ್ ಮತ್ತು ನಕಲಿ ಪೋಸ್ಟರ್ ನಡುವಿನ ವ್ಯತ್ಯಾಸಗಳನ್ನು ತಿಳಿಸುವ ಕೆಲ ಅಂಶಗಳನ್ನು ಎತ್ತಿ ತೋರಿಸಿದೆ. ಅವುಗಳ ಹೀಗಿವೆ..
1. ಸಕಾಲ್ ನ್ಯೂಸ್ ತನ್ನ ಪೋಸ್ಟರ್‌ನಲ್ಲಿ ಸಂಪೂರ್ಣ ಫೋಟೋವನ್ನು ಬಳಸುತ್ತದೆ ಮತ್ತು ಕೆಳಗಿನ ಟೆಕ್ಸ್ಟ್ ಅನ್ನು ಎಡದಿಂದ ಹಾಕುತ್ತದೆ. ಆದರೆ, ನಕಲಿ ಪೋಸ್ಟರ್‌ನಲ್ಲಿ ಅರ್ಧ ಫೋಟೋವನ್ನು ಬಳಸಲಾಗಿದೆ ಮತ್ತು ಟೆಕ್ಸ್ಟ್ ಅನ್ನು ಮಧ್ಯದಲ್ಲಿ ಹಾಕಲಾಗಿದೆ.
2. ಸಕಾಲ್ ನ್ಯೂಸ್ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ಸಂಬಂಧಿಸಿದ ಪೋಸ್ಟರ್ ಮಾಡಿದ್ದರೆ, ಅದನ್ನು ತನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಳ್ಳುತ್ತಿತ್ತು. ಆದರೆ, ಸಕಾಲ್ ನ್ಯೂಸ್ ಎಲ್ಲೂ ವೈರಲ್ ಪೋಸ್ಟರ್ ಅನ್ನು ಎಲ್ಲೂ ಹಂಚಿಕೊಂಡಿಲ್ಲ.
ವೈರಲ್ ಸುದ್ದಿಗೆ ಸಂಬಂಧಿಸಿದಂತೆ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿರುವ ಮುಂಬೈ ಸಿದ್ಧಿವಿನಾಯಕ ದೇವಸ್ಥಾನದ ಕೋಶಾಧಿಕಾರಿ ಹಾಗೂ ಬಿಜೆಪಿ ಮುಂಬೈನ ಉಪಾಧ್ಯಕ್ಷ ಪವನ್ ತ್ರಿಪಾಠಿ, ವಕ್ಫ್ ಬೋರ್ಡ್ ದೇವಸ್ಥಾನದ ಮೇಲೆ ಹಕ್ಕು ಸ್ಥಾಪಿಸಿದೆ ಎಂಬುವುದನ್ನು ಅಲ್ಲಗಳೆದಿದ್ದಾರೆ. ಮುಂಬೈನ ಸಿದ್ಧಿವಿನಾಯಕ ದೇವಸ್ಥಾನವು ಹೆಮ್ಮೆ ಮತ್ತು ಗೌರವದ ಸಂಕೇತವಾಗಿದೆ. ಪ್ರಪಂಚದಾದ್ಯಂತ ವಾಸಿಸುವ ಎಲ್ಲಾ ಸನಾತನಿಗಳಲ್ಲಿ ಇದರ ಬಗ್ಗೆ ಅಪಾರ ಗೌರವ ಇದೆ. ಆದ್ದರಿಂದ ಸಿದ್ಧಿವಿನಾಯಕ ದೇವಸ್ಥಾನವನ್ನು ಯಾವುದೇ ಮಂಡಳಿ ಅಥವಾ ಸಂಸ್ಥೆ ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ. ಇದು ಗಣೇಶನ ಭಕ್ತರಿಗೆ ಸೇರಿದ್ದು ಮತ್ತು ಅವರಿಗಾಗಿ ಸದಾ ಉಳಿಯುತ್ತದೆ” ಎಂದು ಹೇಳಿದ್ದಾರೆ.
Any non Hindu Board trying to eye Us, listen, No board execpt for Ganesh Bhakts can lay their claim on Siddhivinayak Temple: says @pawantripathi_ pic.twitter.com/TqfJf51Sph
— Singh Varun (@singhvarun) November 18, 2024
ಆರ್‌ಎಸ್‌ಎಸ್ ಮುಖವಾಣಿ ಆರ್ಗನೈಸರ್ ಪವನ್ ತ್ರಿಪಾಠಿ ಅವರ ಹೇಳಿಕೆ ಕುರಿತು ಸುದ್ದಿ ಪ್ರಕಟಿಸಿದೆ.

ಫ್ಯಾಕ್ಟ್‌ಚೆಕ್ ಸಂಸ್ಥೆ ಆಲ್ಟ್ ನ್ಯೂಸ್ ಮುಂಬೈ ಜಿಲ್ಲಾ ವಕ್ಫ್ ಅಧಿಕಾರಿಯನ್ನು ಸಂಪರ್ಕಿಸಿ ವೈರಲ್ ಸುದ್ದಿಯ ಕುರಿತು ಮಾಹಿತಿ ಕೇಳಿದ್ದು, ಅವರು “ಆ ರೀತಿಯ ಯಾವುದೇ ಬೆಳವಣಿಗೆ ನಡೆದಿಲ್ಲ” ಎಂದು ಸ್ಪಷ್ಟಪಡಿಸಿರುವುದಾಗಿ ಹೇಳಿದೆ.
ವೈರಲ್ ಸುದ್ದಿಗೆ ಸಂಬಂಧಿಸಿದಂತೆ ಬಲಪಂಥೀಯ ಎಕ್ಸ್ ಬಳಕೆದಾರ @MrSinha ಹಂಚಿಕೊಂಡಿರುವ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚಥುರ್ವೇದಿ ” ಈ ರೀತಿ ಸುಳ್ಳು ಸುದ್ದಿ ಹರಡುತ್ತಿದ್ದರೂ ಮುಂಬೈ ಪೊಲೀಸ್ ಮತ್ತು ಮಹಾರಾಷ್ಟ್ರ ಸೈಬರ್ ವಿಭಾಗ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಪಿಐಬಿ ತಂಡ ಇದನ್ನು ಏನಾದರು ಫ್ಯಾಕ್ಟ್‌ಚೆಕ್ ಮಾಡಿ ಕ್ರಮ ಕೈಗೊಳ್ಳುತ್ತದಾ? ಎಂದು ಪ್ರಶ್ನಿಸಿದ್ದಾರೆ.

@MrSinha ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಯುವಸೇನೆ ಅಧ್ಯಕ್ಷ ಆದಿತ್ಯ ಠಾಕ್ರೆ “ನಿಮ್ಮ ಮತಕ್ಕಾಗಿ ಮಹಾರಾಷ್ಟ್ರದಲ್ಲಿ ನಮ್ಮ ಭಾವನೆಗಳೊಂದಿಗೆ ಆಟವಾಡಬೇಡಿ” ಎಂದಿದ್ದಾರೆ.

ಒಟ್ಟಿನಲ್ಲಿ ಮುಂಬೈನ ಸಿದ್ದಿ ವಿನಾಯಕ ದೇವಸ್ಥಾನವನ್ನು ವಕ್ಫ್ ಬೋರ್ಡ್ ತನ್ನದೆಂದು ಹೇಳಿಕೊಂಡಿದೆ ಎಂಬುವುದು ಸುಳ್ಳು ಸುದ್ದಿಯಾಗಿದೆ.
ಇದನ್ನೂ ಓದಿ : FACT CHECK | ಹಿಂದೂ ಸಾಧುಗಳ ವೇಷದಲ್ಲಿ ಭಿಕ್ಷೆ ಬೇಡಿದ ಮುಸಲ್ಮಾನರು ಎಂದು ಸುಳ್ಳು ಸುದ್ದಿ ಹಬ್ಬಿದ ಮಾಧ್ಯಮಗಳು


