ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ 288 ಸ್ಥಾನಗಳ ಪೈಕಿ 230 ಸ್ಥಾನಗಳನ್ನು ಪಡೆದು ಅಭೂತಪೂರ್ವ ಜಯಗಳಿಸಿದರೂ, ಸಿಎಂ ಆಯ್ಕೆ ಇನ್ನೂ ಕಗ್ಗಂಟಾಗಿ ಉಳಿದಿದೆ.
‘ಮಹಾಯುತಿ’ ಮೈತ್ರಿಕೂಟದ ಪ್ರಮುಖ ಪಕ್ಷ ಶಿವಸೇನೆಯ ಮುಖ್ಯಸ್ಥ ಹಾಗೂ ನಿರ್ಗಮಿತ ಸಿಎಂ ಏಕನಾಥ್ ಶಿಂದೆ, ಆರಂಭದಲ್ಲಿ ಮತ್ತೊಮ್ಮೆ ಸಿಎಂ ಹುದ್ದೆಗೇರುವ ಉತ್ಸಾಹದಲ್ಲಿದ್ದರು. ಆದರೆ, ಆಂತರಿಕವಾಗಿ ಏನಾಯಿತೋ ಗೊತ್ತಿಲ್ಲ, “ಸಿಎಂ ಆಯ್ಕೆ ವಿಚಾರದಲ್ಲಿ ಬಿಜೆಪಿ ನಿರ್ಧಾರಕ್ಕೆ ಬದ್ದ” ಎಂದು ನಿನ್ನೆ (ನ.27) ಹೇಳಿದ್ದಾರೆ. ಈ ಮೂಲಕ ಶಿಂದೆ ಶಸ್ತ್ರ ತ್ಯಜಿಸಿದ್ದಾರೆ. ಏಕನಾಥ್ ಶಿಂದೆಯ ಎನ್‌ಸಿಪಿ 288 ಸ್ಥಾನಗಳ ಪೈಕಿ 57 ಸ್ಥಾನಗಳನ್ನು ಗೆದ್ದಿದೆ.
ಸಿಎಂ ಸ್ಥಾನದ ರೇಸ್‌ನಲ್ಲಿರುವ ಮತ್ತೊಬ್ಬ ನಾಯಕ ಬಿಜೆಪಿಯ ದೇವೇಂದ್ರ ಫಡ್ನವಿಸ್. ಈ ಹಿಂದೆ ಸಿಎಂ, ಪ್ರತಿಪಕ್ಷ ನಾಯಕರಾಗಿದ್ದ ಫಡ್ನವಿಸ್, ಕಳೆದ ಅವಧಿಯ ಶಿಂದೆ ಸರ್ಕಾರದಲ್ಲಿ ಅಜಿತ್ ಪವಾರ್ ಜೊತೆ ಉಪ ಮುಖ್ಯಮಂತ್ರಿಯಾಗಿದ್ದರು.
ಏಕನಾಥ್ ಶಿಂದೆ ಶಿವಸೇನೆಯಲ್ಲಿ ಬಂಡಾಯವೆದ್ದು ಸರ್ಕಾರ ರಚಿಸಲು ಮುಂದಾದಾಗ ಫಡ್ನವಿಸ್ ಸಿಎಂ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದರು. ಆದರೆ, ಸರ್ಕಾರ ರಚನೆಗೆ ಕಾರಣರಾದ ಏಕನಾಥ್ ಶಿಂದೆಗೆ ಸಿಎಂ ಹುದ್ದೆ ಕೊಡುವ ಸಲುವಾಗಿ ಬಿಜೆಪಿ ಹೈಕಮಾಂಡ್ ಫಡ್ನವಿಸ್ ಅನ್ನು ಡಿಸಿಎಂ ಹುದ್ದೆಗೆ ಒಪ್ಪಿಸಿತ್ತು. ಒಲ್ಲದ ಮನಸ್ಸಿನಿಂದ ಆ ಹುದ್ದೆಯಲ್ಲಿ ಮುಂದುವರೆದ ಫಡ್ನವಿಸ್, ಈ ಬಾರಿ ಸಿಎಂ ರೇಸ್‌ನ ಮುಂಚೂಣಿಯಲ್ಲಿದ್ದಾರೆ. ಅದಕ್ಕೆ ಬೆಂಬಲವಾಗಿ ಬಿಜೆಪಿ 288 ಸ್ಥಾನಗಳ ಪೈಕಿ 132 ಸ್ಥಾನಗಳನ್ನೂ ಪಡೆದಿದೆ.
ಏಕನಾಥ್ ಶಿಂದೆ ಸಿಎಂ ಆಯ್ಕೆ ಬಿಜೆಪಿಗೆ ಬಿಟ್ಟ ಮೇಲೆ ಫಡ್ನವಿಸ್ ಹಾದಿ ಸುಗಮವಾಗಿದೆ. ಇನ್ನೇನು ಸಿಎಂ ಹುದ್ದೆ ಫಿಕ್ಸ್ ಎಂಬ ಹಂತದಲ್ಲಿ ಫಡ್ನವಿಸ್ ಇದ್ದಾರೆ. ಆದರೆ, ಈ ನಡುವೆ ಅವರಿಗೊಂದು ತಡೆ ಎದುರಾಗಿದೆ.
ಹೊಸ ಮುಖ ಹುಡುಕಾಟದಲ್ಲಿ ಬಿಜೆಪಿ
ವರದಿಗಳ ಪ್ರಕಾರ, ಮಹಾರಾಷ್ಟ್ರದ ಸಿಎಂ ಹುದ್ದೆಗೆ ಹೊಸ ಮುಖದ ಹುಡುಕಾಟದಲ್ಲಿ ಬಿಜೆಪಿ ಹೈಕಮಾಂಡ್ ಇದೆ. ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಈಗಾಗಲೇ ಬಿಜೆಪಿ ಈ ಪ್ರಯೋಗ ಮಾಡಿದೆ. ಈ ವಿಷಯ ನಿಜವಾದರೆ ಫಡ್ನವಿಸ್ ಸಿಎಂ ಕನಸು ಭಗ್ನವಾಗಲಿದೆ. ಅನಿವಾರ್ಯವಾಗಿ ಹೈಕಮಾಂಡ್ ಮುಂದೆ ತಲೆಬಾಗಬೇಕಿದೆ.
ಸಿಎಂ ಹುದ್ದೆಗೆ ವಿದರ್ಭ ಮತ್ತು ಪಶ್ಚಿಮ ಮಹಾರಾಷ್ಟ್ರದ ನಾಯಕರನ್ನೇ ಹೆಕ್ಕಿ ತರುವ ಸಂಪ್ರದಾಯ ಕೊನೆಗೊಳಿಸಲು ಬಿಜೆಪಿ ಮುಂದಾಗಿದೆ. ಅಲ್ಲದೆ, ಈ ಬಾರಿಯ ಚುನಾವಣೆಯಲ್ಲಿ ಮಹಾಯುತಿಗೆ ದೊಡ್ಡ ಮಟ್ಟದ ಬೆಂಬಲ ನೀಡಿದ ಉತ್ತರ ಮಹಾರಾಷ್ಟ್ರಕ್ಕೆ ಪ್ರಾಶಸ್ತ್ಯ ನೀಡುವ ಯೋಚನೆಯಲ್ಲಿದೆ. ಉತ್ತರ ಮಹಾರಾಷ್ಟ್ರದ 47 ಸ್ಥಾನಗಳ ಪೈಕಿ ಮಹಾಯುತಿ 44 ಅನ್ನು ಗೆದ್ದುಕೊಂಡಿದೆ. ಈ ಲೆಕ್ಕಾಚಾರಗಳ ಪ್ರಕಾರ ನೋಡುವುದಾದರೆ ಮಹಾರಾಷ್ಟ್ರ ಸಿಎಂ ಕುರ್ಚಿಯಲ್ಲಿ ಹೊಸ ಮುಖವನ್ನು ಕಾಣುವ ಸಾಧ್ಯತೆ ಇದೆ.
ದೇವೇಂದ್ರ ಫಡ್ನವಿಸ್ ಅವರ ಆಪ್ತ ಮಾಜಿ ಸಚಿವ ಗಿರೀಶ್ ಮಹಾಜನ್, ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿಗೆ ಪ್ರಬಲ ನಾಯಕರಾಗಿರುವ ಕೇಂದ್ರ ಸಚಿವ ಅಮಿತ್ ಶಾ ಅವರ ನಿಕಟವರ್ತಿ, ಮಾಜಿ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಮತ್ತು ಕೆಲ ಮಹಿಳಾ ನಾಯಕರು ಹೊಸ ಮುಖಗಳ ಆಯ್ಕೆ ಪಟ್ಟಿಯಲ್ಲಿ ಇದ್ದಾರೆ ಎಂದೂ ವರದಿಯಾಗಿದೆ.
ಪ್ರಸ್ತುತ ಶಿವಸೇನೆ (ಶಿಂದೆ ಬಣ) ಏಕನಾಥ್ ಶಿಂದೆ ಅವರನ್ನು ಮತ್ತು ಎನ್‌ಸಿಪಿ (ಅಜಿತ್ ಬಣ) ಅಜಿತ್ ಪವಾರ್ ಅವರನ್ನು ತಮ್ಮ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದೆ. ಬಿಜೆಪಿ ಇನ್ನೂ ತಮ್ಮ ನಾಯಕ ಯಾರೆಂದು ಅಂತಿಮಗೊಳಿಸಿಲ್ಲ. ಎಲ್ಲಾ ಸರಿಯಾದರೆ ಹೊಸ ಸಿಎಂ ನವೆಂಬರ್ 30ರಂದು ಪ್ರಮಾಣವಚನ ಸ್ವೀಕರಿಸಬಹುದು.
ಇದನ್ನೂ ಓದಿ : ಅಜ್ಮೀರ್ ದರ್ಗಾ ಶಿವ ದೇವಾಲಯವೆಂದು ಅರ್ಜಿ : ವಿಚಾರಣೆಗೆ ಒಪ್ಪಿದ ಕೋರ್ಟ್


