ಬೆಂಗಳೂರಿನ ಬೀದಿ ನಾಯಿಗಳಿಗೆ ಮೈಕ್ರೋಚಿಪ್‌ಗಳನ್ನು ಅಳವಡಿಸುವ ಬಿಬಿಎಂಪಿಯ ಪ್ರಸ್ತಾಪವನ್ನು ಸೇವ್ ಅವರ್ ಅನಿಮಲ್ಸ್ ಚಾರಿಟಬಲ್ ಟ್ರಸ್ಟ್ ಮತ್ತು ಪರಿಸರ ಹೋರಾಟಗಾರ್ತಿ ನವೀನ ಕಾಮತ್ ಅವರು ರಾಜ್ಯ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (ಪಿಐಎಲ್) ಪ್ರತಿಕ್ರಿಯೆಯಾಗಿ ಮಂಗಳವಾರ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು, ಬಿಬಿಎಂಪಿ ಮತ್ತು ಇತರರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಬೀದಿ ನಾಯಿಗಳ
2024 ಫೆಬ್ರವರಿ 29ರ ಬಿಬಿಎಂಪಿ ಪ್ರಸ್ತಾವನೆಯ ಕಾನೂನುಬದ್ಧತೆಯನ್ನು ಪ್ರಶ್ನಿಸುವ ಈ ಅರ್ಜಿಯ ವಾದವನ್ನು ಆಲಿಸಿದ ನಂತರ ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ನೋಟಿಸ್‌ಗಳನ್ನು ನೀಡಿದೆ. ನ್ಯಾಯಾಲಯವು ಪ್ರಕರಣವನ್ನು ಡಿಸೆಂಬರ್ 16 ಕ್ಕೆ ಹೆಚ್ಚಿನ ವಿಚಾರಣೆಗೆ ಮುಂದೂಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರು, ”ಬೀದಿ ನಾಯಿಗಳನ್ನು ನಿಯಂತ್ರಿಸಲು ನಾಯಿಗಳಿಗೆ ಮೈಕ್ರೋಚಿಪ್ಪಿಂಗ್ ಅಳವಡಿಸಲು ಬಿಡ್ ನೀಡಲು ಬಿಬಿಎಂಪಿಗೆ ಯಾವುದೇ ಕಾನೂನು ಅಧಿಕಾರವಿಲ್ಲ. ಏಕೆಂದರೆ ಪ್ರಾಣಿ ಜನನ ನಿಯಂತ್ರಣ (ಎಬಿಸಿ) ನಿಯಮಗಳು, 2023, ಇದಕ್ಕೆ ಅನುಮತಿ ನೀಡುವುದಿಲ್ಲ. ಅಲ್ಲದೆ, ಕಾರ್ಯವಿಧಾನವನ್ನು ಮೇಲ್ವಿಚಾರಣೆ ಮಾಡಲು ಸಮಿತಿಯನ್ನು ರಚಿಸುವ ಅಧಿಕಾರ ಮತ್ತು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಇದಕ್ಕೆ ಯಾವುದೇ ಅನುಮತಿ ಇರಲಿಲ್ಲ. ಬಿಡ್ ನೀಡುವ ಸಂಪೂರ್ಣ ಪ್ರಕ್ರಿಯೆಯು ಕಾನೂನುಬಾಹಿರವಾಗಿದೆ” ಎಂದು ಹೇಳಿದ್ದಾರೆ.
ಬಿಬಿಎಂಪಿಯ ಜಂಟಿ ನಿರ್ದೇಶಕರು ಪಶ್ಚಿಮ ಮತ್ತು ಆರ್‌ಆರ್‌ನಗರ ವಲಯಗಳಲ್ಲಿ ಪ್ರಾಯೋಗಿಕ ಯೋಜನೆಯಾಗಿ ಮೈಕ್ರೋಚಿಪಿಂಗ್ ಅಳವಡಿಸಲು ಪ್ರಸ್ತಾಪಿಸಿದ್ದು, ಬಿಬಿಎಂಪಿಯ ಉಳಿದ ಆರು ವಲಯಗಳಿಗೆ ವಿಸ್ತರಿಸಲು ಯೋಜಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಈ ಪ್ರಸ್ತಾವನೆಯನ್ನು ವಿರೋಧಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಅವರ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಅವರು ಹೇಳಿದ್ದಾರೆ.
“ಎಬಿಸಿ ನಿಯಮಗಳು – 2023 ರ ಅಡಿಯಲ್ಲಿ ಮೈಕ್ರೋಚಿಪ್ಪಿಂಗ್ ಅಳವಡಿಕೆಯು ಹೆಚ್ಚುವರಿ ವಿಧಾನವಾಗಿದೆ. ಈ ಅಳವಡಿಕೆಯಲ್ಲಿ ಬೀದಿ ನಾಯಿಗಳನ್ನು ಅನೇಕ ಬಾರಿ ಹಿಡಿಯಬೇಕಾಗುತ್ತದೆ, ಇದು ಈ ನಾಯಿಗಳಿಗೆ ಆಘಾತಕಾರಿಯಾಗಿದ್ದು, ಅವುಗಳಿಗೆ ಅನಗತ್ಯ ಒತ್ತಡ ನೀಡುತ್ತದೆ ಅಥವಾ ಅವುಗಳು ಆಕ್ರಮಣಕಾರಿಯಾಗು ಅಪಾಯವಿರುತ್ತದೆ” ಎಂದು ಅರ್ಜಿದಾರರು ದೂರಿದ್ದಾರೆ.
“ನಾಯಿಗಳ ಲಸಿಕೆ ಸ್ಥಿತಿಯನ್ನು ಕಂಡುಹಿಡಿಯಲು ಮತ್ತು ಮೈಕ್ರೋಚಿಪ್‌ಗಳನ್ನು ಸ್ಕ್ಯಾನ್ ಮಾಡಲು ನಾಯಿಗಳನ್ನು ಹಿಡಿಯಬೇಕಾಗುತ್ತದೆ. ಈ ವೇಳೆ ಸಂಬಂಧಿಸಿದ ಏಜೆನ್ಸಿಗಳ ಅನಗತ್ಯ ಪ್ರಯತ್ನಗಳು ಈ ನಾಯಿಗಳು ಅಕ್ರಮಣಕಾರಿಯಾಲು ಕಾರಣವಾಗುತ್ತವೆ.” ಎಂದು ಅವರು ಹೇಳಿದ್ದಾರೆ. ಬೀದಿ ನಾಯಿಗಳ
ಎಬಿಸಿ ನಿಯಮಗಳು, 2023 ರ ನಿಯಮ 8 (2) ಅನ್ನು ಉಲ್ಲೇಖಿಸಿರುವ ಅರ್ಜಿದಾರರು, ಬೀದಿ ನಾಯಿಗಳಿಗೆ ಜಂತುಹುಳು ನಿವಾರಣೆ, ಸಂತಾನಹರಣ ಮತ್ತು ಸಾಮಾನ್ಯ ರೋಗನಿರೋಧಕಕ್ಕೆ ಮಾತ್ರ ನಿರ್ದಿಷ್ಟ ಅನುಮೋದನೆಯನ್ನು ನೀಡಲಾಗಿದೆ ಎಂದು ಕೋರ್ಟ್‌ಗೆ ಹೇಳಿದ್ದಾರೆ. ಆದರೆ ಈ ಅನುಮೋದಿತ ಕಾರ್ಯವಿಧಾನಗಳ ಭಾಗವಾಗಿ ಮೈಕ್ರೋಚಿಪಿಂಗ್ ಬಗ್ಗೆ ಅದರಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ಅವರು ಹೇಳಿದ್ದಾರೆ.


