ಪ್ರಸಕ್ತ ಹಣಕಾಸು ವರ್ಷದ (2024-25) ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ದೇಶಿಯ ಆಂತರಿಕ ಉತ್ಪನ್ನ (ಜಿಡಿಪಿ) ಶೇ.5.4ರಷ್ಟು ದಾಖಲಾಗಿದ್ದು, ಎರಡು ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದಿದೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಈ ಕುರಿತು ಶುಕ್ರವಾರ (ನ.29) ವರದಿ ಬಿಡುಗಡೆ ಮಾಡಿದೆ. ತಯಾರಿಕಾ ಮತ್ತು ಗಣಿ ವಲಯಗಳ ಪ್ರಗತಿ ಗಣನೀಯವಾಗಿ ಕುಸಿದಿರುವುದು ಹಾಗೂ ಜನರು ಮಾಡುತ್ತಿರುವ ವೆಚ್ಚ ಕಡಿಮೆಯಾಗಿರುವುದು ಈ ಕುಸಿತಕ್ಕೆ ಕಾರಣ ಎಂದು ಎನ್‌ಎಸ್‌ಒ ಹೇಳಿದೆ.
2022-23ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ (ಅಕ್ಟೋಬರ್-ಡಿಸೆಂಬರ್) ಜಿಡಿಪಿ ಬೆಳವಣಿಗೆ ಶೇ.4.3ರಷ್ಟು ದಾಖಲಾಗಿತ್ತು. ಇದು ಈ ಹಿಂದಿನ ಕನಿಷ್ಠ ಮಟ್ಟವಾಗಿದೆ. 2023-24ರ ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 8.1ರಷ್ಟಿತ್ತು. ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ. 6.7ರಷ್ಟಿತ್ತು.
ಜನರು ಸರಕು ಮತ್ತು ಸೇವೆಗಳಿಗಾಗಿ ಮಾಡುವ ವೆಚ್ಚವನ್ನು ಸೂಚಿಸುವ ಖಾಸಗಿ ಬಳಕೆ ವೆಚ್ಚದ ಬೆಳವಣಿಗೆಯ ಪ್ರಮಾಣ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.6ಕ್ಕೆ ಇಳಿದಿದೆ. ಈ ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿ ಇದು ಶೇ. 7.4ರಷ್ಟಿತ್ತು.
ಕಳೆದ ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ತಯಾರಿಕಾ ವಲಯದ ಜಿವಿಎ ಪ್ರಗತಿ ಶೇ.14.3ರಷ್ಟಿತ್ತು. ಅದು ಈ ವರ್ಷ ಶೇ.2.2ಕ್ಕೆ ಇಳಿಕೆಯಾಗಿದೆ.
ನವ ಭಾರತದ ಕಠೋರ ಸತ್ಯ : ಕಾಂಗ್ರೆಸ್
ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಕುಸಿತ ಕಂಡಿರುವುದಕ್ಕೆ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದೆ. ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, “ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಕುಸಿದಿರುವುದು ಅತ್ಯಂತ ನಿರಾಶದಾಯಕವಾಗಿದೆ. ಪ್ರಧಾನಿ ಮತ್ತು ಅವರ ಬೆಂಬಲಿಗರು ಮಾಡುತ್ತಿರುವ ಪ್ರಚಾರ, ನೀಡುತ್ತಿರುವ ದೊಡ್ಡ ದೊಡ್ಡ ಹೇಳಿಕೆಗಳಿಗಿಂತ ವಾಸ್ತವತೆ ಸಂಪೂರ್ಣ ಭಿನ್ನವಾಗಿದೆ ಎಂಬುವುದನ್ನು ಇದು ತೋರಿಸುತ್ತದೆ ಎಂದಿದ್ದಾರೆ.
जुलाई से सितंबर 2024 के लिए अभी जारी किए गए GDP ग्रोथ के आंकड़े निराशावादी अनुमानों से भी बेहद कम हैं। इससे पता चलता है कि प्रधानमंत्री और उनके समर्थकों द्वारा किए जा रहे प्रचार-प्रसार और बड़े-बड़े दावों से वास्तविकता बिल्कुल अलग है।
GDP ग्रोथ रेट धीमी होकर 5.4% हो गई है। निजी…
— Jairam Ramesh (@Jairam_Ramesh) November 29, 2024
ಹಿಂದಿನ ಆರ್ಥಿಕ ಬೆಳವಣಿಗೆಯನ್ನು ‘ಮರು ಲೆಕ್ಕಾಚಾರ’ ಮಾಡಿದ ನಂತರವೂ, ಜೈವಿಕವಲ್ಲದ ಪ್ರಧಾನ ಮಂತ್ರಿಯ ಆರ್ಥಿಕ ಬೆಳವಣಿಗೆಯ ದಾಖಲೆಯು ಡಾ. ಮನಮೋಹನ್ ಸಿಂಗ್ ಅವರ ಅವಧಿಗಿಂತ ಕೆಟ್ಟದಾಗಿದೆ. ಇದು ‘ನವ ಭಾರತದ ಕಠೋರ ಸತ್ಯ’ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮಹಾರಾಷ್ಟ್ರ ಸೋಲಿನ ಬಗ್ಗೆ ಕಾಂಗ್ರೆಸ್ ಅಸಮಾಧಾನ; ಚುನಾವಣಾ ಆಯೋಗಕ್ಕೆ ‘ತುರ್ತು ಜ್ಞಾಪಕ ಪತ್ರ’


