ಕೇಂದ್ರ ಸರ್ಕಾರದ ನಿರ್ದೇಶನದಂತೆ ಅನರ್ಹ ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ಪತ್ತೆ ಹಚ್ಚಿ, ಪರಿಷ್ಕರಿಸಲು ಮಾನದಂಡಗಳ ಪ್ರಕಾರ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್ ಮುನಿಯಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲಿ ಉಂಟಾಗಿರುವ ಬಿಪಿಎಲ್ ಕಾರ್ಡ್ ರದ್ದತಿ ಗೊಂದಲದ ಕುರಿತು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು (ನ.21) ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಅವರು, “ಯಾವುದೇ ಅರ್ಹ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿಲ್ಲ. ಮಾನದಂಡಗಳ ಅನ್ವಯ ಪರಿಷ್ಕರಣೆ ಮಾಡಿದ್ದೇವೆ. ಅನರ್ಹ ಕಾರ್ಡ್‌ಗಳನ್ನು ಪತ್ತೆ ಹಚ್ಚಲು ಕ್ರಮವಹಿಸಲಾಗಿದೆ. ಬಿಪಿಎಲ್‌ಗೆ ಅರ್ಹರಲ್ಲದವರನ್ನು ಎಪಿಎಲ್‌ಗೆ ಸೇರಿಸಲಾಗಿದೆ” ಎಂದಿದ್ದಾರೆ.
ರಾಜ್ಯದಲ್ಲಿ ಬಿಪಿಎಲ್ ಪಡಿತರ ಕಾರ್ಡ್‌ಗಳ ವಿತರಣೆ ಪ್ರಮಾಣ 2011ರ ಜನಸಂಖ್ಯೆ ಅನ್ವಯ ನಗರ ಮತ್ತು ಗ್ರಾಮೀಣ ಸೇರಿ ಶೇಖಡ 66ರಷ್ಟಿದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯ ಸರ್ಕಾರ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ಪತ್ತೆ ಹಚ್ಚಲು ಕ್ರಮವಹಿಸಿದೆ. ಆದಾಯ ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸದಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.
ಆದಾಯ ತೆರಿಗೆ ಇಲಾಖೆ ನೀಡಿರುವ ಮಾಹಿತಿ ಅನುಸರಿಸಿ, ಬಿಎಪಿಎಲ್‌ಗೆ ಅರ್ಹರಲ್ಲದವರನ್ನು ಅನರ್ಹ ಎಂದು ಪರಿಗಣಿಸಿ ಎಪಿಎಲ್‌ಗೆ ಸೇರಿಸಲಾಗಿದೆ. ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಪಡೆದಿರುವ ಬಗ್ಗೆ ಮಾಹಿತಿ ಪಡೆದು, ಪರಿಶೀಲಿಸಿ ಬಿಪಿಎಲ್‌ಗೆ ಅನರ್ಹರೆಂದು ಕಂಡು ಬಂದವರನ್ನು ಎಪಿಎಲ್‌ಗೆ ಸೇರಿಸಲಾಗಿದೆ. ಬಿಪಿಎಲ್‌ಗೆ ಅರ್ಹರಿದ್ದೂ, ಅನರ್ಹಗೊಂಡಿದ್ದರೆ, ಅಂತವರ ಬಿಪಿಎಲ್ ಕಾರ್ಡ್ ಪುನಃ ಸ್ಥಾಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದ್ದಾರೆ.
ರಾಜ್ಯದಲ್ಲಿ ಆದಾಯ ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ನೌಕರರದ್ದು ಸೇರಿ 1,2,509 ಬಿಪಿಎಲ್ ಪಡಿತರ ಕಾರ್ಡ್‌ಗಳಿವೆ. ಈ ಪೈಕಿ ಆದಾಯ ತೆರಿಗೆ ಪಾವತಿದಾರರದ್ದು 98,473 ಇದ್ದು, ಸರ್ಕಾರಿ ನೌಕರರದ್ದು 4,036 ಇದೆ. ಇವುಗಳು ಅನರ್ಹ ಎಂದು ಪರಿಗಣಿಸಲಾಗುತ್ತದೆ. ಈಗಾಗಲೇ 59,370 ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತನೆ ಮಾಡಲಾಗಿದೆ. ಅರ್ಹ ಎಂದು ಕಂಡು ಬಂದಿರುವ 16,806 ಕಾರ್ಡ್‌ಗಳನ್ನು ಬಿಪಿಎಲ್‌ನಲ್ಲೇ ಉಳಿಸಲು ತೀರ್ಮಾನಿಸಲಾಗಿದೆ. ಒಟ್ಟಾರೆ, ಅಮಾನತುಗೊಂಡಿರುವುದು 8,647 ಕಾರ್ಡ್‌ಗಳು ಮಾತ್ರ ಎಂದು ಸಚಿವ ಮುನಿಯಪ್ಪ ಮಾಹಿತಿ ನೀಡಿದ್ದಾರೆ.
ಅನರ್ಹ ಬಿಪಿಎಲ್ ಕಾರ್ಡ್‌ಗಳ ರದ್ದತಿ ವೇಳೆ ಉಂಟಾಗಿರುವ ಗೊಂದಲಗಳ ಹೊಣೆಯನ್ನು ನಾನೇ ಸಂಪೂರ್ಣವಾಗಿ ಹೊತ್ತುಕೊಳ್ಳುತ್ತೇನೆ. ಇನ್ನು ಒಂದು ವಾರದಲ್ಲಿ ಸಮಸ್ಯೆ ಸರಿಪಡಿಸಲಾಗುವುದು. ಸದ್ಯಕ್ಕೆ ಯಥಾಸ್ಥಿತಿ ಕಾಪಾಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಿಪಿಎಲ್ ಕಾರ್ಡ್ ಎಪಿಎಲ್‌ಗೆ ಬದಲಾದರೂ ಗೃಹಲಕ್ಷ್ಮಿ ಹಣ ಸಿಗಲಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್


