ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲಾತಿಯಡಿ ಉದ್ಯೋಗ ಪಡೆಯಲು ಹಿಂದೂ ಧರ್ಮಕ್ಕೆ ಮತಾಂತರವಾದ ಕ್ರೈಸ್ತ ಮಹಿಳೆಯ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ (ನ.26) ವಜಾಗೊಳಿಸಿದೆ ಎಂದು ವರದಿಯಾಗಿದೆ.
ತಮಿಳುನಾಡಿನ ಸಿ ಸೆಲ್ವರಾಣಿ ಎಂಬವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಮತ್ತು ಆರ್. ಮಹದೇವನ್ ಅವರ ಪೀಠ “ಮೀಸಲಾತಿ ಪ್ರಯೋಜನಗಳನ್ನು ಪಡೆಯುವ ಉದ್ದೇಶದಿಂದಲೇ ಮತಾಂತರಗೊಂಡರೆ ಅಥವಾ ಮರು ಮತಾಂತರವಾದರೆ, ಅದನ್ನು ಅನುಮತಿಸಲಾಗದು” ಎಂದಿದೆ.
ವರದಿಗಳ ಪ್ರಕಾರ, ಸೆಲ್ವರಾಣಿ ಹಿಂದೂ ಧರ್ಮದ ವಲ್ಲುವನ್ ಜಾತಿಗೆ ಸೇರಿದವರು ಎಂದು ಹೇಳಿಕೊಂಡು ಪರಿಶಿಷ್ಟ ಜಾತಿಯಡಿ ಮೀಸಲಾತಿ ಕೋರಿ ಗುಮಾಸ್ತೆ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ತಮಿಳುನಾಡು ಸರ್ಕಾರ ಅರ್ಜಿ ಪರಿಶೀಲಿಸಿದಾಗ, ಆಕೆ ಹುಟ್ಟಿನಿಂದ ಕ್ರೈಸ್ತ ಧರ್ಮಕ್ಕೆ ಸೇರಿದವರು ಎಂದು ತಿಳಿದು ಬಂದಿತ್ತು. ಆಕೆಯ ಪೋಷಕರ ವಿವಾಹವನ್ನು ಭಾರತೀಯ ಕ್ರೈಸ್ತ ವಿವಾಹ ಕಾಯ್ದೆಯಡಿ ನೋಂದಾಯಿಸಲಾಗಿದೆ. ಆಕೆಯ ಬ್ಯಾಪ್ಟಿಸಮ್ ಮತ್ತು ಚರ್ಚ್ ಹಾಜರಾತಿಯ ದಾಖಲೆಗಳು ಆಕೆ ಕ್ರೈಸ್ತ ಸಮುದಾಯಕ್ಕೆ ಸೇರಿದವರು ಎನ್ನುವುದಕ್ಕೆ ಪುರಾವೆ ನೀಡಿದ್ದವು.
ಗುಮಾಸ್ತೆ ಹುದ್ದೆಗೆ ಬೇರೊಬ್ಬರನ್ನು ನೇಮಕ ಮಾಡಲಾಗಿತ್ತು. ಅದನ್ನು ಪ್ರಶ್ನಿಸಿ ಸೆಲ್ವರಾಣಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ತಮಿಳುನಾಡು ಸರ್ಕಾರದ ಕ್ರಮವನ್ನು ಮದ್ರಾಸ್ ಹೈಕೋರ್ಟ್ 2023ರ ಜನವರಿಯಲ್ಲಿ ಎತ್ತಿಹಿಡಿದಿತ್ತು. ಅದನ್ನು ಪ್ರಶ್ನಿಸಿ ಸೆಲ್ವರಾಣಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. “ಸೆಲ್ವರಾಣಿ ಅವರು ಪರಿಶಿಷ್ಟ ಜಾತಿ ಸ್ಥಾನಮಾನವನ್ನು ಪಡೆಯಲು ಸಾಧ್ಯವಿಲ್ಲ” ಎಂದು ಪುನರುಚ್ಚರಿಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿದೆ.
“ಧರ್ಮವನ್ನು ಅಳವಡಿಸಿಕೊಳ್ಳದೇ, ಕೇವಲ ಮೀಸಲಾತಿಯ ಉದ್ದೇಶಕ್ಕಾಗಿ ಮತಾಂತರವಾಗುವುದನ್ನು ಅನುಮತಿಸಲಾಗುವುದಿಲ್ಲ. ಈ ರೀತಿಯ ಮೀಸಲಾತಿಯಿಂದ ಸಾಮಾಜಿಕ ನೀತಿಗೆ ಹಿನ್ನಡೆಯಾಗಲಿದೆ. ಸಾಂವಿಧಾನಿಕವಾಗಿ ಇದು ವಂಚನೆಗೆ ಕಾರಣವಾಗಲಿದೆ” ಎಂದು ಪೀಠವು ಉಲ್ಲೇಖಿಸಿದೆ.
“ಸೆಲ್ವರಾಣಿ ಅವರು ಹಿಂದೂ ಧರ್ಮಕ್ಕೆ ಮರುಮತಾಂತರಗೊಂಡಿದ್ದಕ್ಕೆ ಸಂಬಂಧಿಸಿದ ಯಾವುದೇ ಪುರಾವೆಗಳು ಪ್ರಕರಣದಲ್ಲಿ ಕಂಡುಬಂದಿಲ್ಲ. ಮರು ಮತಾಂತರವಾಗಬೇಕಾದರೆ ಸಮಾರಂಭಗಳು, ಸಾರ್ವಜನಿಕವಾಗಿ ಪ್ರಚಾರಗಳು ಅಥವಾ ಆರ್ಯ ಸಮಾಜದಂತಹ ಸಂಸ್ಥೆಗಳೊಂದಿಗೆ ಸಂಬಂಧದ ಅಗತ್ಯವಿದೆ. ಈ ಪ್ರಕರಣದಲ್ಲಿ ಅದು ಯಾವುದೂ ನಡೆದಂತಿಲ್ಲ” ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
“ಭಾರತದ ಜಾತ್ಯತೀತ ಚೌಕಟ್ಟಿನಲ್ಲಿ, ಪ್ರತಿಯೊಬ್ಬ ನಾಗರಿಕರಿಗೂ ಅವರ ಆಯ್ಕೆಯ ಧರ್ಮವನ್ನು ಆಚರಿಸಲು ಮತ್ತು ಪ್ರತಿಪಾದಿಸಲು ಹಕ್ಕಿದೆ. ಆದರೆ, ಧರ್ಮದ ಮೇಲಿನ ದ್ವಂದ್ವ ಆಯ್ಕೆಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ಮೇಲ್ಮನವಿದಾರರು ಬ್ಯಾಪ್ಟಿಸಮ್ ಅನುಸರಿಸಿದ ನಂತರ ಮೀಸಲಾತಿ ಪ್ರಯೋಜನಗಳಿಗಾಗಿ ಹಿಂದೂ ಎಂದು ಗುರುತಿಸಲು ಆಗುವುದಿಲ್ಲ” ಎಂದು ಪೀಠವು ಹೇಳಿದೆ.
ಸೆಲ್ವರಾಣಿ ಪರ ಹಿರಿಯ ವಕೀಲ ಎನ್.ಎಸ್ನ ಪ್ಪಿನೈ, ವಕೀಲರಾದ ವಿ.ಬಾಲಾಜಿ, ಅಸೈತಂಬಿ ಎಂ.ಎಸ್ಎಂ ಮತ್ತಿತರರು ವಾದ ಮಂಡಿಸಿದ್ದರು. ತಮಿಳುನಾಡು ಸರ್ಕಾರದ ಪರ ವಕೀಲರಾದ ಅರವಿಂದ್ ಎಸ್, ಅಕ್ಷಯ್ ಗುಪ್ತಾ, ಅಬ್ಬಾಸ್ ಬಿ ಮತ್ತು ಥರಾಣೆ ಎಸ್. ಹಾಜರಾಗಿದ್ದರು.
ಇದನ್ನೂ ಓದಿ : ‘ಸನಾತನ ಧರ್ಮ ಸಂರಕ್ಷಣಾ ಮಂಡಳಿ’ ಸ್ಥಾಪನೆಗೆ ಅರ್ಜಿ : ತಿರಸ್ಕರಿಸಿದ ದೆಹಲಿ ಹೈಕೋರ್ಟ್


