ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಾಟ್ಸಾಪ್ ಸ್ನೂಪಿಂಗ್ ವಿವಾದದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ ಮತ್ತು ಭದ್ರತಾ ಉಲ್ಲಂಘನೆಯ ಬಗ್ಗೆ ಕೇಂದ್ರ ಸರ್ಕಾರಕ್ಕೆ “ಸಂಪೂರ್ಣವಾಗಿ ತಿಳಿದಿದೆ” ಎಂದು ಆರೋಪಿಸಿದ್ದಾರೆ.
“ನನ್ನ ಫೋನ್ ಅನ್ನು ಟ್ಯಾಪ್ ಮಾಡಲಾಗಿದೆ, ಅದರ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ ಮತ್ತು ನನ್ನ ಬಳಿ ಪುರಾವೆಗಳಿವೆ. ಕೇಂದ್ರ ಸರ್ಕಾರ ಮತ್ತು ಎರಡು ಮೂರು ರಾಜ್ಯ ಸರ್ಕಾರಗಳ ಆದೇಶದ ಮೇರೆಗೆ ಇದು ನಡೆಯುತ್ತಿದೆ. ನಾನು ರಾಜ್ಯಗಳ ಹೆಸರನ್ನು ಹೇಳಲು ಇಚ್ಚಿಸುವುದಿಲ್ಲ ಆದರೆ ಅಲ್ಲಿ ಬಿಜೆಪಿ ಆಡಳಿತದಲ್ಲಿದೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: WhatsApp ಮೂಲಕ ಗೂಢಚರ್ಯೆ: ದಂಗುಬಡಿಸುವ ಅಪಾಯಕಾರಿ ವಿದ್ಯಮಾನ ಬಯಲು!
ವಿಶ್ವದಾದ್ಯಂತ ಸುಮಾರು 1,400 ಜನರ ಮೇಲೆ ಬೇಹುಗಾರಿಕೆ ನಡೆಸಲು ಇಸ್ರೇಲಿ ಸಂಸ್ಥೆಯು ತನ್ನ ವೇದಿಕೆಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ವಾಟ್ಸಾಪ್ ಆರೋಪಿಸಿದೆ. ಭಾರತದಲ್ಲಿ, ಮಾನವ ಹಕ್ಕುಗಳ ಕಾರ್ಯಕರ್ತರು, ವಕೀಲರು ಮತ್ತು ಪತ್ರಕರ್ತರ ವಾಟ್ಸಾಪ್ ಸಂದೇಶಗಳನ್ನು ಟ್ಯಾಪ್ ಮಾಡಲಾಗಿದೆ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಆರೋಪ ಮಾಡಿದ್ದಾರೆ.
ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಮತ್ತು ಮಾಜಿ ಸಂಸತ್ ಸದಸ್ಯ ಸಂತೋಷ್ ಭಾರತೀಯ ಕೂಡ ಈ ವಾಟ್ಸಾಪ್ ಬೇಹುಗಾರಿಕೆಗೆ ಒಳಗಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ದೇಶಾದ್ಯಂತ ಗೂಢಚರ್ಯೆ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಬ್ಯಾನರ್ಜಿ, ವಾಟ್ಸಾಪ್ ವಿಷಯದ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನಿಯನ್ನು ಒತ್ತಾಯಿಸುವುದಾಗಿ ಹೇಳಿದ್ದಾರೆ.
“ನಮ್ಮ ವಾಕ್ ಸ್ವಾತಂತ್ರ್ಯ ಎಲ್ಲಿದೆ? ಇದು ಯಾವ ರೀತಿಯ ಸ್ವಾತಂತ್ರ್ಯ? ನಾವು ಫೋನ್‌ನಲ್ಲಿ ಮುಕ್ತವಾಗಿ ಮಾತನಾಡಲು ಸಾಧ್ಯವಿಲ್ಲ” ಎಂದು ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನರು ವಾಟ್ಸಾಪ್ ನಲ್ಲಿ ಸೋರಿಯಾಗಲು ಸಾಧ್ಯವಿಲ್ಲ ಎಂದು ಭಾವಿಸಿದ್ದರು. ಆದರೆ ಅದು ಈಗ ಸಾಧ್ಯವಾಗಿದೆ. ಜೊತೆಗೆ “ಲ್ಯಾಂಡ್‌ಲೈನ್ ಫೋನ್‌ಗಳು ಮತ್ತು ಮೊಬೈಲ್ ಫೋನ್‌ಗಳು” ಸಹ ಸುರಕ್ಷಿತವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಇನ್ನು ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗಿಯಾರವರ ಮಮತಾ ಬ್ಯಾನರ್ಜಿಯವರು ಆರೋಪವನ್ನು ತಳ್ಳಿ ಹಾಕಿದ್ದಾರೆ. “ಇತರರ ಮೇಲೆ ಕಣ್ಣಿಡಲು ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಅಭ್ಯಾಸವಾಗಿದೆ. ರಾಜೀವ್ ಕುಮಾರ್ (ಮಾಜಿ ಕೋಲ್ಕತಾ ಪೊಲೀಸ್ ಆಯುಕ್ತರು) ಇಂತಹ ಸ್ನೂಪಿಂಗ್‌ಗೆ ವ್ಯವಸ್ಥೆ ಮಾಡಿದ್ದರು ”ಎಂದು ವಿಜಯವರ್ಗಿಯಾ ಹೇಳಿದ್ದಾರೆ.
ವಿವಾದದ ಕೇಂದ್ರದಲ್ಲಿರುವ ಇಸ್ರೇಲಿ ಸಾಫ್ಟ್‌ವೇರ್ ಅನ್ನು ಎನ್‌ಎಸ್‌ಒ ಗ್ರೂಪ್ ಅಭಿವೃದ್ಧಿಪಡಿಸಿದೆ ಮತ್ತು ಇದನ್ನು ಹೆಚ್ಚಾಗಿ ಪೆಗಾಸಸ್ ಎಂದು ಕರೆಯಲಾಗುತ್ತದೆ. ತಾಂತ್ರಿಕವಾಗಿ ಮಾಲ್ವೇರ್, ಪೆಗಾಸಸ್ ಗುರಿಯ ಫೋನ್‌ನ ಸಂಪೂರ್ಣ ನಿಯಂತ್ರಣವನ್ನು ಅನುಮತಿಸುತ್ತದೆ, ಫೈಲ್‌ಗಳು, ಸಂವಹನ ಮತ್ತು ಮೈಕ್ರೊಫೋನ್ ಮತ್ತು ಕ್ಯಾಮರಾಗಳಿಗೆ ಪ್ರವೇಶವನ್ನು ಅದು ಸಕ್ರಿಯಗೊಳಿಸುತ್ತದೆ ಎನ್ನಲಾಗುತ್ತಿದೆ.


