ಲಂಚ, ವಂಚನೆ ಪ್ರಕರಣದಲ್ಲಿ ಗೌತಮ್ ಅದಾನಿ ವಿರುದ್ದ ಅಮೆರಿಕ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದ ಬೆನ್ನಲ್ಲೇ, ತನ್ನ ನೆಲದಲ್ಲಿ ಅದಾನಿ ಸಂಸ್ಥೆ ಹೂಡಿಕೆ ಮಾಡಿರುವ ಯೋಜನೆಗಳ ಕುರಿತು ಶ್ರೀಲಂಕಾ ಸರ್ಕಾರ ತನಿಖೆಗೆ ಆದೇಶಿಸಿದೆ ಎಂದು ವರದಿಯಾಗಿದೆ.
ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಅವರ ಹೊಸ ಸರ್ಕಾರದ ಮೊದಲ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸರ್ಕಾರದ ವಕ್ತಾರ ನಳಿಂದಾ ಜಯತಿಸ್ಸಾ, “ಭಾರತ ಮೂಲದ ಅದಾನಿ ನಿರ್ಮಾಣ ಸಂಸ್ಥೆಯು ಶ್ರೀಲಂಕಾದಲ್ಲಿ ಹೂಡಿಕೆ ಮಾಡಿರುವ ಯೋಜನೆಗಳ ಕುರಿತು ಹಣಕಾಸು ಹಾಗೂ ವಿದೇಶಾಂಗ ಸಚಿವರು ಪರಿಶೀಲನೆ ನಡೆಸಬೇಕು ಎಂದು ಸೂಚಿಸಲಾಯಿತು” ಎಂದಿದ್ದಾರೆ.
“ಅದಾನಿ ಹೂಡಿಕೆ ಕುರಿತು ಎರಡು ತನಿಖೆಗಳು ನಡೆಯಲಿವೆ. ಇವುಗಳು ನೀಡುವ ವರದಿಯನ್ನು ಆಧರಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ” ಎಂದು ಜಯತಿಸ್ಸಾ ಹೇಳಿದ್ದಾಗಿ ವರದಿಯಾಗಿದೆ.
ದಿಸ್ಸನಾಯಕೆ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡ ನಂತರ, ದೇಶದಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ, ಶ್ರೀಲಂಕಾದಿಂದ ದೋಚಿ ವಿದೇಶದಲ್ಲಿ ಬಚ್ಚಿಟ್ಟಿರುವ ದೇಶದ ಆಸ್ತಿಗಳನ್ನು ಮರಳಿ ತರಲಾಗುವುದು ಎಂದು ಭರವಸೆ ನೀಡಿದ್ದರು.
ಪವನ ವಿದ್ಯುತ್ ಯೋಜನೆಗಾಗಿ ಅದಾನಿ ಸಮೂಹವು ದ್ವೀಪರಾಷ್ಟ್ರವಾದ ಶ್ರೀಲಂಕಾದಲ್ಲಿ 44.2 ಕೋಟಿ ಅಮೆರಿಕನ್ ಡಾಲರ್‌ನಷ್ಟು ಹೂಡಿಕೆ ಮಾಡಿದೆ. ಆದರೆ, ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಯೋಜನೆ ಕೈಗೊಳ್ಳದಂತೆ ನ್ಯಾಯಾಲಯ ತಡೆ ನೀಡಿದೆ.
ಮತ್ತೊಂದೆಡೆ ಕೊಲೊಂಬೊದಲ್ಲಿ ಸಮುದ್ರದಾಳದ ಬಂದರು ಟರ್ಮಿನಲ್ ನಿರ್ಮಾಣಕ್ಕಾಗಿ ಅದಾನಿ ಕಂಪನಿಗೆ ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಹಣಕಾಸು ನಿಗಮವು 55.3 ಕೋಟಿ ಅಮೆರಿಕನ್ ಡಾಲರ್ ಆರ್ಥಿಕ ನೆರವು ನೀಡಿತ್ತು.
ದಿಸ್ಸನಾಯಕೆ ಅವರ ನ್ಯಾಷನಲ್ ಪೀಪಲ್ಸ್ ಆಡಳಿತವು ತಮ್ಮ ಅನುಮೋದನೆಯಲ್ಲಿ ಭ್ರಷ್ಟಾಚಾರವನ್ನು ಒಳಗೊಂಡಿರುವ ಯಾವುದೇ ವಿದೇಶಿ ಹೂಡಿಕೆ ಯೋಜನೆಗಳಿದ್ದರೆ ರದ್ದುಗೊಳಿಸುವುದಾಗಿ ಹೇಳಿದೆ.
ಅಮೆರಿಕದಲ್ಲಿ ಅದಾನಿ ಸಮೂಹದ ವಿರುದ್ಧ ನಡೆಯುತ್ತಿರುವ ವಿಚಾರಣೆ ನಂತರ, ನೈರೋಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ಒಳಗೊಂಡಂತೆ ಕೀನ್ಯಾದಲ್ಲಿ ಅದಾನಿ ಸಮೂಹ ಕೈಗೊಂಡಿರುವ 2.5 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆಯನ್ನು ಅಲ್ಲಿನ ಸರ್ಕಾರ ರದ್ದುಪಡಿಸಿದೆ.
ಪ್ರೆಂಚ್ ಮೂಲದ ಟೋಟಲ್ ಎನರ್ಜಿ ಅದಾನಿ ಸಮೂಹದ ಹೂಡಿಕೆಗಳನ್ನು ತಾತ್ಕಾಲಿಕ ಸ್ಥಗಿತ ಮಾಡಿದೆ ಎಂದು ವರದಿಯಾಗಿದೆ. ಭಾರತದಲ್ಲಿ ಆಂಧ್ರ ಸರ್ಕಾರ ಕೂಡ ಅದಾನಿ ಜೊತೆಗಿನ ವಿದ್ಯುತ್ ಒಪ್ಪಂದವನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಯೋಚಿಸುತ್ತಿದೆ.
ಇದನ್ನೂ ಓದಿ : ಲಂಚ, ವಂಚನೆ ಆರೋಪ | ಅದಾನಿ ಜೊತೆಗಿನ ‘ವಿದ್ಯುತ್ ಒಪ್ಪಂದ’ ರದ್ದತಿಗೆ ಮುಂದಾದ ಆಂಧ್ರ ಸರ್ಕಾರ : ವರದಿ


