ಅಮೆರಿಕದ ಅಧ್ಯಕ್ಷ ಕೂಡಾ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಕೇಳಿ ಯಾವುದೆ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ಹೇಳಿರುವುದು ವರದಿಯಾಗಿದೆ. ಬೆಳ್ತಂಗಡಿ ತಾಲೂಕು ಮಟ್ಟದ ಸಹಕಾರ ಸಪ್ತಾಹದ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದು ವ್ಯಾಪಕ ವ್ಯಂಗ್ಯಕ್ಕೀಡಾಗಿದ್ದಾರೆ.
ನವೆಂಬರ್ 18ರಂದು ನಡೆದ ಬೆಳ್ತಂಗಡಿ ತಾಲೂಕು ಮಟ್ಟದ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರು ತುಳು ಭಾಷೆಯಲ್ಲಿ ಮಾತನಾಡುತ್ತಾ, “ನಮ್ಮ ದೇಶದ ಎಲ್ಲ ಜನರನ್ನು ಭಾರತೀಯರು ಅಂತ ತಿಳಿದುಕೊಂಡು ನರೇಂದ್ರ ಮೋದಿಯವರು ದೇಶದ ಆಡಳಿತವನ್ನು ನಡೆಸುತ್ತಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಮಾತ್ರ ಸೂಪರ್ ಪವರ್ ಭಾರತ ನಿರ್ಮಾಣವಾಗುತ್ತದೆ. ರಷ್ಯಾ-ಉಕ್ರೇನ್ ನಡುವೆ ಯುದ್ಧವಾದಾಗ ಅಮೆರಿಕದ ಅಧ್ಯಕ್ಷರನ್ನು ಕರೆಯಲಿಲ್ಲ. ಬದಲಾಗಿ, ಯುದ್ಧ ನಿಲ್ಲಿಸಲು ನರೇಂದ್ರ ಮೋದಿಯವರನ್ನು ಕರೆದಿದ್ದರು” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಮೋದಿಯವರೇ, ನೀವು ಬನ್ನಿ, ಯುದ್ಧ ನಿಲ್ಲಿಸಿ ಅಂತ ಉಕ್ರೇನ್‌ನ ಅಧ್ಯಕ್ಷ ಮನವಿ ಮಾಡಿದ್ದರು. ಯಾಕೆಂದರೆ, ಭಾರತ ಅಷ್ಟೊಂದು ಸೂಪರ್ ಪವರ್” ಎಂದು ಶಾಸಕ ಹರೀಶ್ ಪೂಂಜಾ ಮಾತನಾಡುತ್ತಾ ಪ್ರತಿಪಾದಿಸಿದ್ದಾರೆ. ಅದಾಗ್ಯೂ, ವಿದೇಶಾಂಗ ಸಚಿವಾಲಯವು ಉಕ್ರೇನ್ ಮತ್ತು ರಷ್ಯಾ ಯುದ್ಧದ ವಿಚಾರವಾಗಿ ಈ ರೀತಿಯ ಎಲ್ಲಾ ವರದಿಗಳನ್ನೂ ಸ್ಪಷ್ಟವಾಗಿ ತಳ್ಳಿ ಹಾಕಿತ್ತು. ಅದರೂ ಬಿಜೆಪಿ ಅಭಿಮಾನಿಗಳು ಮತ್ತು ನಾಯಕರು ಅದನ್ನೆ ಪದೇ ಪದೇ ಹೇಳುತ್ತಾ ಸುಳ್ಳು ಹರಡುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಪ್ಯಾಲೆಸ್ತೀನ್-ಇಸ್ರೇಲ್ ಯುದ್ಧವಾದಾಗಲೂ ಕೂಡ ನರೇಂದ್ರ ಮೋದಿಯವರನ್ನು ಯುದ್ಧ ನಿಲ್ಲಿಸಲು ಕರೆದಿದ್ದರು. ಅದೇ ರೀತಿ, ಅಮೆರಿಕದ ಅಧ್ಯಕ್ಷ ಕೂಡ ಇವತ್ತು ಯಾವುದೇ ನಿರ್ಧಾರ ಮಾಡುವುದಿದ್ದರೆ ಮೊದಲು ಯೋಚನೆ ಮಾಡುವುದು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು. ಮೋದಿಯವರನ್ನು ಕೇಳಿಯೇ ನಿರ್ಧಾರ ಮಾಡಲಾಗುತ್ತದೆ” ಎಂದು ಹೇಳಿದ್ದಾರೆ.
“ಇದು ನಮಗೆ ಹೆಮ್ಮೆಯ ವಿಷಯವಾಗಬೇಕು. ನಮ್ಮನ್ನು ಕೇಳಿಯೇ ಅಲ್ಲಿ ಆಡಳಿತ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಂತಹ ದೇಶದಲ್ಲಿ ನಾವು ಬದುಕುತ್ತಿದ್ದೇವೆ ಎಂಬ ಹೆಮ್ಮೆ ನಮಗಿರಬೇಕು. ಇದಕ್ಕೆಲ್ಲ ಮೋದಿಯವರು ಕಾರಣ. 2030ರ ವೇಳೆಗೆ ಭಾರತ ಸೂಪರ್ ಪವರ್ ದೇಶವಾಗುತ್ತದೆ” ಎಂದು ಶಾಸಕ ಹರೀಶ್ ಪೂಂಜಾ ಹೇಳಿದ್ದಾರೆ.
ಅಮೆರಿಕದಲ್ಲಿ ಯಾವುದೇ ನಿರ್ಧಾರ ಮಾಡುವುದು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಕೇಳಿ: ಬೆಳ್ತಂಗಡಿ ಬಿಜೆಪಿ ಶಾಸಕ @HPoonja ಹೇಳಿಕೆ ವೈರಲ್
ನಗೆಪಾಟಲಿಗೀಡಾದ @BJP4Karnataka ಹೇಳಿಕೆ: ಬೆಳ್ತಂಗಡಿ ತಾಲೂಕು ಮಟ್ಟದ ಸಹಕಾರ ಸಪ್ತಾಹದ ಕಾರ್ಯಕ್ರಮದಲ್ಲಿ ಹೇಳಿಕೆ
ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲಿಗೆ ಆಹಾರವಾದ ಶಾಸಕನ ತುಳು ಭಾಷಣ pic.twitter.com/SASh1sInun
— eedina.com ಈ ದಿನ.ಕಾಮ್ (@eedinanews) November 24, 2024
ಅವರ ಈ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ಗೆ ಒಳಗಾಗಿದ್ದು, “ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಈ ಹೇಳಿಕೆಯನ್ನು ಕೇಳಿ ನಗಬೇಕೊ ಆಳಬೇಕೊ ಎಂದು ಒಂದೂ ತಿಳಿಯುತ್ತಿಲ್ಲ. ಅಮೆರಿಕ ದೇಶದಲ್ಲಿ ಯಾವುದೇ ನಿರ್ಧಾರ ಮಾಡುವುದು ಭಾರತದ ಪ್ರಧಾನಿ ನರೇಂದ್ರ ಮೋದಿಯ ಮಾತು ಕೇಳಿಯಂತೆ. ಅಮೆರಿಕದ 1 ಡಾಲರ್ ಭಾರತದ 84 ರೂಪಾಯಿಗೆ ಸಮವಾಗಿದೆ. ಇದು ಕೂಡ ಮೋದಿಯ ಸಲಹೆಯಿಂದ ಆಗಿರಬಹುದು. ಮತ ನೀಡಿದ ಮತದಾರರ ಕಿವಿಗೆ ಹೂ ಇಡುವುದರಲ್ಲಿ ಬೆಳ್ತಂಗಡಿ ಶಾಸಕರು ನಿಸ್ಸೀಮರು” ಬಳಕೆದಾರರೊಬ್ಬರು ಹೇಳಿದ್ದಾರೆ.
ರಷ್ಯಾ ಉಕ್ರೇನ್ ಯುದ್ಧದ ಬಗ್ಗೆ ಬಿಜೆಪಿ ಹರಡಿದ ಸುಳ್ಳು!
ರಷ್ಯಾ ಮತ್ತು ಉಕ್ರೇನ್ ಯುದ್ಧ ಪ್ರಾರಂಭವಾದಾಗ, ಉಕ್ರೇನ್‌ನಲ್ಲಿದ್ದ ಭಾರತೀಯ ವಿದ್ಯಾರ್ಥಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ನೆರವಾಗಲೆಂದು ಪ್ರಧಾನಿ ನರೇಂದ್ರ ಮೋದಿ ಅವರ ಮನವಿಗೆ ಸ್ಪಂದಿಸಿ ಉಕ್ರೇನ್‌ನಲ್ಲಿ ರಷ್ಯಾ ಕೆಲಕಾಲ ದಾಳಿಯನ್ನು ಸ್ಥಗಿತಗೊಳಿಸಿತ್ತು ಎಂದು ಮೋದಿ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು, ಸಂಘಪರಿವಾರದವರು ಸುದ್ದಿ ಹರಡಿದ್ದರು.
ಬಿಜೆಪಿ ಹರಡಿದ್ದ ಸುಳ್ಳನ್ನು ನಂಬಿ ಬಿಜೆಪಿ ಪರ ಮಾಧ್ಯಮಗಳು, ವರದಿ ಪ್ರಕಟಿಸಿತ್ತು. ಬಳಿಕ ಎಲ್ಲವೂ ಸುಳ್ಳು ಎಂದು ಗೊತ್ತಾಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ್ದ ಆಗಿನ ವಿದೇಶಾಂಗ ಇಲಾಖೆಯ ಅಧಿಕಾರಿ ಅರಿಂದಮ್ ಬಾಗ್ಚಿ, ಎಲ್ಲಾ ವರದಿಗಳನ್ನೂ ಸ್ಪಷ್ಟವಾಗಿ ತಳ್ಳಿ ಹಾಕಿದ್ದರು.
“ಭಾರತೀಯರನ್ನು ಉಕ್ರೇನ್‌ನಿಂದ ವಾಪಸ್ ಕರೆತರಲು ನಮಗೆ ಸೂಕ್ತ ಮಾರ್ಗಗಳನ್ನು ರಷ್ಯಾ ಹಾಗೂ ಉಕ್ರೇನ್ ಸರ್ಕಾರಗಳು ವಿವರಿಸಿದವು. ಹೀಗಾಗಿ, ನಾವು ಉಕ್ರೇನ್‌ನಲ್ಲಿ ಇರುವ ನಮ್ಮ ಪ್ರಜೆಗಳಿಗೆ ಈ ಮಾಹಿತಿಯನ್ನು ರವಾನಿಸಿ ಅವರನ್ನು ಉಕ್ರೇನ್ ದೇಶದ ಗಡಿ ದಾಟಿಸಿದೆವು. ಈ ರಕ್ಷಣಾ ಕಾರ್ಯಾಚರಣೆಗೆ ಸಹಕಾರ ನೀಡಿದ ದೇಶಗಳಿಗೆ ಧನ್ಯವಾದ ಹೇಳುತ್ತೇವೆ. ಇದು ನಮಗೆ ಖುಷಿ ತಂದಿದೆ” ಎಂದು ಅವರು ಹೇಳಿದ್ದರು.
“ನಮ್ಮ ಮನವಿಗೆ ಸೇನೆ ಸ್ಪಂದಿಸಿ ಭಾರತೀಯರ ತೆರವು ಕಾರ್ಯಾಚರಣೆ ವೇಳೆ ಬಾಂಬ್ ದಾಳಿ ನಿಲ್ಲಿಸಲಾಗಿತ್ತು ಎಂಬ ವಿಚಾರ ಸತ್ಯಕ್ಕೆ ದೂರವಾದ ವಿಚಾರ” ಎಂದು ಅರಿಂದಮ್ ಬಾಗ್ಚಿ ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಸಂವಿಧಾನದ ಪೀಠಿಕೆಯ ‘ಜಾತ್ಯತೀತ’ ಪದವನ್ನು ಮತ್ತೆ ಎತ್ತಿಹಿಡಿದ ಸುಪ್ರೀಂಕೋರ್ಟ್ – ಬಿಜೆಪಿ & ಆರೆಸ್ಸೆಸ್‌ಗೆ ಮುಖಭಂಗ
ಸಂವಿಧಾನದ ಪೀಠಿಕೆಯ ‘ಜಾತ್ಯತೀತ’ ಪದವನ್ನು ಮತ್ತೆ ಎತ್ತಿಹಿಡಿದ ಸುಪ್ರೀಂಕೋರ್ಟ್ – ಬಿಜೆಪಿ & ಆರೆಸ್ಸೆಸ್‌ಗೆ ಮುಖಭಂಗ


