“ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು” ಎಂಬ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಚಂದ್ರಶೇಖರ ನಾಥ ಸ್ವಾಮಿ ವಿರುದ್ದ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಾಮಿ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಸೈಯದ್ ಅಬ್ಬಾಸ್ ಎಂಬವರು ನೀಡಿರುವ ದೂರು ಆಧರಿಸಿ ಬಿಎನ್‌ಎಸ್ ಸೆಕ್ಷನ್ 299ರ ಅಡಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ನವೆಂಬರ್ 26ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ (ಫ್ರೀಡಂ ಪಾರ್ಕ್) ದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ್ದ ಚಂದ್ರಶೇಖರ ಸ್ವಾಮಿ “ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು, ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು. ಆಗ ಭಾರತೀಯರು ನೆಮ್ಮದಿಯಿಂದ ಇರಲು ಸಾಧ್ಯ” ಎಂಬ ಕೋಮುದ್ವೇಷದ ಹೇಳಿಕೆ ನೀಡಿದ್ದರು.
ವಿವಾದಾತ್ಮಕ ಹೇಳಿಕೆ ವಿರುದ್ದ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸ್ವಾಮಿ ಕ್ಷಮೆ ಕೋರಿದ್ದರು. “ಮುಸ್ಲಿಮರು ಕೂಡ ಈ ದೇಶದ ಪ್ರಜೆಗಳು. ಎಲ್ಲರಂತೆ ಅವರಿಗೂ ಮತದಾನದ ಹಕ್ಕಿದೆ. ನನ್ನ ಹೇಳಿಕೆಯಿಂದ ಮುಸ್ಲಿಂ ಸಮುದಾಯಕ್ಕೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದಿದ್ದರು.
ಇದನ್ನೂ ಓದಿ : ‘ಆಂತರಿಕ ಸಮಿತಿ’ ರಚಿಸುವಲ್ಲಿ ಫಿಲ್ಮ್ ಚೇಂಬರ್ ವಿಫಲ : ಜಿಲ್ಲಾಧಿಕಾರಿಗೆ ಪತ್ರ ಬರೆದ ಮಹಿಳಾ ಆಯೋಗ


