ಇಸ್ರೇಲ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ನಡುವೆ ಕದನ ವಿರಾಮ ಘೋಷಣೆಯಾದ ಬಳಿಕ, ನಾವೂ ಕದನ ವಿರಾಮಕ್ಕೆ ಸಿದ್ದ ಎಂದು ಗಾಝಾದ ಹಮಾಸ್ ಹೇಳಿರುವುದಾಗಿ ವರದಿಯಾಗಿದೆ.
“ನಾವು ಕದನ ವಿರಾಮಕ್ಕೆ ಮತ್ತು ಒತ್ತೆಯಾಳುಗಳ ಬಿಡುಗಡೆಗೆ ಸಿದ್ದ” ಎಂದು ಮಧ್ಯವರ್ತಿಗಳಾದ ಈಜಿಪ್ಟ್, ಕತಾರ್ ಮತ್ತು ತುರ್ಕಿಗೆ ಹಮಾಸ್ ಹೇಳಿರುವುದಾಗಿ ಅದರ ಮುಖ್ಯಸ್ಥರನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗಾಝಾದ ಮೇಲಿನ ಆಕ್ರಮಣವನ್ನು ಇಸ್ರೇಲ್ ನಿಲ್ಲಿಸಬೇಕು ಎಂಬುವುದು ಹಮಾಸ್‌ನ ಆಗ್ರವಾದರೆ, ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು ಎಂಬುವುದು ಇಸ್ರೇಲ್‌ನ ಬೇಡಿಕೆಯಾಗಿದೆ. ಈ ವಿಷಯದಲ್ಲಿ ಒಮ್ಮತಕ್ಕೆ ಬಂದು, ಕಳೆದ ಒಂದು ವರ್ಷದ ಅವಧಿಯಲ್ಲಿ ಒಮ್ಮೆ ಹಮಾಸ್ ಮತ್ತು ಇಸ್ರೇಲ್ ನಡುವೆ ಕದನ ವಿರಾಮ ಘೋಷಣೆಯಾಗಿತ್ತು. ಆದರೆ, ಮತ್ತೆ ಆಕ್ರಮಣ ಮುಂದುವರೆದಿದೆ.
ಕಳೆದ 13 ತಿಂಗಳ ಇಸ್ರೇಲ್ ಆಕ್ರಮಣದಲ್ಲಿ ಬಲಿಯಾದ ಗಾಝಾ ನಾಗರಿಕರ ಸಂಖ್ಯೆ ನಿನ್ನೆಗೆ (ನ.26) 44,249ಕ್ಕೆ ತಲುಪಿದೆ. 104,746 ಜನರು ಗಾಯಗೊಂಡಿದ್ದಾರೆ ಎಂದು ಹಮಾಸ್ ಆರೋಗ್ಯ ಇಲಾಖೆ ಹೇಳಿದೆ.
ಲೆಬನಾನ್‌ನಲ್ಲಿ ಸಂಭ್ರಮ
ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವೆ ಕದನ ವಿರಾಮ ಘೋಷಣೆಯಾಗಿರುವ ಹಿನ್ನೆಲೆ ಲೆಬನಾನ್‌ನಲ್ಲಿ ಸಂಭ್ರಮ ಮನೆ ಮಾಡಿದೆ. ಮನೆಗಳನ್ನು ತೊರೆದು ದೂರ ಹೋಗಿದ್ದ ಜನರು ವಾಹನಗಳಲ್ಲಿ ದಕ್ಷಿಣ ಲೆಬನಾನ್‌ನತ್ತ ಆಗಮಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಬೈರೂತ್ ನಗರದಲ್ಲಿ ಜನರು ಗುಂಪುಗೂಡಿ, ಹಾಡು ಹಾಡಿ ಸಂಭ್ರಮಾಚರಣೆ ಮಾಡಿರುವ ವಿಡಿಯೋಗಳು ಹರಿದಾಡುತ್ತಿವೆ.
VIDEO: 'Hope', 'Happy', Israelis and Lebanese react to ceasefire deal.
A ceasefire between Israel and Lebanon came into effect in the early hours of Wednesday after more than a year of fighting that has killed thousands of people pic.twitter.com/eLuf6EKAEX
— AFP News Agency (@AFP) November 27, 2024
ಆದರೆ, ಇಸ್ರೇಲ್ ಸೇನೆ ನಾವಿರುವ ಪ್ರದೇಶಗಳಿಗೆ ಈಗ ಬರಬೇಡಿ ಎಂಬ ಎಚ್ಚರಿಕೆಯನ್ನು ನೀಡಿದೆ. ಮತ್ತೊಂದೆಡೆ ಇಸ್ರೇಲ್ ಸೇನೆ ಹೋದ ಬಳಿಕ, ನಾವು ತಂಡಗಳನ್ನು ನಿಯೋಜನೆ ಮಾಡುತ್ತೇವೆ ಎಂದು ಹಿಜ್ಬುಲ್ಲಾ ಹೇಳಿಕೊಂಡಿದೆ.
ಕದನ ವಿರಾಮಕ್ಕೆ ಸ್ವಾಗತ
ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಕದನ ವಿರಾಮವನ್ನು ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ಇರಾನ್, ಈಜಿಪ್ಟ್, ಚೀನಾ, ಬ್ರಿಟನ್ ದೇಶಗಳು ಸೇರಿದಂತೆ ಹಲವರು ಸ್ವಾಗತಿಸಿದ್ದಾರೆ.
ಕದನ ವಿರಾಮ | ಇಸ್ರೇಲ್-ಹಿಜ್ಬುಲ್ಲಾ ಪ್ರತಿಕ್ರಿಯೆ
ಕದನ ವಿರಾಮದ ಕುರಿತು ಇಸ್ರೇಲ್ ಮತ್ತು ಹಿಜ್ಬುಲ್ಲಾ ಕಡೆಯಿಂದ ಪ್ರತಿಕ್ರಿಯೆ ಬಂದಿದೆ.
ಹಿಜ್ಬುಲ್ಲಾ ತಾತ್ವಿಕವಾಗಿ ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಂಡಿದ್ದರೂ, ಅದು ಇನ್ನೂ ಅಂತಿಮ ಒಪ್ಪಂದವನ್ನು ಪರಿಶೀಲಿಸಬೇಕಾಗಿದೆ. ಲೆಬನಾನ್‌ನ ಸಾರ್ವಭೌಮತ್ವ ಉಲ್ಲಂಘಿಸುವ ಯಾವುದೇ ಅಂಶ ಒಪ್ಪಂದದಲ್ಲಿ ಇದ್ದರೂ, ನಾವು ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹಿಜ್ಬುಲ್ಲಾದ ಹಿರಿಯ ಅಧಿಕಾರಿ ಮಹಮೂದ್ ಕಮಾತಿ ಹೇಳಿದ್ದಾರೆ.
ಇತ್ತೀಚಿನ ವರದಿಗಳ ಪ್ರಕಾರ, ಕದನ ವಿರಾಮ ಘೋಷಣೆಯಾದರೂ, ಹಿಜ್ಬುಲ್ಲಾ ಉತ್ತರ ಇಸ್ರೇಲ್ ಮೇಲೆ ರಾಕೆಟ್ ದಾಳಿ ಮುಂದುವರೆಸಿದೆ. ಉತ್ತರ ಇಸ್ರೇಲ್‌ನಲ್ಲಿ ವಾಯುದಾಳಿಯ ಸೈರನ್ ಮೊಳಗುತ್ತಿದೆ. ಕದನ ವಿರಾಮದ ಸುದ್ದಿಯ ನಡುವೆ ಉದ್ವಿಗ್ನತೆ ಉಲ್ಬಣಗೊಂಡಿದೆ.
ಮತ್ತೊಂದಡೆ, ಹಿಜ್ಬುಲ್ಲಾ ಕದನ ವಿರಾಮವನ್ನು ಉಲ್ಲಂಘಿಸಿದರೆ ಮಿಲಿಟರಿ ಕಾರ್ಯಾಚರಣೆ ಪುನರಾರಂಭಿಸಲಾಗುವುದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಸಿದ್ದಾರೆ. ಹಿಜ್ಬುಲ್ಲಾ ಶಸ್ತ್ರಾಸ್ತ್ರ, ಮದ್ದುಗುಡ್ಡು, ರಾಕೆಟ್ ಬಳಸಿದರೆ ತಕ್ಕ ಉತ್ತರ ನೀಡುತ್ತೇವೆ ಎಂದಿದ್ದಾರೆ.
ಇತ್ತೀಚಿನ ವರದಿಯ ಪ್ರಕಾರ, ಕದನ ವಿರಾಮದ ನಡುವೆಯೂ ಇಸ್ರೇಲ್ ದಾಳಿ ಮುಂದುವರೆಸಿದೆ. ದಕ್ಷಿಣ ಬೈರುತ್‌ನ ದಹಿಯೆಹ್ ಪ್ರದೇಶ 20 ಹಿಜ್ಬುಲ್ಲಾ ನೆಲೆಗಳನ್ನು ಗುರಿಯಾಗಿಸಿ ರಾಕೆಟ್ ದಾಳಿ ನಡೆಸಿದೆ.
ಇದನ್ನೂ ಓದಿ : ಇಸ್ರೇಲ್-ಹಿಜ್ಬುಲ್ಲಾ ನಡುವೆ ಕದನ ವಿರಾಮ ಘೋಷಣೆ


