ಆಝರ್‌ಬೈಜಾನ್‌ನ ರಾಜಾಧಾನಿ ಬಾಕುವಿನಲ್ಲಿ ನಡೆಯುತ್ತಿರುವ 29ನೇ ವಿಶ್ವ ಹವಾಮಾನ ಶೃಂಗಸಭೆ (COP29) ಇಂದು (ನ.22) ಅಂತ್ಯಗೊಳ್ಳಲಿದೆ.
ನವೆಂಬರ್ 11ರಂದು ಪ್ರಾರಂಭಗೊಂಡ ಶೃಂಗಸಭೆಯಲ್ಲಿ ಹಲವಾರು ಚರ್ಚೆಗಳು ನಡೆದರೂ, ಸಭೆಯ ಮೂಲ ಉದ್ದೇಶವನ್ನು ಈಡೇರಿಸುವಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಹಾಗಾಗಿ, ಬಾಕು ಶೃಂಗಸಭೆ ಒಂದು ‘ವ್ಯರ್ಥ ಸಭೆ’ಯಾಗಿ ಕೊನೆಗೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.
ಈ ಬಾರಿಯ ಶೃಂಗಸಭೆಗೆ ‘Finance COP'(ಹಣಕಾಸಿನ ಶೃಂಗಸಭೆ) ಎಂದು ಸಹ ಹೆಸರಿಡಲಾಗಿತ್ತು. ಈ ಮೂಲಕ ಹವಾಮಾನ ನಿಧಿ ಸಂಗ್ರಹದ ಗುರಿಯನ್ನು ಹೊಂದಲಾಗಿತ್ತು. ಅಭಿವೃದ್ದಿ ಹೊಂದಿದ ರಾಷ್ಟ್ರಗಳು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಿಗೆ ಮತ್ತು ಹಿಂದುಳಿದ ರಾಷ್ಟ್ರಗಳಿಗೆ ಹವಾಮಾನ ಸಂಬಂಧಿತ ಸವಾಲುಗಳನ್ನು ಎದುರಿಸಲು ಹಣಕಾಸಿನ ನೆರವು ಒದಗಿಸುವುದು ಸಭೆಯ ಮೂಲ ಉದ್ದೇಶವಾಗಿತ್ತು.
ಆದರೆ, ಶೃಂಗಸಭೆ ಕೊನೆಗೊಳ್ಳುವ ಹೊತ್ತಿಗೆ ಈ ವಿಚಾರದಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗಿಲ್ಲ. ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳಿಗೆ ಅಭಿವೃದ್ದಿ ಹೊಂದಿದ ರಾಷ್ಟ್ರಗಳು ಹಣಕಾಸಿನ ನೆರವು ನೀಡಬೇಕು ಎಂಬುವುದು ಒಂದು ಒಮ್ಮತದ ಒಪ್ಪಂದ. ಆದರೆ, ಇದು ಕಡ್ಡಾಯ ನಿಯಮವಲ್ಲ. ಹಾಗಾಗಿ, ಅಭಿವೃದ್ದಿ ಹೊಂದಿದ ರಾಷ್ಟ್ರಗಳು ಉದ್ದೇಶಿತ ನೆರವು ನೀಡುವುದಿಲ್ಲ ಎಂದು ಹಿಂಜರಿದಿವೆ. ಈ ಮೂಲಕ ಶೃಂಗಸಭೆಯ ಮೂಲ ಉದ್ದೇಶ ತಲೆಕೆಳಗಾಗಿದೆ.
COP29| Blue Zone Day 11 Highlights#COP29 #COP29Azerbaijan pic.twitter.com/newVoQ772Y
— COP29 Azerbaijan (@COP29_AZ) November 22, 2024
ಸಂಪದ್ಭರಿತ ಅಥವಾ ಮುಂದುವರಿದ ರಾಷ್ಟ್ರಗಳು ವಾರ್ಷಿಕ 100 ಬಿಲಿಯನ್ ಡಾಲರ್ ನೆರವನ್ನು ಹವಾಮಾನ ಯೋಜನೆಗಳ ನಿಧಿಗೆ ನೀಡಬೇಕು ಎಂದು 2009ರಲ್ಲಿ ಕೋಪನ್ ಹ್ಯಾಗನ್ ಒಪ್ಪಂದ ಮಾಡಿಕೊಳ್ಳಲಾಗಿತ್ತು.
2015 ಪ್ಯಾರಿಸ್ ಒಪ್ಪಂದವು 2009ರ ಒಪ್ಪಂದವನ್ನೇ ಮತ್ತೊಮ್ಮೆ ಪುನರುಚ್ಚರಿಸಿತ್ತು. ಆದರೆ, 2022ರ ಹೊತ್ತಿಗೆ ಕೇವಲ 83.3 ಬಿಲಿಯನ್ ಡಾಲರ್ ಮಾತ್ರ ಸಂಗ್ರಹಿಸಲು ಸಾಧ್ಯವಾಯಿತು. 100 ಬಿಲಿಯನ್ ಗುರಿಯನ್ನು ಅಂತಿಮವಾಗಿ 2023 ರಲ್ಲಿ ತಲುಪಲಾಯಿತು. ಯುಎಸ್ ಸೇರಿದಂತೆ ಎಲ್ಲಾ 196 ದೇಶಗಳು 2015ರ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕಿದ್ದವು. ಭೂಮಿಯ ತಾಪಮಾನ ಕಡಿಮೆ ಮಾಡುವಲ್ಲಿ ಬದ್ದವಾಗಿರುವುದಾಗಿ ಪ್ರತಿಜ್ಞೆ ಮಾಡಿದ್ದವು.
2023ರಲ್ಲಿ 100 ಬಿಲಿಯನ್ ಗುರಿ ತಲುಪಿದರೂ, ಈ ಬಾರಿಯ ಬಾಕು ಶೃಂಗಸಭೆಯಲ್ಲಿ ಈ ಮೊತ್ತವನ್ನು ಹೆಚ್ಚಿಸಬೇಕು ಎಂದು ಭಾರತ ಸೇರಿದಂತೆ ಹಿಂದುಳಿದ ಮತ್ತು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳು ಬೇಡಿಕೆ ಇಟ್ಟಿತ್ತು. ಆದರೆ, ಮುಂದುವರಿದ ರಾಷ್ಟ್ರಗಳು ಈ ವಿಚಾರದಲ್ಲಿ ಬಿನ್ನಾಭಿಪ್ರಾಯ ವ್ಯಕ್ತಪಡಿಸಿವೆ. ನಿಧಿ ಸಂಗ್ರಹ ವಿಚಾರದಲ್ಲಿ ಒಮ್ಮತ ಮೂಡಿಲ್ಲ. ಈ ನಡುವೆ ದೊಡ್ಡ ಪಾಲುದಾರರಾಗಿರುವ ಯುಎಸ್ ಅಧ್ಯಕ್ಷ ಟ್ರಂಪ್ ಪ್ಯಾರಿಸ್ ಒಪ್ಪಂದದಿಂದಲೇ ಹೊರ ನಡೆಯುವುದಾಗಿ ಹೇಳುತ್ತಿದ್ದಾರೆ.
ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಯೋಜನೆಗಳು ಒಂದು ‘ವಂಚನೆ’ ಅದರಿಂದ ಯಾವುದೇ ಪರಿಣಾಮಗಳು ಆಗುತ್ತಿಲ್ಲ ಎಂಬುವುದು ಟ್ರಂಪ್ ವಾದ. ಅವರು ತನ್ನದೇ ಆದ ಯೋಜನೆಗಳನ್ನು ರೂಪಿಸಬಹುದು ಎಂದು ವರದಿಗಳು ಹೇಳಿವೆ.
2016ರಲ್ಲಿ ಟ್ರಂಪ್ ಪ್ಯಾರಿಸ್ ಒಪ್ಪಂದದಿಂದ ಹೊರ ನಡೆದಾಗ ಇತರ ರಾಷ್ಟ್ರಗಳೂ ಇದೇ ನಿಲುವನ್ನು ಹೊಂದಬಹುದು ಎಂದು ಜಾಗತಿಕ ಮಟ್ಟದಲ್ಲಿ ಆತಂಕ ಶುರುವಾಗಿತ್ತು. ಆದರೆ, 2021ರಲ್ಲಿ ಜೋ ಬೈಡೆನ್ ಆಡಳಿತ ಅವಧಿಯಲ್ಲಿ ಯುಎಸ್ ಪ್ಯಾರಿಸ್ ಒಪ್ಪಂದಕ್ಕೆ ಮರು ಸೇರ್ಪಡೆ ಆಯಿತು. 2030ರ ವೇಳೆಗೆ, ತನ್ನ ಇಂಗಾಲ ಹೊರಸೂಸುವಿಕೆಯನ್ನು 2005ರ ಮಟ್ಟಕ್ಕಿಂತ ಅರ್ಧದಷ್ಟು ಕಡಿತಗೊಳಿಸುವುದಾಗಿ ಶಪಥ ಮಾಡಿತ್ತು. ಅದನ್ನು ಟ್ರಂಪ್ ಮುರಿಯುವ ಸಾಧ್ಯತೆ ಇದೆ.
ಭಾರತ ಸೇರಿದಂತೆ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳು ಮತ್ತು ಪೆಟ್ರೋಲಿಯಂ ಆರ್ಥಿಕತೆಯನ್ನು ಅವಲಂಭಿಸಿರುವ ಕೊಲ್ಲಿ ರಾಷ್ಟ್ರಗಳು ಕೂಡ ಅಭಿವೃದ್ದಿ ಹೊಂದಿರುವ ರಾಷ್ಟ್ರಗಳು ಹವಾಮಾನ ನಿಧಿಗೆ ಹೆಚ್ಚಿನ ಕೊಡುಗೆ ನೀಡಬೇಕು ಎಂದು ಆಗ್ರಹಿಸಿವೆ. ಈ ವಿಚಾರದಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲು ಈ ಬಾರಿಯ ಶೃಂಗಸಭೆ ಗುರಿ ಹೊಂದಿತ್ತು.
ಆದರೆ, ಹವಾಮಾನ ಆರ್ಥಿಕತೆಯ ದೊಡ್ಡ ಪಾಲುದಾರ ಯುಎಸ್ ಶೃಂಗಸಭೆಯಲ್ಲಿ ಪಾಲ್ಗೊಂಡರೂ, ಅದರ ಬಗ್ಗೆ ಅಷ್ಟೊಂದು ಒಲವು ಹೊಂದಿಲ್ಲ. ಯುಎಸ್‌ನಲ್ಲಿ ಪ್ರಸ್ತುತ ಬೈಡೆನ್ ಸರ್ಕಾರ ಇರುವುದರಿಂದ ಶೃಂಗಸಭೆಗೆ ಪ್ರತಿನಿಧಿಗಳನ್ನು ಕಳುಹಿಸಿಕೊಟ್ಟಿದೆ. ಇನ್ನು ಮುಂದೆ ಟ್ರಂಪ್ ಸರ್ಕಾರ ಬಂದರೆ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದು ಮತ್ತು ಆರ್ಥಿಕ ನೆರವು ನೀಡುವುದನ್ನು ಯುಎಸ್ ನಿಲ್ಲಿಸಬಹುದು. ಅರ್ಜೆಂಟೀನಾ ಈ ಬಾರಿಯ ಶೃಂಗಸಭೆಯಿಂದ ತನ್ನ ಪ್ರತಿನಿಧಿಗಳನ್ನು ಅರ್ಧದಲ್ಲೇ ವಾಪಸ್ ಕರೆಸಿಕೊಂಡಿದೆ. ಫ್ರಾನ್ಸ್ ಸಚಿವರು ಶೃಂಗಸಭೆಯಲ್ಲಿ ಬರುವುದಾಗಿ ಹೇಳಿ ಪ್ರವಾಸ ರದ್ದುಗೊಳಿಸಿದ್ದಾರೆ. ಹೀಗಿರುವಾಗ ಹವಾಮಾನ ನಿಧಿಯ ವಿಷಯದಲ್ಲಿ ಅಂತಿಮ ನಿರ್ಧಾರಕ್ಕೆ ಬರುವುದು ಸವಾಲಾಗಿ ಪರಿಣಮಿಸಿದೆ.
COP ಶೃಂಗಸಭೆ ಅರ್ಥಹೀನ
ಹವಾಮಾನ ನಿಧಿಯ ಸಂಗ್ರಹ ವಿಚಾರದಲ್ಲಿ ಅಂತಿಮ ನಿರ್ಧಾರಕ್ಕೆ ಬರುವುದು ಸವಾಲಾಗಿರುವಾಗ ಅರ್ಥಶಾಸ್ರಜ್ಞರು ಇಡೀ ಶೃಂಗಸಭೆಯೇ ಅರ್ಥಹೀನ ಎಂದಿದ್ದಾರೆ.
ವಿಶ್ವಸಂಸ್ಥೆಯು ವಾರ್ಷಿಕ ಹವಾಮಾನ ಬದಲಾವಣೆ ಸಮ್ಮೇಳನದ ವಿಷಯದಲ್ಲಿ ಸಂಪೂರ್ಣವಾಗಿ ಮರು-ಚಿಂತನೆ ಮಾಡುವ ಸಮಯ ಬಂದಿದೆ ಎಂದು ಅರ್ಥಶಾಸ್ತ್ರಜ್ಞೆ ಜಯತಿ ಘೋಷ್ ಹೇಳಿದ್ದಾರೆ.
“ಪ್ರತಿವರ್ಷ ಹವಾಮಾನ ಶೃಂಗಸಭೆ ನಡೆಯುತ್ತಲೇ ಇದೆ. ಆದರಿಂದ ಯಾವುದೇ ಪ್ರಯೋಜನಗಳು ಆಗುತ್ತಿಲ್ಲ. ನಮ್ಮ ಸಮಸ್ಯೆಗಳು ಗಂಭೀರವಾಗಿವೆ. ಅದಕ್ಕೆ ತುರ್ತು ಪರಿಹಾರ ಬೇಕಿದೆ. ಇಂತಹ ದೊಡ್ಡ ಸಭೆಗಳಿಂದ ಪರಿಹಾರ ದೊರೆಯುತ್ತಿಲ್ಲ. ನಾವು 2050, 2070 ಎಂದು ವರ್ಷಗಳನ್ನು ದೂಡುತ್ತಲೇ ಇದ್ದೇವೆ” ಎಂದು ಮ್ಯಾಸಚೂಸೆಟ್ಸ್ ಅಮ್ಹೆರ್ಸ್ಟ್ ವಿಶ್ವವಿದ್ಯಾಲಯದಲ್ಲಿ ಅಭಿವೃದ್ಧಿ ಅರ್ಥಶಾಸ್ತ್ರಜ್ಞೆಯಾಗಿರುವ ಜಯತಿ ಘೋಷ್ ಟೀಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : 5,800 ಕಿ.ಮೀ. ಚಿಮ್ಮುವ ಕ್ಷಿಪಣಿಯಿಂದ ಉಕ್ರೇನ್ ಮೇಲೆ ರಷ್ಯಾ ದಾಳಿ: 60 ವರ್ಷದಲ್ಲಿ ಮೊದಲ ಬಳಕೆ


